ಕರ್ನಾಟಕ ಉಪಚುನಾವಣೆ ಫಲಿತಾಂಶ: ಆಡಳಿತಾರೂಢ ಕಾಂಗ್ರೆಸ್‌ ಕ್ಲೀನ್ ಸ್ವೀಪ್; ಎನ್ ಡಿಎಗೆ ಮುಖಭಂಗ

136 ಶಾಸಕರನ್ನು ಹೊಂದಿರುವ ಕಾಂಗ್ರೆಸ್, ಇನ್ನೂ ಎರಡು ಸ್ಥಾನಗಳನ್ನು ಸೇರಿಸುವ ಮೂಲಕ ತನ್ನ ಸ್ಥಾನವನ್ನು ಮತ್ತಷ್ಟು ಭದ್ರಗೊಳಿಸಿದೆ.
Congress candidates win Karnataka by election
ಕರ್ನಾಟಕ ಉಪ ಚುನಾವಣೆಯಲ್ಲಿ ಗೆದ್ದ ಕಾಂಗ್ರೆಸ್ ಅಭ್ಯರ್ಥಿಗಳು - ಯಾಸಿರ್ ಅಹಮದ್ ಖಾನ್ ಪಠಾಣ್, ಸಿ.ಪಿ.ಯೋಗೇಶ್ವರ, ಅನ್ನಪೂರ್ಣ
Updated on

ಬೆಂಗಳೂರು: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ತೀವ್ರ ಹಿನ್ನಡೆ ಕಂಡಿರುವ ಕಾಂಗ್ರೆಸ್ ಗೆ ಕರ್ನಾಟಕದ ಎಲ್ಲಾ ಮೂರು ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶ ಸಮಾಧಾನ ತಂದಿದೆ. ಸಂಡೂರು, ಶಿಗ್ಗಾಂವ್ ಮತ್ತು ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವು ಎಕ್ಸಿಟ್ ಪೋಲ್ ವರದಿಯನ್ನು ಹುಸಿಯಾಗಿಸಿದೆ.

ಮುಡಾ ಹಗರಣ, ಬಹುಕೋಟಿ ಮಹರ್ಷಿ ವಾಲ್ಮೀಕಿ ಎಸ್‌ಟಿ ಅಭಿವೃದ್ಧಿ ನಿಗಮದ ಹಗರಣ ಸೇರಿದಂತೆ ವಿವಾದಗಳಲ್ಲಿ ಸಿಲುಕಿದ್ದ ಆಡಳಿತ ಪಕ್ಷಕ್ಕೆ ವೈಯಕ್ತಿಕವಾಗಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭವಿಷ್ಯ ಈ ಉಪಚುನಾವಣೆ ಮೇಲೆ ಅವಲಂಬಿತವಾಗಿತ್ತು. 136 ಶಾಸಕರನ್ನು ಹೊಂದಿರುವ ಕಾಂಗ್ರೆಸ್, ಇನ್ನೂ ಎರಡು ಸ್ಥಾನಗಳನ್ನು ಸೇರಿಸುವ ಮೂಲಕ ತನ್ನ ಸ್ಥಾನವನ್ನು ಮತ್ತಷ್ಟು ಭದ್ರಗೊಳಿಸಿದೆ. ಬಿಜೆಪಿಯ ಭದ್ರಕೋಟೆ ಎಂದೇ ಪರಿಗಣಿಸಲ್ಪಟ್ಟಿರುವ ಮಧ್ಯ ಕರ್ನಾಟಕ ಭಾಗದ ಶಿಗ್ಗಾಂವ್ ಮತ್ತು ಹಳೇ ಮೈಸೂರು ಭಾಗದಲ್ಲಿ ಒಕ್ಕಲಿಗರ ಭದ್ರಕೋಟೆಯಾಗಿರುವ ಚನ್ನಪಟ್ಟಣ ಗೆದ್ದಿರುವುದು ಕಾಂಗ್ರೆಸ್ ಗೆ ಮತ್ತಷ್ಟು ಬಲ ಸಿಕ್ಕಿದೆ.

ಬಿಜೆಪಿಗೆ ಹಿನ್ನಡೆ: ಬಿಜೆಪಿ "ಒಡೆದ ಮನೆ"ಯಾಗಿದೆ ಎಂಬುದು ಸಾಕಷ್ಟು ಬಾರಿ ಕೇಳಿಬಂದಿರುವ ಮಾತು. ಅದರ ರಾಜ್ಯ ಮುಖ್ಯಸ್ಥ, ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರ ಪುತ್ರ ಬಿ ವೈ ವಿಜಯೇಂದ್ರ. ಚನ್ನಪಟ್ಟಣದಲ್ಲಿ ನಿಖಿಲ್ ಕುಮಾರಸ್ವಾಮಿ ಸೋಲನುಭವಿಸಿರುವುದು ಅವರ ತಂದೆ ಹಾಗೂ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿಯವರಿಗೆ ಆಘಾತ ತಂದಿದೆ. ಅದೇ ರೀತಿ ಶಿಗ್ಗಾಂವಿಯಲ್ಲಿ ಭರತ್ ಬೊಮ್ಮಾಯಿ ಅವರ ಸೋಲು ಅವರ ತಂದೆ ಹಾಗೂ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಹಾವೇರಿ ಸಂಸದರನ್ನು ಕುಗ್ಗಿಸಿದೆ.

ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷದ ಸಿ.ಪಿ.ಯೋಗೇಶ್ವರ ಅವರು ನಿಖಿಲ್ ಅವರನ್ನು ಸೋಲಿಸಿದರೆ, ಶಿಗ್ಗಾಂವಿಯಲ್ಲಿ ಯಾಸಿರ್ ಅಹಮದ್ ಖಾನ್ ಪಠಾಣ್ ಕಾಂಗ್ರೆಸ್ ಗೆ ಗೆಲುವು ತಂದುಕೊಟ್ಟಿದ್ದಾರೆ. ಕುಮಾರಸ್ವಾಮಿ ಮತ್ತು ಬಸವರಾಜ ಬೊಮ್ಮಾಯಿ ಇಬ್ಬರೂ ತಮ್ಮ ಪುತ್ರರ ಪರ ವ್ಯಾಪಕ ಪ್ರಚಾರ ನಡೆಸಿದ್ದರು. ಚನ್ನಪಟ್ಟಣದಲ್ಲಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ತಮ್ಮ ಮೊಮ್ಮಗ ನಿಖಿಲ್ ಪರ ಬಿಎಸ್ ಯಡಿಯೂರಪ್ಪ ಸೇರಿದಂತೆ ಎನ್‌ಡಿಎ ನಾಯಕರೊಂದಿಗೆ ಪ್ರಚಾರ ನಡೆಸಿದ್ದರು. ತಾವೇ ಅಭ್ಯರ್ಥಿ ಎಂದು ಪ್ರತಿಪಾದಿಸಿದ್ದ ಡಿಸಿಎಂ ಡಿ ಕೆ ಶಿವಕುಮಾರ್ ಮತ್ತು ಹೆಚ್ ಡಿ ಕುಮಾರಸ್ವಾಮಿ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದ್ದು, ಅಂತಿಮವಾಗಿ ಗೆಲುವು ಸಾಧಿಸುವಲ್ಲಿ ಡಿ ಕೆ ಶಿವಕುಮಾರ್ ಯಶಸ್ವಿಯಾಗಿದ್ದಾರೆ. ಎನ್‌ಡಿಎ ಅಭ್ಯರ್ಥಿಯಾಗುವ ಪ್ರಯತ್ನ ವಿಫಲವಾದ ನಂತರ ಯೋಗೀಶ್ವರ್ ಅವರನ್ನು ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಶಿವಕುಮಾರ್ ಅವರ ನಡೆ ಫಲಿಸಿತು. ಅವರು ತಮ್ಮ ಕಿರಿಯ ಸಹೋದರ ಮತ್ತು ಬೆಂಗಳೂರು ಗ್ರಾಮಾಂತರ ಮಾಜಿ ಸಂಸದ ಡಿ ಕೆ ಸುರೇಶ್ ಅವರನ್ನು ಕಣಕ್ಕಿಳಿಸುವುದರಿಂದ ಹಿಂದೆ ಸರಿದರು.

ಬಳ್ಳಾರಿ ಸಂಸದ ಇ ತುಕಾರಾಂ ಅವರ ಪತ್ನಿ ಅನ್ನಪೂರ್ಣ ಅವರು ಬಿಜೆಪಿಯ ಬಂಗಾರು ಹನುಮಂತು ಅವರನ್ನು ಸೋಲಿಸಿ ಸಂಡೂರು ಕ್ಷೇತ್ರವನ್ನು ಕಾಂಗ್ರೆಸ್ ಉಳಿಸಿಕೊಂಡಿದೆ.ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು ಮತ್ತು ದಲಿತರು-ಅಹಿಂದ ಎಲ್ಲಾ ಮೂರು ಸ್ಥಾನಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ಒಲವು ತೋರಿಸಿದೆ.

2023ರ ವಿಧಾನಸಭಾ ಚುನಾವಣೆಯಲ್ಲಿ ಸಂಡೂರು ಕ್ಷೇತ್ರ ಗೆದ್ದುಕೊಂಡಿದ್ದ ಕಾಂಗ್ರೆಸ್ ಪಕ್ಷವು ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳಿಂದ ಕ್ರಮವಾಗಿ ಶಿಗ್ಗಾಂವ್ ಮತ್ತು ಚನ್ನಪಟ್ಟಣವನ್ನು ಉಪ ಚುನಾವಣೆಯಲ್ಲಿ ಕಸಿದುಕೊಳ್ಳುವುದರ ಜೊತೆಗೆ ಅದನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡಿದ್ದ ಬಿಜೆಪಿ ಮತ್ತು ಜೆಡಿಎಸ್ ಸೇರಿದಂತೆ ಎನ್‌ಡಿಎಗೆ ಈ ಬಾರಿ ತೀವ್ರ ಹಿನ್ನಡೆಯಾಗಿದೆ. ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಚನ್ನಪಟ್ಟಣದಲ್ಲಿ ಸೋಲುವ ಮೂಲಕ ಹ್ಯಾಟ್ರಿಕ್ ಸೋಲನ್ನು ರಾಜಕೀಯದಲ್ಲಿ ಕಂಡಿದ್ದಾರೆ. ಈ ಹಿಂದೆ 2019ರ ಲೋಕಸಭೆ ಚುನಾವಣೆಯಲ್ಲಿ ಮಂಡ್ಯದಿಂದ, 2023ರ ವಿಧಾನಸಭೆ ಚುನಾವಣೆಯಲ್ಲಿ ರಾಮನಗರದಿಂದ ಸೋಲು ಕಂಡಿದ್ದರು. ಈ ಬಾರಿಯ ಸೋಲು ನಿಖಿಲ್ ಕುಮಾರಸ್ವಾಮಿ ಚುನಾವಣಾ ರಾಜಕೀಯ ಅಪಾಯದಲ್ಲಿರುವುದನ್ನು ತೋರಿಸುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com