ಬೆಂಗಳೂರು: ತೀವ್ರ ಕುತೂಹಲ ಮೂಡಿಸಿದ್ದ ರಾಜ್ಯದ ಮೂರು ಕ್ಷೇತ್ರಗಳ ಉಪ ಚುನಾವಣೆಯ ಫಲಿತಾಂಶ ಬಹುತೇಕ ಪ್ರಕಟವಾಗಿದ್ದು, ಎಲ್ಲಾ ಮೂರು ಕ್ಷೇತ್ರಗಳಲ್ಲೂ ಆಡಳಿತರೂಢ ಕಾಂಗ್ರೆಸ್ ಗೆಲುವು ಸಾಧಿಸಿದೆ.
ಶಿಗ್ಗಾಂವಿ, ಸಂಡೂರು ಹಾಗೂ ಚನ್ನಪಟ್ಟಣ ಮೂರು ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆಲುವಿನತ್ತ ಸಾಗುತ್ತಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಸಂಸದ ಡಿಕೆ ಸುರೇಶ್ ಅವರು, ಈ ಚುನಾವಣೆ ಮೂಲಕ ಕಲ್ಯಾಣ ಕರ್ನಾಟಕ, ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕದ ಮತದಾರಾರು ಪ್ರತಿಪಕ್ಷಗಳಿಗೆ ಸ್ಪಷ್ಟ ಸಂದೇಶ ನೀಡಿದ್ದಾರೆ.
ಇದೇ ವೇಳೆ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಕರಿಯಾ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಡಿಕೆ ಸುರೇಶ್, ನಾನು ಈ ಮೊದಲೇ ಹೇಳಿದ್ದೆ. ಜಮೀರ್ ಅಹ್ನದ್ ಖಾನ್ ಹೇಳಿಕೆ ಯಾವುದೇ ಪರಿಣಾಣ ಬೀರುವುದಿಲ್ಲ ಅಂತ. ಜಮೀರ್ ಇಂತಹ ಹೇಳಿಕೆ ನೀಡಿರುವುದು ಇದೇ ಮೊದಲಲ್ಲ. ಜನಾಂಗೀಯ ನಿಂದನೆ ಎಂದೆಲ್ಲಾ ಬಿಂಬಿಸಿದ್ದು ಮಾಧ್ಯಮಗಳು. ನೀವು ಒಂದು ಅಭ್ಯರ್ಥಿಯ ಪರವಾಗಿ ಇದನ್ನು ದೊಡ್ಡ ವಿಚಾರವಾಗಿ ಬಿಂಬಿಸಿದಿರಿ ಎಂದು ಮಾಧ್ಯಮಗಳ ವಿರುದ್ಧವೇ ವಾಗ್ದಾಳಿ ನಡೆಸಿದರು.
ಚನ್ನಪಟ್ಟಣ ಮಾತ್ರವಲ್ಲ. ಮೂರು ಕ್ಷೇತ್ರಗಳಲ್ಲೂ ನಾವು ಗೆದ್ದೆ ಗೆಲ್ಲುತ್ತೇವೆ ಎಂದು ಮೊದಲೇ ಹೇಳಿದ್ದೇವೆ. ಅದರಂತೆ ನಮ್ಮ ರಾಜ್ಯ ಸರ್ಕಾರದ ಅಭಿವೃದ್ಧಿ ಯೋಜನೆಗಳನ್ನು ನೋಡಿ ಜನ ನಮ್ಮ ಕೈ ಹಿಡಿದಿದ್ದಾರೆ. ಬಿಜೆಪಿಯವರು ಇನ್ನಾದರೂ ರಾಜಕೀಯಕ್ಕಾಗಿ ನಮ್ಮ ಸರ್ಕಾರದ ವಿರುದ್ಧ ಮತ್ತು ಮುಖ್ಯಮಂತ್ರಿಗಳ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುವುದನ್ನು ನಿಲ್ಲಿಸಬೇಕು ಎಂದು ಪ್ರತಿಪಕ್ಷಗಳಿಗೆ ತಿರುಗೇಟು ನೀಡಿದರು.
Advertisement