ಬೀದರ್: ರಾಜ್ಯ ಬಿಜೆಪಿ ನಾಯಕರು ವಕ್ಫ್ ವಿರುದ್ಧ ಸಮರ ಸಾರಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಬಳಿಕ ರೆಬಲ್ಸ್ ನಾಯಕ, ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದಲ್ಲಿ ವಕ್ಫ್ ಹಟಾವೋ ದೇಶ ಬಚಾವ್ ಹೋರಾಟಕ್ಕೆ ಸೋಮವಾರ ಚಾಲನೆ ನೀಡಲಾಗಿದೆ.
ಇಂದು ಉತ್ತರ ಕರ್ನಾಟಕದ ಬೀದರ್‌ನಿಂದ ದಕ್ಷಿಣ ಕರ್ನಾಟಕದ ಚಾಮರಾಜನಗರದವರೆಗೆ ಒಂದು ತಿಂಗಳ ಕಾಲ ಜನಜಾಗೃತಿ ಅಭಿಯಾನ ಆರಂಭಿಸಿದ್ದು, ಡಿಸೆಂಬರ್ 25 ರಂದು ಬೆಂಗಳೂರಿನಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಯತ್ನಾಳ್ ತಿಳಿಸಿದ್ದಾರೆ.
ಯತ್ನಾಳ್ ನೇತೃತ್ವದ ಪಾಳಯದಲ್ಲಿ ಶಾಸಕ ರಮೇಶ ಜಾರಕಿಹೊಳಿ, ಸಂಸದ ಜಿ.ಎಂ.ಸಿದ್ದೇಶ್ವರ, ಮಾಜಿ ಸಚಿವ ಅರವಿಂದ ಲಿಂಬಾವಳಿ, ಮಾಜಿ ಶಾಸಕ ಮಧು ಬಂಗಾರಪ್ಪ ಸೇರಿದಂತೆ ಬಿಜೆಪಿಯ 12 ಹಿರಿಯ ನಾಯಕರು ಭಾಗವಹಿಸುತ್ತಿದ್ದಾರೆ.
ಜೆಡಿಎಸ್‌ನ ಹಿರಿಯ ಮುಖಂಡ ಬಂಡೆಪ್ಪ ಕಾಶೆಂಪೂರ್ ಕೂಡ ಕೇಸರಿ ಸ್ಕಾರ್ಫ್ ಧರಿಸಿ ಈ ಮೆರವಣಿಗೆಯಲ್ಲಿ ಪಾಲ್ಗೊಂಡರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಯತ್ನಾಳ್, ವಕ್ಫ್ ಕಾನೂನು ಇಡೀ ಭಾರತವನ್ನು ಪಾಕಿಸ್ತಾನವನ್ನಾಗಿ ಪರಿವರ್ತಿಸುವ ಪ್ರಯತ್ನವಾಗಿದೆ ಮತ್ತು ಇದರ ವಿರುದ್ಧ ಹೋರಾಡಬೇಕು ಎಂದು ಕರೆ ನೀಡಿದರು.
ಭಾರತ ಸರ್ಕಾರದ ಲೆಕ್ಕಪತ್ರದಲ್ಲಿ 9 ಲಕ್ಷ 50 ಸಾವಿರ ಆಸ್ತಿ ಇದೆ. ಆದರೆ ಇದರಲ್ಲಿ 38 ಲಕ್ಷ ಎಕರೆ ವಕ್ಫ್ ಆಸ್ತಿ ಇದೆ ಅಂತಾ ಬೇಡಿಕೆ ಇಟ್ಟಿದ್ದಾರೆ. ನಾಲ್ಕು ಪಾಕಿಸ್ತಾನ ಆಗುವಷ್ಟು ಆಸ್ತಿಗೆ ಬೇಡಿಕೆ ಇಟ್ಟಿದ್ದಾರೆ. ಆದರೆ ವಕ್ಫ್ ಬಗ್ಗೆ ಹಳ್ಳಿ-ಹಳ್ಳಿಗೂ ಹೋಗಿ ಕರಾಳ ಶಾಸನದ ಬಗ್ಗೆ ಜನರಲ್ಲಿ ಜಾಗೃತಿ ಮಾಡುವ ಅವಶ್ಯಕತೆ ಇದೆ ಎಂದು ಯತ್ನಾಳ್ ಹೇಳಿದ್ದಾರೆ.
ವಿಧಾನಸಭೆ ಉಪ ಚುನಾವಣೆಗೂ ಮುನ್ನ ಬಿವೈ ವಿಜಯೇಂದ್ರ ಅವರು ಮೂರು ತಂಡಗಳನ್ನು ರಚನೆ ಮಾಡಿ ರಾಜ್ಯಾದ್ಯಂತ ವಕ್ಫ್ ವಿರುದ್ಧ ಪ್ರತಿಭಟನೆ ನಡೆಸಿದ್ದರು.
ವಿಜಯೇಂದ್ರ ಅವರ ತಂಡ ವಿಜಯಪುರಕ್ಕೆ ಭೇಟಿ ನೀಡಿದಾಗ ಯತ್ನಾಳ್ ಮತ್ತು ಅವರ ಪಾಳೆಯವು ಪ್ರತಿಭಟನೆಯಲ್ಲಿ ಭಾಗವಹಿಸಿರಲಿಲ್ಲ.
Advertisement