ಮೈಸೂರು: ಎಚ್.ಡಿ.ಕುಮಾರಸ್ವಾಮಿ ಬಳಿ ನನ್ನ ಮಾತೇನೂ ನಡೆಯುವುದಿಲ್ಲ. ಹೀಗಿದ್ದರೂ, ಶಾಸಕ ಜಿ.ಟಿ.ದೇವೇಗೌಡ ಅವರಿಗೆ ನನ್ನಿಂದ ರಾಜಕೀಯವಾಗಿ ತೊಂದರೆ ಆಗಿದೆ ಎಂದು ಭಾವಿಸಿದ್ದರೆ ಚಾಮುಂಡಿಬೆಟ್ಟಕ್ಕೆ ಬರಲಿ, ಅಲ್ಲಿ ಪ್ರಮಾಣ ಮಾಡಲು ನಾನು ಸಿದ್ಧ ಎಂದು ಮಾಜಿ ಸಚಿವ ಸಾ.ರಾ. ಮಹೇಶ್ ತಿಳಿಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ಯಾರಿಗೂ ತೊಂದರೆ ಕೊಟ್ಟು ರಾಜಕೀಯ ಮಾಡುವ ಅಗತ್ಯ ನನಗಿಲ್ಲ. ಈಗಾಗಲೇ ರಾಜಕೀಯ ಚಟುವಟಿಕೆಗಳಿಂದ ದೂರವಿದ್ದೇನೆ. ಜನರು ಸೋಲಿಸಿ ವಿರಾಮ ಕೊಟ್ಟ ಮೇಲೆ ನಾನು ಜಾಸ್ತಿ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಕುಮಾರಸ್ವಾಮಿ ಅವರೊಂದಿಗೆ ಇದ್ದೇ ಇರುತ್ತೇನೆ ಎಂದರು. ನಮ್ಮ ನಾಯಕರು ಅನುಮತಿ ಕೊಟ್ಟರೆ ಎಲ್ಲದರ ಬಗ್ಗೆಯೂ ಮುಕ್ತವಾಗಿ ಮಾತನಾಡಲು ಸಿದ್ಧವಿದ್ದೇನೆ. ಜಿಟಿಡಿ ಅವರನ್ನು ಕೋರ್ ಕಮಿಟಿ ಅಧ್ಯಕ್ಷರನ್ನಾಗಿ ಮಾಡಲಾಯಿತು. ಶಾಸಕಾಂಗ ಪಕ್ಷದ ನಾಯಕನ ಸ್ಥಾನ ತಪ್ಪಿಸಿದ್ದು ಯಾರೆಂದು ತಿಳಿಸಿದರೆ ಅವರನ್ನು ದೂರವಿಡುವ ಕೆಲಸವನ್ನು ಕುಮಾರಸ್ವಾಮಿ ಜೊತೆ ಮಾತನಾಡಿ ಮಾಡೋಣ ಎಂದು ಹೇಳಿದರು. ಚನ್ನಪಟ್ಟಣ ಉಪ ಚುನಾವಣೆ ಪ್ರಚಾರಕ್ಕೆ ಬರುವಂತೆ ಜಿ.ಟಿ. ದೇವೇಗೌಡರನ್ನು ವರಿಷ್ಠ ದೇವೇಗೌಡರೇ ಫೋನ್ ಮಾಡಿ ಕರೆದಿದ್ದರು. ನಾವು ಚುನಾವಣೆಗೂ ಮುನ್ನ ತಯಾರಿ ಮಾಡಿಕೊಂಡಿರಲಿಲ್ಲ. ನಾನಾ ಕಾರಣದಿಂದ ಸೋಲಾಗಿದೆ ಎಂದು ಹೇಳಿದರು.
ಇನ್ನೂ ಇದಕ್ಕೂ ಮುನ್ನ ಮಾತನಾಡಿದ್ದ ಜಿಟಿ ದೇವೇಗೌಡ ತಾವು ಕಾಂಗ್ರೆಸ್ ಸೇರುತ್ತಾರೆಯೇ ಎಂಬ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಸ್ವತಃ ರಾಹುಲ್ ಗಾಂಧಿ ಮನೆಗೆ ಬರಲು ಡೇಟ್ ಫಿಕ್ಸ್ ಆಗಿತ್ತು ಎಂದಿದ್ದಾರೆ. ಆದ್ರೆ ದೊಡ್ಡಗೌಡರ ಮೇಲಿನ ಗೌರವದಿಂದ ಸುಮ್ಮನಾದೆ ಅಂತಲೂ ಜಿಟಿಡಿ ಹೇಳಿದ್ದಾರೆ. ಇನ್ನು ಹೆಚ್‌ಡಿ ಕುಮಾರಸ್ವಾಮಿ ಹಾಗೂ ತಮ್ಮ ನಡುವಿನ ಸಂಬಂಧ ಹಳಸಿರೋ ಬಗ್ಗೆಯೂ ಜಿಟಿ ದೇವೇಗೌಡ ಪ್ರತಿಕ್ರಿಯಿಸಿದ್ದಾರೆ. ನನಗೆ ಹೆಚ್‌ಡಿ ಕುಮಾರಸ್ವಾಮಿ ಮೇಲೆ ಮುನಿಸಿರುವುದು ಸತ್ಯ ಅಂತ ಜಿಟಿಡಿ ಹೇಳಿದ್ದಾರೆ. ಸಾರಾ ಮಹೇಶ್ ವಿಚಾರದಲ್ಲಿ ನನಗೆ ಬೇಸರವಿದೆ ಅಂತ ಅವರು ಹೇಳಿದ್ರು. ಆದ್ರೆ ಯಾವ ವಿಚಾರಕ್ಕೆ ಬೇಸರ ಇದೆ ಅಂತ ಜಿಟಿಡಿ ಹೇಳಿಲ್ಲ.
Advertisement