ಬೆಂಗಳೂರು/ನವದೆಹಲಿ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಬದಲಾವಣೆ ಕುರಿತ ಹೇಳಿಕೆಗಳಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಮಾಧ್ಯಮಗಳಲ್ಲಿ ರಾಜಕೀಯ ಚರ್ಚೆ ಮಾಡುವುದು ಒಳ್ಳೆಯದಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಿಗೆ ಶುಕ್ರವಾರ ತಿರುಗೇಟು ನೀಡಿದ್ದಾರೆ.
ಇಂದು ದೆಹಲಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಗಾದಿಗೆ ನಾನೂ ಆಕಾಂಕ್ಷಿ ಎನ್ನುವ ಸಚಿವರಾದ ಕೆ.ಎನ್. ರಾಜಣ್ಣ ಹಾಗೂ ಸತೀಶ್ ಜಾರಕಿಹೊಳಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿಸಿಎಂ ಡಿಕೆ ಶಿವಕುಮಾರ್ ಅವರು, ಮಾಧ್ಯಮಗಳ ಮುಂದೆ ರಾಜಕೀಯ ಚರ್ಚೆ ಮಾಡುವುದು ಯಾವ ಪಕ್ಷದವರಿಗೂ ಹಾಗೂ ಯಾರಿಗೂ ಸೂಕ್ತವಾದುದಲ್ಲ" ಎಂದರು.
ಸಚಿವ ಸಂಪುಟ ಪುನಾರಚನೆ ಸಾಧ್ಯತೆಯ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ, ಸಚಿವ ಸಂಪುಟ ವಿಸ್ತರಣೆ ಮಾಡುವ ಯಾವುದೇ ಸಂದರ್ಭ ಬಂದಿಲ್ಲ. ಕೇವಲ ಒಂದು ಸಚಿವ ಸ್ಥಾನ ಖಾಲಿ ಇದ್ದು, ಅದನ್ನು ತುಂಬುವ ಬಗ್ಗೆ ಚರ್ಚೆ ನಡೆದಿಲ್ಲ ಎಂದರು.
ಸಿಎಂ ಸಿದ್ದರಾಮಯ್ಯ ಅಭಿಮಾನಿಗಳು ಡಿ.5ರಂದು ಹಾಸನದಲ್ಲಿ ಭರ್ಜರಿ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಆದರೆ, ಪಕ್ಷವನ್ನೂ ದೂರವಿಟ್ಟು ಸಮಾವೇಶ ಮಾಡುವ ಉದ್ದೇಶ ಏನು? ಸ್ವಾಭಿಮಾನ ಸಮಾವೇಶವನ್ನು ಪಕ್ಷದ ವೇದಿಕೆಯಲ್ಲಿಯೇ ಮಾಡಬೇಕು ಎಂದು ಎಐಸಿಸಿಗೆ ಪತ್ರ ಬರೆದಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಿಕೆಶಿ, ಪತ್ರದ ಬಗ್ಗೆ ನನಗೆ ಗೊತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಾಸನದಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದ್ದಾರೆ. ಅದನ್ನು ನನ್ನ ಗಮನಕ್ಕೆ ತಂದಿದ್ದಾರೆ. ಪಕ್ಷದ ಉಪಸ್ಥಿತಿ ಯಾವಾಗಲೂ ಇರುತ್ತದೆ ಎಂದರು.
ಸಿದ್ದರಾಮಯ್ಯ ಅವರ ಬೆಂಬಲಿಗರು ಆಯೋಜಿಸಿರುವ ಹಾಸನ ಸಮಾವೇಶ ಪಕ್ಷದ ಕಾರ್ಯಕ್ರಮದಂತೆ ಕಾಣುತ್ತಿಲ್ಲ ಮತ್ತು ಕಾಂಗ್ರೆಸ್ ಚಿಹ್ನೆ ಬಳಸಲಾಗುತ್ತಿಲ್ಲ ಎಂದು ಪತ್ರದಲ್ಲಿ ಹೇಳಲಾಗಿದೆ.
ಇನ್ನು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ಭೇಟಿಯ ಬಗ್ಗೆ ಕೇಳಿದಾಗ, “ಬೆಳಗಾವಿಯಲ್ಲಿ ನಡೆದಿದ್ದ ಕಾಂಗ್ರೆಸ್ ಅಧಿವೇಶನದಲ್ಲಿ ಪಕ್ಷದ ಅಧ್ಯಕ್ಷರಾಗಿ ಮಹಾತ್ಮಾ ಗಾಂಧಿಯವರು ಅಧಿಕಾರವಹಿಸಿಕೊಂಡು ನೂರು ವರ್ಷಗಳಾಗಿದೆ. ಈ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಚರ್ಚಿಸಲು ಅವರನ್ನು ಭೇಟಿಯಾಗಿದ್ದೆ ಎಂದು ಸ್ಪಷ್ಟಪಡಿಸಿದರು.
Advertisement