ಮೈಸೂರು: ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹಿಂದುತ್ವದ ಮುಖವಾಡ ಧರಿಸಿದ್ದಾರೆ. ಅವರ ಹರಕು ಬಾಯಿಯಿಂದ ಬಿಜೆಪಿಗೆ ಚುನಾವಣೆಯಲ್ಲಿ ಸೋಲಾಯಿತು. ಉಪ ಚುನಾವಣೆ ಸೋಲಿಗೆ ಅವರೇ ಕಾರಣ. ವಿಜಯಪುರದ ಪ್ರಭಾವಿ ಸಚಿವರ ಜೊತೆಗೆ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದ್ದಾರೆ ಎಂದು ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ ಆರೋಪಿಸಿದ್ದಾರೆ.
ಮೈಸೂರಿನಲ್ಲಿಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಬಣದಿಂದ ಸುದ್ದಿಗೋಷ್ಠಿ ಹಮ್ಮಿಕೊಳ್ಳಲಾಗಿತ್ತು. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಮಾಜಿ ಸಚಿವ ರೇಣುಕಾಚಾರ್ಯ, ಶಾಸಕ ಬಸನಗೌಡ ಪಾಟೀಲ ಯತ್ನಾಳ ಕಾಂಗ್ರೆಸ್‌ನಿಂದ ಸುಪಾರಿ ಪಡೆದು ಬಿಜೆಪಿ ವಿರುದ್ಧವೇ ಹೋರಾಟ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.
ಕಾಂಗ್ರೆಸ್ ಜೊತೆ ಮ್ಯಾಚ್ ಫಿಕ್ಸಿಂಗ್ಸ್ ಮಾಡಿಕೊಂಡು ಮುಡಾ ಪಾದಯಾತ್ರೆಗೆ ಬರಲಿಲ್ಲ. ಭ್ರಷ್ಟಾಚಾರವನ್ನು ಪರೋಕ್ಷವಾಗಿ ಬೆಂಬಲಿಸಿದ್ದಾರೆ. ಸಿದ್ದರಾಮಯ್ಯ ಅವರಿಗೆ ಬೆಂಬಲ ನೀಡುತ್ತಿದ್ದಾರೆ. ಬ್ಲಾಕ್‌ಮೇಲ್ ರಾಜಕಾರಣ ಮಾಡುತ್ತಿದ್ದಾರೆ. ಈ ರೀತಿಯ ಬ್ಲಾಕ್ ಮೇಲ್ ರಾಜಕಾರಣ ನಡೆಯದು ಎಂದರು. ಯಡಿಯೂರಪ್ಪ ಅವರಿಗೆ ಇಂತಹ ಕೆಲವರು ಶಕುನಿಗಳು, ಮೀರ್ ಸಾಧಕರು ಕಾಟ ಕೊಡುತ್ತಲೇ ಇದ್ದಾರೆ. ವಿಜಯೇಂದ್ರ ಅವರನ್ನು ರಾಜ್ಯ ಅಧ್ಯಕ್ಷರಾಗಿ ಮಾಡಿದ್ದು ಬಿಜೆಪಿ ಹೈಕಮಾಂಡ್ ಹೊರತು ಯಡಿಯೂರಪ್ಪ ಅಲ್ಲ. ಹೀಗಾಗಿ ಅವರಿಗೆ ಬೈಯ್ದರೆ ಹೈಕಮಾಂಡ್ ಗೆ ಬೈಯ್ದಂತೆ ಎಂದರು.
ಯತ್ನಾಳ ವಿರುದ್ಧ ಮಾತನಾಡಿದ್ದಕ್ಕೆ ನಿನ್ನೆಯಿಂದ ಬೆದರಿಕೆಗಳು ಬರುತ್ತಿವೆ. ಆದರೆ ನಾನು ಯಾವುದಕ್ಕೂ ಹೆದರುವುದಿಲ್ಲ' ಎಂದರು. ನಾವು ಬಣ ರಾಜಕೀಯ ಮಾಡುತ್ತಿಲ್ಲ. ವಿಜಯೇಂದ್ರ ಒಂದು ಶಕ್ತಿ. ಯತ್ನಾಳರದ್ದು ನಾಲ್ಕು ಜನರ ಒಂದು ಗುಂಪು ಅಷ್ಟೇ. ತಾಯಿ ಚಾಮುಂಡಿ ಇಂತಹ ಆಂತರಿಕ ದುಷ್ಟರನ್ನು ಸಂಹಾರ ಮಾಡಲಿ' ಎಂದರು. ಸುದ್ದಿಗೋಷ್ಠಿ ನಡುವೆ ʻಯತ್ನಾಳ್ ಉಚ್ಚಾಟಿಸಿ. ಬರೀ ಸುದ್ದಿಗೋಷ್ಠಿ ಮಾಡಿ ಏನೂ ಪ್ರಯೋಜನವಿಲ್ಲʼ ಎಂದು ಕಾರ್ಯಕರ್ತರು ಗದ್ದಲ ಎಬ್ಬಿಸಿದರು. ಯತ್ನಾಳ್ ವಿರುದ್ಧ ಧಿಕ್ಕಾರ ಕೂಗುತ್ತಾ, ಮೊದಲು ಅವನನ್ನ ಪಕ್ಷದಿಂದ ಕಿತ್ತೊಗೆಯಿರಿ ಎಂದು ಎಂದು ಆಕ್ರೋಶ ಹೊರಹಾಕಿದ್ದಾರೆ.
Advertisement