ನವದೆಹಲಿ: ಕರ್ನಾಟಕದಲ್ಲಿ ಮುಡಾ ನಿವೇಶನ ಹಂಚಿಕೆ ವಿವಾದದ ನಡುವೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಟುಂಬ ಬೆಂಗಳೂರಿನಲ್ಲಿ ನಡೆಸುತ್ತಿರುವ ಟ್ರಸ್ಟ್ ಗೆ ಜಮೀನು ಹಂಚಿಕೆಯನ್ನು ಬಿಜೆಪಿ ಮಂಗಳವಾರ ಪ್ರಶ್ನಿಸಿದೆ. ಕಾಂಗ್ರೆಸ್ ಅಧ್ಯಕ್ಷರ ಕುಟುಂಬ ಜಮೀನು ಕೊಳ್ಳೆ ಹೊಡೆಯುವುದರಲ್ಲಿ ತೊಡಗಿದೆ ಎಂದು ಆರೋಪಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ನಾಯಕ ರವಿಶಂಕರ್ ಪ್ರಸಾದ್, ಕರ್ನಾಟಕದಲ್ಲಿನ ಕಾಂಗ್ರೆಸ್ ಸರ್ಕಾರ ಖರ್ಗೆ ಕುಟುಂಬ ನಡೆಸುತ್ತಿರುವ ಸಿದ್ದಾರ್ಥ ವಿಹಾರ ಟ್ರಸ್ಟ್ ಗೆ ಸಂಶಯಾಸ್ಪದ ರೀತಿಯಲ್ಲಿ 5 ಎಕರೆ ಜಮೀನು ಮಂಜೂರು ಮಾಡಿದೆ. ಈ ವಿವಾದ ಕುರಿತ ಪ್ರಶ್ನೆಗಳಿಗೆ ಕಾಂಗ್ರೆಸ್ ಅಧ್ಯಕ್ಷರು ಪಾರದರ್ಶಕ ಹಾಗೂ ಪ್ರಾಮಾಣಿಕವಾಗಿ ಪ್ರತಿಕ್ರಿಯೆ ನೀಡಬೇಕು ಎಂದು ಒತ್ತಾಯಿಸಿದರು.
ಸಂಶೋಧನಾ ಮತ್ತು ಅಭಿವೃದ್ಧಿ ಸೌಲಭ್ಯ ಸ್ಥಾಪನೆಗಾಗಿ ಬೆಂಗಳೂರಿನ ಹೈಟೆಕ್ ರಕ್ಷಣಾ ಪ್ರದೇಶದಲ್ಲಿ ಟ್ರಸ್ಟ್ ಗೆ ಸಿದ್ದರಾಮಯ್ಯ ಸರ್ಕಾರ 5 ಎಕರೆ ಜಮೀನು ಮಂಜೂರು ಮಾಡಿರುವುದು ಅಚ್ಚರಿ ಮೂಡಿಸಿದೆ. ಆ ಪ್ರದೇಶದಲ್ಲಿ ಸಂಶೋಧನಾ ಮತ್ತು ಅಭಿವೃದ್ಧಿ ( R&D) ಸೌಲಭ್ಯಕ್ಕಾಗಿ ನೀತಿ ರೂಪಿಸಿದ ಕೆಲವೇ ದಿನಗಳಲ್ಲಿ ಖರ್ಗೆ ಕುಟುಂಬ ನಡೆಸುತ್ತಿರುವ ಟ್ರಸ್ಟ್ ಗೆ 5 ಎಕರೆ ಜಮೀನು ನೀಡಿರುವುದು ಕುತೂಹಲಕಾರಿ ಸಂಗತಿಯಾಗಿದೆ ಎಂದರು.
ಈ ಸಂಬಂಧ ಕರ್ನಾಟಕ ಲೋಕಾಯುಕ್ತದಲ್ಲೂ ದೂರು ದಾಖಲಾಗಿದ್ದು, ಕೋರ್ಟ್ ನಲ್ಲಿ ವಿಚಾರಣೆ ಬಾಕಿಯಿದೆ. ನ್ಯಾಯಾಲಯ ತನ್ನ ಕೆಲಸ ಮಾಡಲಿದೆ. ಆದರೆ, ತ್ವರಿತಗತಿಯ ಭೂಮಿ ಹಂಚಿಕೆ ಸುತ್ತ ಅನೇಕ ಅನುಮಾನಗಳ ಹುತ್ತ ಬೆಳೆದಿದ್ದು, ಖರ್ಗೆ ಅವರು ಪ್ರತಿಕ್ರಿಯೆ ನೀಡಬೇಕು. ಕಾಂಗ್ರೆಸ್ ಅಧ್ಯಕ್ಷರಿಂದ ಪಾರದರ್ಶಕ ಮತ್ತು ಪ್ರಾಮಾಣಿಕ ಪ್ರತಿಕ್ರಿಯೆಯನ್ನು ಬಿಜೆಪಿ ನಿರೀಕ್ಷೆ ಮಾಡಿದೆ ಎಂದು ರವಿಶಂಕರ್ ಪ್ರಸಾದ್ ಹೇಳಿದರು.
ಒಳ್ಳೆಯ ಉದ್ದೇಶಕ್ಕೆ ಟ್ರಸ್ಟ್ ಗೆ ಭೂಮಿ ಹಂಚಿಕೆಯಾಗಿದ್ದರೆ ಬಿಜೆಪಿಗೆ ಯಾವುದೇ ಸಮಸ್ಯೆಯಿಲ್ಲ. ಆದರೆ, ಟ್ರಸ್ಟ್ ನೆಪದಲ್ಲಿ ರಾಜಕೀಯ ನಾಯಕರ ಕುಟುಂಬ ಭೂಮಿ ಕೊಳ್ಳೆ ಹೊಡೆಯುವುದರಲ್ಲಿ ತೊಡಗುವುದು ತಪ್ಪಾಗುತ್ತದೆ. ನಾವು ಅದನ್ನು ಖಂಡಿಸುತ್ತೇವೆ. ಇದೊಂದು ಗಂಭೀರ ವಿಚಾರವಾಗಿದೆ. ಈ ಸಂಬಂಧ ಕ್ರಮ ಕೈಗೊಳ್ಳುವ ವಿಶ್ವಾಸದಲ್ಲಿರುವುದಾಗಿ ಅವರು ತಿಳಿಸಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಕರ್ನಾಟಕದಲ್ಲಿ ಈ ರೀತಿಯ ಭೂಮಿ ಕಬಳಿಕೆ ವ್ಯಾಪಕವಾಗುತ್ತಿದೆ. ಕಾಂಗ್ರೆಸ್ ಸರ್ಕಾರ ಮತ್ತು ಅದರ ನಾಯಕರಿಗೆ ಭೂ ವ್ಯವಹಾರಗಳ ಬಗ್ಗೆ ಏಕೆ ಹೆಚ್ಚಿನ ವ್ಯಾವೋಹವಿದೆ ಎಂಬ ಗಂಭೀರ ಪ್ರಶ್ನೆ ಇಂದು ಎದ್ದಿದೆ. ಕಾಂಗ್ರೆಸ್ ಪಕ್ಷದ ಕೆಲವು ನಾಯಕರು ಆಸ್ತಿ ಡೀಲರ್ ಆಗಿದ್ದಾರೆಯೇ ? ಎಂದು ಪ್ರಶ್ನಿಸಿದ ರವಿಶಂಕರ್ ಪ್ರಸಾದ್, ಮುಡಾ ನಿವೇಶನ ಹಂಚಿಕೆ ಪ್ರಕರಣವನ್ನು ಪ್ರಾಮಾಣಿಕವಾಗಿ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದರು.
Advertisement