ಮೈಸೂರು: ಮುಡಾ ಸೈಟ್ ಕೇಸ್ ವಿಚಾರವಾಗಿ ಸಿಎಂ ಸಿದ್ದರಾಮಯ್ಯನವರ ರಾಜೀನಾಮೆ ಕೇಳುತ್ತಿರುವ ವಿಪಕ್ಷ ನಾಯಕರು ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ.
ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ ಕೂಡ ಮುಡಾ ವಿಚಾರವನ್ನು ಉಲ್ಲೇಖಿಸಿ ಸಿದ್ದರಾಮಯ್ಯ ಅವರಿಗೆ ಗಿಳಿಗೆ ಹೇಳಿದಂತೆ ಹೇಳಿದರೂ ಅದನ್ನು ಕೇಳದೆ, ಕೇವಲ 14 ಸೈಟಿಗೆ 45 ವರ್ಷದ ವ್ಯಕಿತ್ವವನ್ನೇ ಕಳೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಇತ್ತೀಚೆಗೂ ಮುಡಾ ಕೇಸ್ ಬಗ್ಗೆ ಮಾತನಾಡಿದ್ದ ಪ್ರತಾಪ್ ಸಿಂಹ, ಯಾವಾಗ ಸಿಎಂ ಸಿದ್ದರಾಮಯ್ಯ ಅವರಿಂದ 62 ಕೋಟಿ ರೂಪಾಯಿ ಕೊಟ್ಟರೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (MUDA) 14 ನಿವೇಶನಗಳನ್ನು ಹಿಂದಿರುಗಿಸುತ್ತೇನೆ ಎನ್ನುವ ಮಾತು ಅವರ ಬಾಯಿಂದ ಬಂತೋ, ಆಗಲೇ ಅವರ 45 ವರ್ಷದ ರಾಜಕೀಯ ಜೀವನ ಅಂತ್ಯವಾಯಿತು ಎಂದಿದ್ದರು.
ಸಿದ್ದರಾಮಯ್ಯ ಅವರು 14 ಸೈಟ್‌ಗಳನ್ನು ವಾಪಸ್ ಕೊಟ್ಟರೆ, ಈ ಮುಡಾ ಪ್ರಕರಣ ತಾರ್ಕಿಕ ಅಂತ್ಯ ಕಾಣುತ್ತೆ. ಇದರಲ್ಲಿ ಯಾರೆಲ್ಲ ಅಕ್ರಮವಾಗಿ ನಿವೇಶನ ಪಡೆದಿದ್ದಾರೋ ಅವರೆಲ್ಲರ ಹೆಸರೂ ಹೊರಗೆ ಬರುತ್ತದೆ ಎಂದು ಮೊದಲೇ ನಾನು ಸಿದ್ದರಾಮಯ್ಯ ಅವರಿಗೆ ಎಚ್ಚರಿಸಿದ್ದೆ. ಆದರೆ ಅವರು ಆ ಮಾತು ಕೇಳಿಸಿಕೊಳ್ಳಲಿಲ್ಲ. ಈಗ 62 ಕೋಟಿ ಕೊಟ್ಟರೆ ವಾಪಸ್ ಕೊಡುತ್ತೇನೆ ಎನ್ನುವ ಮಾತಿನ ಮೂಲಕವೇ ಅವರ ರಾಜಕೀಯ ಜೀವನವನ್ನು ಅವರೇ ಅಂತ್ಯಗೊಳಿಸುತ್ತಿದ್ದಾರೆ ಎಂದರು.
ಸಿಎಂ ಸಿದ್ದರಾಮಯ್ಯ ಮಾತುಗಳು ಅವರ ಪ್ರಾಮಾಣಿಕತೆಯನ್ನೇ ಸುಳ್ಳು ಮಾಡಿವೆ. ಈಗ ಮುಡಾ ಕೇಸ್‌ಗೆ ಪ್ರತಿಯಾಗಿ ಮತ್ತೊಂದು ಕೇಸ್ ಎಂದೆಲ್ಲ ಹೇಳುತ್ತಿದ್ದಾರೆ. ಭ್ರಷ್ಟಾಚಾರದ ಆರೋಪ ಸಿದ್ದರಾಮಯ್ಯ ಕುತ್ತಿಗೆಗೆ ಸುತ್ತಿಕೊಂಡಿದೆ. ಅವರ ಸಿಎಂ ಕುರ್ಚಿಯೇ ಹೋಗುವ ಪರಿಸ್ಥಿತಿ ಬಂದಿದೆ. ಇಂತಹ ಪರಿಸ್ಥಿತಿಯಲ್ಲೂ ಅವರು ಇತರರ ಮೇಲೆ ದರ್ಪದಿಂದ ಮಾತನಾಡುತ್ತಿದ್ದಾರೆ. ರಾಜ್ಯದ ಜನ ಎಲ್ಲವನ್ನೂ ಬಹಳ ಸೂಕ್ಷ್ಮವಾಗಿ ನೋಡುತ್ತಿದ್ದು, ಸಿಎಂ ಅವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಈ ಕೇಸ್‌ನ ತನಿಖೆಗೆ ಸಹಕರಿಸುವುದು ಒಳ್ಳೆಯದು ಎಂದಿದ್ದಾರೆ.
Advertisement