ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೆವ್ವ ಆಗಿದ್ದರೆ ಭಯ ಪಡಬೇಕು. ದೆವ್ವ ಅಲ್ಲ ಅಲ್ವಾ? ಹಾಗಿದ್ದರೆ ನಾನು ಯಾಕೆ ಭಯಪಡಲಿ ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಟಾಂಗ್ ಕೊಟ್ಟರು.
ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿಯನ್ನು ಯಾವುದೇ ಕಾರಣಕ್ಕೂ ಹೆದರಿಸಲು ಆಗಲ್ಲ. ನಾನು ಯಾರಿಗೂ ಹೆದರಲ್ಲ ಎಂದರು. ಕುಮಾರಸ್ವಾಮಿಗೆ ನನ್ನನ್ನು ಕಂಡರೆ ಭಯ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಾನು ಯಾಕೆ ಸಿದ್ದರಾಮಯ್ಯಗೆ ಹೆದರಬೇಕು. ನಾನು ಸಿದ್ದರಾಮಯ್ಯ ನೆರಳಲ್ಲಿ ರಾಜಕೀಯಕ್ಕೆ ಬಂದಿದ್ದೀನಾ? ಸ್ವಂತ ದುಡಿಮೆಯಲ್ಲಿ, ಕಾರ್ಯಕರ್ತರ ದುಡಿಮೆಯಲ್ಲಿ ಬಂದಿದ್ದೇನೆ. ಸಿದ್ದರಾಮಯ್ಯ ಹೆಸರಲ್ಲಿ ರಾಜಕೀಯ ಮಾಡಿಲ್ಲ. ದೇವೇಗೌಡರ ನೆರಳಲ್ಲಿ ಬಂದ ನಾನು ನಾಡಿನ ಜನರಿಗೆ ಮಾತ್ರ ಹೆದರುತ್ತೇನೆ ಎಂದು ತಿಳಿಸಿದರು.
ಸಿಎಂ ಅವರು ದೆವ್ವ ಹಾಗಿದ್ದರೆ ಭಯ ಬೀಳಬೇಕು. ದೆವ್ವ ಅಲ್ಲವಲ್ಲ ನಾನ್ಯಾಕೆ ಭಯ ಬೀಳಲಿ. ನನ್ನ ಜೆಡಿಎಸ್ ದುರ್ಬಲ ಆಗುತ್ತೋ ಬಲಗೊಳ್ಳುತ್ತೋ ಎನ್ನುವುದನ್ನು ದೇವರು ನೋಡಿಕೊಳ್ಳುತ್ತಾನೆ. ಮೊದಲು ಸಮಸ್ಯೆಯಲ್ಲಿರುವುದನ್ನು ಬಗೆಹರಿಸಿಕೊಳ್ಳಿ. ಕುಮಾರಸ್ವಾಮಿ ಹೆದರುವುದು ಕೇವಲ ದೇವರಿಗೆ ಮತ್ತು ಜನರಿಗೆ ಮಾತ್ರ ಎಂದರು. ಕುಮಾರಸ್ವಾಮಿ ಹತ್ತಿರ ಇವರದು ಏನು ನಡೆಯಲ್ಲ. ಎಫ್‌ಐಆರ್ ಮಾಡಿ ಹೆದರಿಸುವ ಕೆಲಸ ಅಷ್ಟೇ. ಕಾಲ ಪ್ರತಿಯೊಂದಕ್ಕೂ ಉತ್ತರ ನೀಡಲಿದೆ. ಈ ಸರ್ಕಾರ ಎಲ್ಲವನ್ನು ಬಿಟ್ಟಿರುವ ಸರ್ಕಾರ. ಭಯ ಭಕ್ತಿ ಇಲ್ಲದ ಭಂಡ ಸರ್ಕಾರ. ಇವತ್ತಿನ ರಾಜಕೀಯ ಬೆಳವಣಿಗೆಗೆ ಕಾಲವೇ ಉತ್ತರ ಕೊಡಲಿದೆ ಎಂದು ಹೇಳಿದರು.
Advertisement