
ಬೆಂಗಳೂರು: ಪೋಕ್ಸೊ ಪ್ರಕರಣದಲ್ಲಿ ಆರೋಪಿಯಾಗಿರುವ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದ ಬಿಜೆಪಿ ವಿರುದ್ಧ ಸಚಿವ ದಿನೇಶ್ ಗುಂಡೂ ರಾವ್ ಅವರು ಮಂಗಳವಾರ ವಾಗ್ದಾಳಿ ನಡೆಸಿದ್ದಾರೆ.
ನೃತ್ಯ ಸಂಯೋಜಕ ಜಾನಿ ಮಾಸ್ಟರ್ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿರುವುದನ್ನು ಉಲ್ಲೇಖಿಸಿ ಅವರಿಗೆ ಘೋಷಣೆಯಾಗಿದ್ದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ರದ್ದುಗೊಳಿಸಿದ ಕೇಂದ್ರ ಸರ್ಕಾರದ ಕ್ರಮ ಶ್ಲಾಘನೀಯ. ಆದರೆ ಬಿಎಸ್ ಯಡಿಯೂರಪ್ಪ ವಿರುದ್ಧದ ಪ್ರಕರಣದಲ್ಲಿ ಭಿನ್ನ ನಿಲುವು ಏಕೆ ಎಂದು ಸಚಿವರು ಪ್ರಶ್ನಿಸಿದ್ದಾರೆ.
ಲೈಂಗಿಕ ಕಿರುಕುಳ ಆರೋಪ, ತನಿಖೆ ಅಥವಾ ವಿಚಾರಣೆ ಎದುರಿಸುತ್ತಿರುವ ಯಾರನ್ನೂ ಗೌರವಿಸಬಾರದು. ಜಾನಿ ಮಾಸ್ಟರ್ ಪ್ರಕರಮದಲ್ಲಿ ಕೇಂದ್ರ ಸರ್ಕಾರದ ಉತ್ತಮ ನಿರ್ಧಾರ ತೆಗೆದುಕೊಂಡಿದೆ. ಆದರೆ, ಯಡಿಯೂರಪ್ಪನವರ ವಿಷಯಕ್ಕೆ ಬಂದಾಗ ಪಕ್ಷವು ಅದೇ ಮಾನದಂಡವನ್ನು ಅನುಸರಿಸಿಲ್ಲ ಎಂದು ಆರೋಗ್ಯ ಸಚಿವರು ಹೇಳಿದ್ದಾರೆ.
ವಿಶೇಷವಾಗಿ 17 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪವನ್ನು ಎದುರಿಸುತ್ತಿರುವ ಯಡಿಯೂರಪ್ಪ ವಿರುದ್ಧ ಬಿಜೆಪಿ ಏಕೆ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ? ಯಡಿಯೂರಪ್ಪ ವಿರುದ್ಧದ ಪೋಕ್ಸೋ ಕೇಸ್ ನಲ್ಲಿ 200 ಪುಟಗಳ ಚಾರ್ಜ್ ಶೀಟ್ ಅನ್ನು ಪೊಲೀಸರು ಸಲ್ಲಿಸಿದ್ದಾರೆ. ಆದರೂ ಏಕೆ ಯಡಿಯೂರಪ್ಪ ವಿಚಾರದಲ್ಲಿ ಬಿಜೆಪಿ ಬೇರೆ ತರಹ ನಡೆದುಕೊಳ್ತಿದೆ? ಇದು ಸಾಮಾನ್ಯವಾದ ವಿಷಯ ಅಲ್ಲವೇ ಅಲ್ಲ. ಯಡಿಯೂರಪ್ಪ ಹತ್ರ ಸಹಾಯಕ್ಕೆ ಹೋದ ಹುಡುಗಿ ಮೇಲೆಯೇ ಲೈಂಗಿಕ ದೌರ್ಜನ್ಯ ಆಗಿದೆ. ಇದನ್ನು ಬಹಳ ಹಗುರವಾಗಿ ತೆಗೆದುಕೊಳ್ಳಬಾರದು ಎಂದರು.
ಯಡಿಯೂರಪ್ಪ ಅವರನ್ನು ಸಂಸದೀಯ ಸಮಿತಿಯ ಸ್ಥಾನದಿಂದ ಕೆಳಗಿಳಿಸುವುದು "ಕನಿಷ್ಠ ಕ್ರಮ"ವನ್ನು ಬಿಜೆಪಿ ತೆಗೆದುಕೊಳ್ಳಬೇಕು. ಅವನನ್ನು ಏಕೆ ಇನ್ನೂ ಇಟ್ಟುಕೊಂಡಿದ್ದಾರೆ? ಭ್ರಷ್ಟಾಚಾರಕ್ಕಾಗಿ ಲೋಕಾಯುಕ್ತ ತನಿಖೆ ಎದುರಿಸುತ್ತಿರುವ ಅವರು ಈಗ ಪೋಕ್ಸೋ ವಿಚಾರಣೆ ಎದುರಿಸುತ್ತಿದ್ದಾರೆ.
ಇಂತಹ ಗಂಭೀರ ಆರೋಪಗಳು ಇರುವಾಗ, ವಿಶೇಷವಾಗಿ ಮಹಿಳೆಯರಿಗೆ ಸಂಬಂಧಿಸಿದಂತೆ, ಬಿಜೆಪಿ ಏಕೆ ಹಗುರವಾಗಿ ತೆಗೆದುಕೊಳ್ಳುತ್ತಿದೆ?" ಎಂದು ದಿನೇಶ್ ಗುಂಡೂರಾವ್ ಪ್ರಶ್ನಿಸಿದರು.
ಯಡಿಯೂರಪ್ಪ ಅವರು ಬಿಜೆಪಿ ಸಂಸದೀಯ ಮಂಡಳಿ ಮತ್ತು ಕೇಂದ್ರ ಚುನಾವಣಾ ಸಮಿತಿಯ ಸದಸ್ಯರಾಗಿದ್ದಾರೆ.
Advertisement