
ಬೆಂಗಳೂರು: ಹರ್ಯಾಣ ವಿಧಾನಸಭಾ ಚುನಾವಣೆ ಸೋಲಿಗೆ ಅತಿಯಾದ ಆತ್ಮವಿಶ್ವಾಸ ಕಾರಣ. ಹೈಕಮಾಂಡ್ ಸೋಲಿನ ಬಗ್ಗೆ ಪರಾಮರ್ಶನೆ ಮಾಡುತ್ತದೆ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಹೇಳಿದರು.
ಸದಾಶಿವನಗರದ ನಿವಾಸದಲ್ಲಿ ಬುಧವಾರ ಮಾಧ್ಯಮದವರ ಜತೆ ಮಾತನಾಡಿದ ಅವರು, ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ ಎನ್ನುವುದಕ್ಕೆ ಇದು ಸಾಕ್ಷಿ ಹಾಗೂ ಉತ್ತಮ ನಿದರ್ಶನ. ಜಮ್ಮು, ಕಾಶ್ಮೀರದಲ್ಲಿ ಇಂಡಿಯಾ ಒಕ್ಕೂಟ ಸರ್ಕಾರ ರಚನೆ ಮಾಡುತ್ತದೆ ಎಂದರು. ಹರಿಯಾಣ ಫಲಿತಾಂಶ ಮಹಾರಾಷ್ಟ್ರ, ಜಾರ್ಖಂಡ್ ಚುನಾವಣೆ ಮೇಲೆ ಪರಿಣಾಮ ಬೀರುತ್ತದೆಯೇ ಎಂದು ಕೇಳಿದಾಗ, “ಈ ಎರಡೂ ರಾಜ್ಯಗಳ ಪರಿಸ್ಥಿತಿ ಬೇರೆ, ಬೇರೆ ರೀತಿಯಿದೆ. ಇವು ಆಯಾ ರಾಜ್ಯಗಳ ಚುನಾವಣೆಯಾಗಿದ್ದು, ಬೇರೆ ರಾಜ್ಯಗಳ ಫಲಿತಾಂಶ ಇವುಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಲೋಕಸಭೆ ಹಾಗೂ ವಿಧಾನಸಭಾ ಚುನಾವಣೆಗಳೇ ಬೇರೆ, ಬೇರೆ” ಎಂದರು.
ಹರಿಯಾಣ ಸೋಲಿಗೆ ಮುಡಾ ಪ್ರಕರಣ ಕಾರಣ ಎನ್ನುವ ಮಾಜಿ ಸಭಾಪತಿ ಕೋಳಿವಾಡ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಕೋಳಿವಾಡ ಅವರ ಹೇಳಿಕೆಗೂ ಹರಿಯಾಣ ಸೋಲಿಗೂ ಸಂಬಂಧವಿಲ್ಲ. ಇದರ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನಿಸಲಿದ್ದಾರೆ ಎಂದರು. ಮುಡಾ ಪ್ರಕರಣ ಮುಚ್ಚಿ ಹಾಕಲು ಜಾತಿಗಣತಿ ವಿಷಯ ಮುನ್ನಲೆಗೆ ತಂದಿದ್ದಾರೆ ಎನ್ನುವ ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಬೆಳಿಗ್ಗೆ ಒಂದು, ಸಂಜೆಯೊಂದು ಮಾತನಾಡುವವರಿಗೆ ನಾವು ಉತ್ತರ ನೀಡುವುದಿಲ್ಲ. ಮಾಧ್ಯಮದವರಿಗೆ ಅವರು ಗಂಭೀರ ವ್ಯಕ್ತಿ ಎನಿಸಬಹುದು, ಆದರೆ ನಮಗಲ್ಲ. ಅವರ ಯಾವುದೇ ಹೇಳಿಕೆಗಳು ನ್ಯಾಯಯುತವಾಗಿರುವುದಿಲ್ಲ. ಅವರಿಗೆ ಕೆಲಸವಿಲ್ಲ, ಅದಕ್ಕೆ ಮಾತನಾಡುತ್ತಾರೆ. ಅವರಿಗೆ ಮೋದಿ ಒಳ್ಳೆ ಕೆಲಸ ಕೊಟ್ಟಿದ್ದಾರೆ, ಅದನ್ನು ಬಿಟ್ಟು ಕರ್ನಾಟಕದ ವಿಚಾರದಲ್ಲಿ ಮಾತನಾಡುತ್ತಿದ್ದಾರೆ.
ಮಹದೇವಪ್ಪ, ಸತೀಶ್ ಜಾರಕಿಹೊಳಿ ಭೇಟಿ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಸುರೇಶ್, ಅವರು ಹಿರಿಯ ಸಚಿವರು. ಪರಮೇಶ್ವರ್ ಅವರು ಪ್ರಮುಖ ಖಾತೆ ಹೊಂದಿರುವವರು, ಇವರುಗಳು ರಾಜಕೀಯ ಹೊರತಾಗಿ ಸೇರಿದ್ದಾರೆ. ಈಗಾಗಲೇ ಸರ್ಕಾರದ 136 ಶಾಸಕರು ಸಿದ್ದರಾಮಯ್ಯ ಅವರ ಬೆನ್ನಿಗೆ ಇದ್ದಾರೆ ಎನ್ನುವ ಸಂದೇಶವನ್ನು ನಾವು ಕೊಟ್ಟಿದ್ದೇವೆ” ಎಂದರು. ಖರ್ಗೆ ಅವರ ಭೇಟಿಯ ನಂತರ ಸಿಎಂ ಬದಲಾವಣೆ ವಿಚಾರ ಮುನ್ನಲೆಗೆ ಬಂದಿದೆ ಎಂದಾಗ, “ಮಲ್ಲಿಕಾರ್ಜುನ ಖರ್ಗೆ ಅವರು ನಮ್ಮ ರಾಜ್ಯದವರು, ಕೆಪಿಸಿಸಿ ಅಧ್ಯಕ್ಷರು ಅವರನ್ನು ಗೌರವಯುತವಾಗಿ ಭೇಟಿಯಾಗಿದ್ದಾರೆ. ಭೇಟಿಯಾಗುವುದು ಪಕ್ಷದ ಶಿಸ್ತು” ಎಂದರು. ಕಾಂಗ್ರೆಸ್ ಸರ್ಕಾರವನ್ನು ನಾವು ಬೀಳಿಸುವುದಿಲ್ಲ, ಅವರೇ ಕಿತ್ತಾಡಿಕೊಂಡು ಸರ್ಕಾರ ಬಿದ್ದು ಹೋಗುತ್ತದೆ ಎನ್ನುವ ಬಿಜೆಪಿ ಹೇಳಿಕೆ ಬಗ್ಗೆ ಕೇಳಿದಾಗ, “ಅವರುಗಳು ಇದೇ ಗುಂಗಿನಲ್ಲಿರಲಿ” ಎಂದರು. ಜಾತಿ ಗಣತಿ ಬಗ್ಗೆ ಕೇಳಿದಾಗ “ಇದರ ಬಗ್ಗೆ ಮುಖ್ಯಮಂತ್ರಿಗಳು ಸ್ಪಷ್ಟನೆ ನೀಡಿದ್ದು, ಸಚಿವ ಸಂಪುಟದ ಮುಂದಿಟ್ಟು ನಂತರ ಏನು ತೀರ್ಮಾನ ಮಾಡುತ್ತೇವೆ ಎಂದು ಅವರು ಹೇಳಿದ್ದಾರೆ” ಎಂದರು.
Advertisement