
ವಿಜಯಪುರ: ರಾಜ್ಯದ ಮುಖ್ಯಮಂತ್ರಿ ಕುರ್ಚಿಯಲ್ಲಿ ಟಗರು ಕುಂತದೆ. ಆ ಟಗರನ್ನು ಇಳಿಸುವುದು ಅಷ್ಟು ಸುಲಭನಾ? ಟಗರನ್ನು ಅಲ್ಲಾಡಿಸಲು ಸಾಧ್ಯನಾ’ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಪ್ರಶ್ನಿಸಿದರು.
ಸುದ್ದಿಗಾರರ ಜತೆ ಮಾತನಾಡಿದ ಅವರು, ಸಿದ್ದರಾಮಯ್ಯನವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ, ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ಪರ ಇದೆ. ರಾಜ್ಯದಲ್ಲಿ 5 ವರ್ಷ ಸಿದ್ದರಾಮಯ್ಯ ಅವರೇ ಸಿಎಂ ಆಗಿರುತ್ತಾರೆಂದು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಖರ್ಗೆ ಅವರೇ ಹೇಳಿದ್ದಾರೆ. ಸದ್ಯ ಸಿಎಂ ಕುರ್ಚಿ ಖಾಲಿ ಇಲ್ಲ. ಕುರ್ಚಿ ಖಾಲಿ ಇದ್ದರೆ ತಾನೇ ಮುಂದಿನ ಮಾತು ಎಂದು ಎಂದು ಹೇಳಿದರು. ‘ಸಿಎಂ ಅಧಿಕಾರ ತಲಾ ಎರಡೂವರೆ ವರ್ಷ ಹಂಚಿಕೆ ಎಂಬುದು ಮಾಧ್ಯಮದವರ ಸೃಷ್ಟಿ. ಈ ವಿಚಾರ ಕುರಿತು ಡಿ.ಕೆ.ಸುರೇಶ್ ಅವರು ಕೂಡ 5 ವರ್ಷ ಸಿದ್ದರಾಮಯ್ಯ ಮುಖ್ಯಮಂತ್ರಿ ಎಂದು ಹೇಳಿದ್ದಾರೆ’ ಎಂದರು.
ಜಾತಿಗಣತಿ ಜಾರಿ ವಿಚಾರವಾಗಿ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನತೆಗೆದುಕೊಳ್ಳಲಾಗುವುದೆಂದು ಸಿಎಂ ತಿಳಿಸಿದ್ದು, ಗುರುವಾರ ನಡೆಯುವ ಸಭೆಯಲ್ಲಿ ಈ ವಿಚಾರ ಪ್ರಸ್ತಾಪವಾಗಬಹುದು. ಆಗ ಏನು ಚರ್ಚೆ ಆಗುತ್ತದೆ ನೋಡೋಣ ಎಂದು ಸಚಿವ ಜಮೀರ್ ಅಹ್ಮದ್ ಹೇಳಿದ್ದಾರೆ. ಜಾತಿಗಣತಿ 2013ರಿಂದಲೇ ಪೆಂಡಿಂಗ್ ಇದೆ. ನಮ್ಮ ಸರ್ಕಾರ ಹೋದ ಬಳಿಕ ಸಮ್ಮಿಶ್ರ ಸರ್ಕಾರ ದಲ್ಲಿ ಸಿಎಂ ಆಗಿದ್ದ ಕುಮಾರಸ್ವಾಮಿ ಈ ಬಗ್ಗೆ ಗಮನ ಕೊಡಲಿಲ್ಲ. ಹಾಗಾಗಿ ಈಗ ಚರ್ಚಿಸುತ್ತೇವೆ ಎಂದರು. ಬಹಿರಂಗ ಕಾರ್ಯಕ್ರಮದಲ್ಲಿ ಸತೀಶ ಜಾರಕಿಹೊಳಿ ಸಮ್ಮುಖದಲ್ಲಿಯೇ ಮುಂದಿನ ಸಿ.ಎಂ ಘೋಷಣೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಅಭಿಮಾನಿಗಳು ಕೂಗಿದ ತಕ್ಷಣ ಸಿ.ಎಂ ಆಗಲು ಸಾಧ್ಯವಿಲ್ಲ. ನನ್ನ ಅಭಿಮಾನಿಗಳು ಕೂಗುತ್ತಾರೆ. ನಾನು ಸಿ.ಎಂ ಆಗಿ ಬಿಡ್ತಿನಾ? ಎಂದು ಗುಡುಗಿದರು.
Advertisement