ಡಿ.ಕೆ ಶಿವಕುಮಾರ್
ಡಿ.ಕೆ ಶಿವಕುಮಾರ್

ನನ್ನ ಕುಟುಂಬದವರು ಯಾರೂ ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಸ್ಪರ್ಧಿಸಲ್ಲ: ಡಿ.ಕೆ ಶಿವಕುಮಾರ್

ಚನ್ನಪಟ್ಟದಲ್ಲಿ ತಳಮಟ್ಟದಿಂದ ಕಾಂಗ್ರೆಸ್ ಪಕ್ಷವನ್ನು ಗಟ್ಟಿಗೊಳಿಸಲಾಗುತ್ತಿದೆ. ನಾವು ಕ್ಷೇತ್ರದಲ್ಲಿ ಮಾಡುತ್ತಿರುವ ಕೆಲಸದ ಮೇಲೆ ಜನರು ವಿಶ್ವಾಸವನ್ನು ಇಡುತ್ತಾರೆ ಎನ್ನುವ ನಂಬಿಕೆಯಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.
Published on

ಮೈಸೂರು: ನನ್ನ ಕುಟುಂಬದವರು ಯಾರೂ ಚುನಾವಣೆಗೆ ನಿಲ್ಲುವುದಿಲ್ಲ. ನಾನೇ ಅಭ್ಯರ್ಥಿ, ನನ್ನ ಹೆಸರಿನಲ್ಲಿಯೇ ಮತ ಕೇಳುವುದು, ಚನ್ನಪಟ್ಟದಲ್ಲಿ ತಳಮಟ್ಟದಿಂದ ಕಾಂಗ್ರೆಸ್ ಪಕ್ಷವನ್ನು ಗಟ್ಟಿಗೊಳಿಸಲಾಗುತ್ತಿದೆ. ನಾವು ಕ್ಷೇತ್ರದಲ್ಲಿ ಮಾಡುತ್ತಿರುವ ಕೆಲಸದ ಮೇಲೆ ಜನರು ವಿಶ್ವಾಸವನ್ನು ಇಡುತ್ತಾರೆ ಎನ್ನುವ ನಂಬಿಕೆಯಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.

ಮೈಸೂರಿನಲ್ಲಿ ಖಾಸಗಿ ಹೋಟೆಲ್ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಭಾನುವಾರ ಉತ್ತರಿಸಿದ ಅವರು, ಚನ್ನಪಟ್ಟಣದ ಉಪಚುನಾವಣೆಗೆ ನಾವು ವೇದಿಕೆಯನ್ನು ಸಿದ್ಧಪಡಿಸುತ್ತಿದ್ದೇವೆ. ಲೋಕಸಭಾ ಚುನಾವಣೆಯಲ್ಲಿ ಕಡಿಮೆ ಮತ ಬಂದಿತ್ತು. ವಿಧಾನಸಭಾ ಚುನಾವಣೆಯಲ್ಲಿ ಅತ್ಯಂತ ಕಡಿಮೆ ಮತ ಬಂದಿತ್ತು" ಎಂದರು.

ಈ ಮೊದಲು ನೀವು ನಿಖಿಲ್ ಪರ ಪ್ರಚಾರ ಮಾಡಿದ್ದೀರಿ, ಚನ್ನಪಟ್ಟಣಕ್ಕೆ ಈಗ ಅವರೇ ಅಭ್ಯರ್ಥಿ ಎನ್ನಲಾಗುತ್ತಿದೆ ಎಂದಾಗ "ಜೆಡಿಎಸ್ ತನ್ನ ಪಕ್ಷದ ಅಭ್ಯರ್ಥಿಯನ್ನಾಗಿ ಯಾರನ್ನಾದರೂ ನಿಲ್ಲಿಸಿಕೊಳ್ಳಲಿ. ಅದು ಅವರ ಪಕ್ಷದ ಆಂತರಿಕ ವಿಚಾರ. ಚನ್ನಪಟ್ಟಣದಲ್ಲಿ ವ್ಯಕ್ತಿಯ ಮೇಲೆ ಚುನಾವಣೆ ನಡೆಯುವುದು ಬಿಟ್ಟು, ಪಕ್ಷದ ಸಿದ್ಧಾಂತದ ಮೇಲೆ ಚುನಾವಣೆ ನಡೆಯಬೇಕು ಎಂದು ನಾನು ಕೆಲಸ ಮಾಡುತ್ತಿದ್ದೇನೆ. ಎನ್ ಡಿಎ, ದಳ, ಬಿಜೆಪಿ ಯಾವ ಅಭ್ಯರ್ಥಿಯನ್ನು ಬೇಕಾದರೂ ಆಯ್ಕೆ ಮಾಡಿಕೊಳ್ಳಲಿ, ನಾನು ಅವರ ವಿಚಾರಕ್ಕೆ ತಲೆ ಹಾಕುವುದಿಲ್ಲ. ಈಗ ನಮ್ಮ ಮನೆಯನ್ನು ನಾವು ರಿಪೇರಿ ಮಾಡಿಕೊಂಡರೆ ಸಾಕು" ಎಂದರು.

ಡಿ.ಕೆ ಶಿವಕುಮಾರ್
ಚನ್ನಪಟ್ಟಣ ಉಪಚುನಾವಣೆ: ದಿನಾಂಕ ಘೋಷಣೆಗೂ ಮುನ್ನವೇ ಗರಿಗೆದರಿದ ರಾಜಕೀಯ ಚಟುವಟಿಕೆ

ದಸರಾ ಒಳಗೆ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಯುತ್ತಾರೆ ಎಂದು ಬಿಜೆಪಿ ಹೇಳಿತ್ತು. ಈಗ ದಸರಾ ಯಶಸ್ವಿಯಾಗಿದೆ ಎಂದು ಕೇಳಿದಾಗ, "ಬಿಜೆಪಿಯವರು ಮುಂದಿನ ಹತ್ತು ವರ್ಷವೂ ವಿರೋಧ ಪಕ್ಷವಾಗಿ ಇದೇ ಮಾತನ್ನು ಹೇಳುತ್ತಿರುತ್ತಾರೆ" ಎಂದು ವ್ಯಂಗ್ಯವಾಡಿದರು.

"ಮುಂಬೈನಲ್ಲಿ ಸಿದ್ದಿಕಿ ಬಾಬಾ ಅವರ ಹತ್ಯೆ ಖಂಡನೀಯ. ಅವರು ನನಗೆ ಆಪ್ತರಾಗಿದ್ದರು ಹಾಗೂ ಅವರ ಮಗ ಯುವ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ಕಾಂಗ್ರೆಸ್ ನಿಂದ ಮಂತ್ರಿಯಾಗಿದ್ದ ಅವರು, ಆನಂತರ ಬಂಡಾಯ ಎದ್ದು ಎನ್‌ಸಿಪಿ ಸೇರಿದ್ದರು"ಎಂದರು. "ಮುಂಬೈನಲ್ಲಿ ಕಾನೂನು ಸುವ್ಯವಸ್ಥೆ ಮತ್ತೆ ಹದಗೆಟ್ಟಿದೆ ಎನ್ನುವುದಕ್ಕೆ ಇದು ಸಾಕ್ಷಿ. ಮುಂದಕ್ಕೆ ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಇರುವುದರಿಂದ ಶಾಂತಿಯನ್ನು ಕಾಪಾಡಬೇಕಿದೆ" ಎಂದರು.

ಈ ಬಾರಿ ಅತ್ಯಂತ ವಿಜೃಂಭಣೆಯಿಂದ ಮೈಸೂರು ದಸರಾ ನಡೆಯಿತು. ಪಂಜಿನ ಮೆರವಣಿಗೆ ಈ ಬಾರಿಯ ವಿಶೇಷ ಆಕರ್ಷಣೆ. ಲಕ್ಷಾಂತರ ಜನ ಭಾಗವಹಿಸಿದ್ದರೂ, ಶಾಂತಿಯುತವಾಗಿ ದಸರಾ ನಡೆಯಿತು. ಒಂದಷ್ಟು ಸಂಪ್ರದಾಯದ ಕಾರಣಕ್ಕೆ, ರಾಜವಂಶಸ್ಥರು ಅಂಬಾರಿಯನ್ನು ಕೊಡುವುದು ತಡವಾಗಿದ್ದರಿಂದ ಮೆರವಣಿಗೆ ವಿಳಂಬವಾಯಿತು. ನಾವೆಲ್ಲ ಸೇರಿ ವಿಜೃಂಭಣೆಯಿಂದ ದಸರಾ ಆಚರಿಸಿದ್ದೇವೆ. ತಾಯಿ ಚಾಮುಂಡಿ ರಾಜ್ಯದ ಜನರಿಗೆ ಸಮೃದ್ಧಿ ನೀಡಲಿ ಎಂದು ಮತ್ತೊಮ್ಮೆ ಪ್ರಾರ್ಥನೆ ಮಾಡುತ್ತೇವೆ" ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com