ರಾಜ್ಯದಲ್ಲಿ ಮೂರು ಕ್ಷೇತ್ರಗಳ ಉಪ ಚುನಾವಣೆ: ಕಾಂಗ್ರೆಸ್ ವಿರುದ್ಧ ಕ್ರಮಕ್ಕೆ ಸಿಟಿ ರವಿ ಒತ್ತಾಯ

ಜಾಹೀರಾತು ಕೊಟ್ಟು ಮಾದರಿ ನೀತಿಸಂಹಿತೆ ಉಲ್ಲಂಘಿಸಿದ ಮುಖ್ಯಮಂತ್ರಿ, ಅವರ ಸಂಪುಟದ ಸಚಿವರ ನೀತಿ ಸಂವಿಧಾನಬಾಹಿರ. ಆದ್ದರಿಂದ ಚುನಾವಣಾ ಆಯೋಗವು ಈ ವಿಷಯದಲ್ಲಿ ಕ್ರಮ ಕೈಗೊಳ್ಳಬೇಕು.
C T Ravi
ಸಿಟಿ ರವಿ
Updated on

ಬೆಂಗಳೂರು: ರಾಜ್ಯದಲ್ಲಿನ ಚನ್ನಪಟ್ಟಣ, ಶಿಗ್ಗಾವಿ ಹಾಗೂ ಸಂಡೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ಪ್ರಮುಖ ರಾಜಕೀಯ ಪಕ್ಷಗಳಲ್ಲಿ ಚಟುವಟಿಕೆಗಳು ಗರಿಗೆದರಿರುವಂತೆಯೇ ಆಡಳಿತಾರೂಢ ಕಾಂಗ್ರೆಸ್ ವಿರುದ್ಧ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆರೋಪ ಕೇಳಿಬಂದಿದೆ. ಕಾಂಗ್ರೆಸ್ಸಿನವರು ಮಾದರಿ ನೀತಿಸಂಹಿತೆ ಉಲ್ಲಂಘಿಸಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಅವರು ಆರೋಪಿಸಿದ್ದಾರೆ.

ನಗರದ ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾಹೀರಾತು ಕೊಟ್ಟು ಮಾದರಿ ನೀತಿಸಂಹಿತೆ ಉಲ್ಲಂಘಿಸಿದ ಮುಖ್ಯಮಂತ್ರಿ, ಅವರ ಸಂಪುಟದ ಸಚಿವರ ನೀತಿ ಸಂವಿಧಾನಬಾಹಿರ. ಆದ್ದರಿಂದ ಚುನಾವಣಾ ಆಯೋಗವು ಈ ವಿಷಯದಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ರಾಜ್ಯದಲ್ಲಿ 3 ಉಪ ಚುನಾವಣೆಗಳು ನಡೆಯುತ್ತಿವೆ. ನೀತಿ ಸಂಹಿತೆಯೂ ಜಾರಿಯಲ್ಲಿದೆ. ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ, ಮುಡಾ ಹಗರಣಗಳಿಂದ ಪಾರಾಗುವ ಭಯ ಕಾಂಗ್ರೆಸ್ಸಿಗರನ್ನು ಕಾಡುತ್ತಿದೆ. ಅದರಿಂದ ರಕ್ಷಣೆ ಪಡೆಯಲು ಮಾದರಿ ನೀತಿ ಸಂಹಿತೆ ಉಲ್ಲಂಘಿಸಿ ರಾಯಚೂರು ವಿಶ್ವವಿದ್ಯಾಲಯಕ್ಕೆ ನಾವು ಮಹರ್ಷಿ ವಾಲ್ಮೀಕಿ ಹೆಸರು ಇಡುವುದಾಗಿ ಹೇಳಿದ್ದಾರೆ ಎಂದು ಆಕ್ಷೇಪಿಸಿದರು.

ವಾಲ್ಮೀಕಿ ಸಮುದಾಯದ ಮತಗಳು ಕೈತಪ್ಪುವ ಭೀತಿ ಕಾಡುತ್ತಿದೆ. ಆ ಭೀತಿಯಿಂದ ಮಹರ್ಷಿ ವಾಲ್ಮೀಕಿ ಹೆಸರು ಇಡುವುದಾಗಿ ಹೇಳಿದ್ದಾರೆ ಎಂದು ಟೀಕಿಸಿದರು. ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಲೂಟಿ ಹೊಡೆದಿದ್ದೀರಲ್ಲಾ? ಅದಕ್ಕೆ ಮೊದಲು ಪ್ರಾಯಶ್ಚಿತ್ತ ಮಾಡಿಕೊಳ್ಳಿ ಎಂದು ಆಗ್ರಹಿಸಿದರು.

2006-07ರಲ್ಲಿ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮವನ್ನು ಪ್ರಾರಂಭಿಸಿದ್ದೇ ಬಿಜೆಪಿ ಸರಕಾರ. 2011ರಲ್ಲಿ ಮೊದಲ ಬಾರಿಗೆ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಪ್ರಾರಂಭಿಸಿದ್ದೇ ಬಿಜೆಪಿ ಸರ್ಕಾರ. ಕಾಂಗ್ರೆಸ್ ಪಕ್ಷವು ರಾಮನ ಅಸ್ತಿತ್ವವನ್ನೇ ನಿರಾಕರಿಸಿತ್ತು. ಅಲ್ಲದೆ, ರಾಮಸೇತು ಕಾಲ್ಪನಿಕ, ರಾಮಾಯಣವೇ ಕಾಲ್ಪನಿಕ ಎಂದು ಹೇಳಿತ್ತು. ಇವತ್ತು ಕಾಂಗ್ರೆಸ್ ಪಕ್ಷಕ್ಕೆ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸುವಂಥ ನೈತಿಕತೆ ಅವರಿಗೆ ಇಲ್ಲ. ನಂಬಿಕೆ ಇಲ್ಲದ ಕಾರಣ ಅವರು ಮಾತನಾಡುವುದು ಬೂಟಾಟಿಕೆ ಆಗುತ್ತದೆ ಎಂದು ವಿಶ್ಲೇಷಿಸಿದರು.

ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣವನ್ನು ದುರುಪಯೋಗ ಪಡಿಸಿಕೊಂಡ ಕಾರಣಕ್ಕೆ ಅವರು ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕು. ಜೊತೆಗೆ ಸಾರ್ವಜನಿಕ ಕ್ಷಮೆ ಯಾಚನೆ ಮಾಡಬೇಕು ಎಂದು ಆಗ್ರಹಿಸಿದರು.

C T Ravi
ಉಪ ಚುನಾವಣೆ: ಸಿಎಂ, ಡಿಸಿಎಂಗೆ ಕೆ.ಸಿ ವೇಣುಗೋಪಾಲ್ ಟಾಸ್ಕ್; ಮೂರು ಸ್ಥಾನ ಗೆಲ್ಲಲು ಇನ್ನಿಲ್ಲದ ಕಸರತ್ತು!

ತ್ರಿಮೂರ್ತಿಗಳ ಸಭೆಯಿಂದ ಭಯ: ಎಐಸಿಸಿ ಮಹಾ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್, ಮುಖ್ಯಮಂತ್ರಿ – ಉಪ ಮುಖ್ಯಮಂತ್ರಿಗಳು ತ್ರಿಮೂರ್ತಿಗಳು ಸೇರಿ ಮೀಟಿಂಗ್ ಮಾಡಿದ ಫೋಟೊ ನೋಡಿದ್ದೇನೆ. ಅದರಿಂದ ಭಯ ಕಾಡುತ್ತಿದೆ. ಹಿಂದಿನ ಸಭೆಯಲ್ಲಿ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣವನ್ನು ಚುನಾವಣೆಗೆ ಬಳಸಿದ್ದರು. ಈಗ ಮಹಾರಾಷ್ಟ್ರ, ಜಾರ್ಖಂಡ್ ಚುನಾವಣೆ ಇದೆ. ಈಗ ಚುನಾವಣೆಗೆ ಎಷ್ಟು ಕೊಡಬೇಕೆಂದು ನಿಗದಿ ಮಾಡಿರಬೇಕೆಂದು ಅನಿಸುತ್ತದೆ. ಈಗಾಗಲೇ ಮುಡಾ ಮುಳುಗಿಸಿದ್ದು, ಇದೀಗ ಬಿಡಿಎ ಅಥವಾ ಇನ್ಯಾವುದೋ ನಿಗಮ, ಖಜಾನೆಗೇ ಕೈ ಹಾಕಿ ಹಣ ವರ್ಗಾವಣೆ ಮಾಡುತ್ತೀರಾ ಎಂದು ಕಾಂಗ್ರೆಸ್ ನಾಯಕರನ್ನು ಪ್ರಶ್ನಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com