
ಬಳ್ಳಾರಿ: ಬಹುಕೋಟಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಕಾಂಗ್ರೆಸ್ ಶಾಸಕ ಬಿ.ನಾಗೇಂದ್ರ ಅವರು, ತಮಗೆ ಉತ್ತಮ ರಾಜಕೀಯ ಭವಿಷ್ಯ ಇದ್ದು, ಮುಖ್ಯಮಂತ್ರಿಯಾಗುವ ಅವಕಾಶ ಇದೆ ಎಂದು ಗುರುವಾರ ಹೇಳಿದ್ದಾರೆ.
ತಮ್ಮ ವಿರುದ್ಧ 18 ಕ್ರಿಮಿನಲ್ ಪ್ರಕರಣಗಳಿವೆ ಎಂಬ ಶಾಸಕ ಜನಾರ್ದನ ರೆಡ್ಡಿ ಹೇಳಿಕೆಗೆ ಪ್ರತಿಕ್ರಿಯಿಸಿದ ನಾಗೇಂದ್ರ, 100 ಕ್ರಿಮಿನಲ್ ಕೇಸ್ ಇರುವವರು ಮುಖ್ಯಮಂತ್ರಿಯಾದ ಉದಾಹರಣೆಗಳಿವೆ ಎಂದು ತಿರುಗೇಟು ನೀಡಿದರು.
ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ನಡೆದ 89.63 ಕೋಟಿ ರೂ. ಹಗರಣ ಬೆಳಕಿಗೆ ಬಂದ ನಂತರ ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನಂತರ ಜಾರಿ ನಿರ್ದೇಶನಾಲಯ ಅವರನ್ನು ಬಂಧಿಸಿತ್ತು. ಮೂರೂವರೆ ತಿಂಗಳ ಬಳಿಕ ಬುಧವಾರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.
ಇಂದು ವಾಲ್ಮೀಕಿ ಜಯಂತಿ ದಿನವೇ ಬಳ್ಳಾರಿಗೆ ಆಗಮಿಸಿದ ಮಾಜಿ ಸಚಿವರು, ಮುಂದಿನ ದಿನಗಳಲ್ಲಿ ನನಗೂ ಉತ್ತಮ ಭವಿಷ್ಯವಿದೆ. ನಾನು ಕಾಂಗ್ರೆಸ್‌ಗಾಗಿ ದುಡಿಯುವುದಾದರೆ ನಾನೇಕೆ ಮುಖ್ಯಮಂತ್ರಿಯಾಗಬಾರದು ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ನನ್ನಂತಹ ಸಾಮಾನ್ಯ ಕಾರ್ಯಕರ್ತನನ್ನು ಮಂತ್ರಿ ಮಾಡಲಿಲ್ಲವೇ? ಕಾಂಗ್ರೆಸ್ ಸಾಮಾನ್ಯ ಕಾರ್ಯಕರ್ತರನ್ನು ಗೌರವಿಸುವ ಸಂಪ್ರದಾಯ ಹೊಂದಿದೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾದ ಸಂದರ್ಭದಲ್ಲಿ ವಾಲ್ಮೀಕಿ ನಿಗಮದಲ್ಲಿನ ಅವ್ಯವಹಾರಗಳ ಬಗ್ಗೆ ವಿವರಿಸಿದ್ದೇನೆ. ಕಳೆದ ಮೂರು ತಿಂಗಳಲ್ಲಿ, ನಾನು ಅವರೊಂದಿಗೆ ಏನನ್ನೂ ಚರ್ಚಿಸಲು ಸಾಧ್ಯವಾಗಲಿಲ್ಲ. ನನ್ನ ಹಠಾತ್ ಬಂಧನದ ನಂತರ, ನಾನು ಅವರೊಂದಿಗೆ ಮಾತನಾಡಲು ಸಾಧ್ಯವಾಗಲಿಲ್ಲ. ನಡೆದ ಘಟನೆಯ ಬಗ್ಗೆ ಹೇಳಿದ್ದೇನೆ ಎಂದು ನಾಗೇಂದ್ರ ತಿಳಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಯತ್ನಿಸುತ್ತಿದೆ ಎಂದು ಆರೋಪಿಸಿದ ಮಾಜಿ ಸಚಿವರು, ಪರಪ್ಪನ ಅಗ್ರಹಾರ ಜೈಲಿನ ಗೋಡೆ ಮೇಲೆ ಬಿಜೆಪಿ ನಾಯಕರ ಹೆಸರು ಬರೆದು ಬಂದಿರುವೆ. ಅವರೆಲ್ಲಾ ಜೈಲು ಪಾಲಾಗ್ತಾರೆ ನೋಡುತ್ತಿರಿ ಎಂದು ಭವಿಷ್ಯ ನುಡಿದರು.
ನಾನು ಯಾವುದೇ ತಪ್ಪೇ ಮಾಡಿಲ್ಲ. ಇದೆಲ್ಲಾ ಸುಳ್ಳು ಆರೋಪ. ಸಣ್ಣ ದೋಷ ಇಲ್ಲದೇ ಹೊರ ಬರುವೆ ಎಂದು ಭಾವುಕರಾದ ನಾಗೇಂದ್ರ, ನನ್ನ ವಿರುದ್ಧ ಷಡ್ಯಂತ್ರ ನಡೆದಿದೆ. ನಾನು ಅಕ್ರಮ ಮಾಡಿರುವೆ ಎಂದು ಕೆಲವರು ನಂಬಿದ್ದಾರೆ. ಇದು ಸುಳ್ಳು ಎಂದು ನಾನು ಯಾರನ್ನೂ ನಂಬಿಸಬೇಕಿಲ್ಲ. ಈ ಸುಳ್ಳಿನ ಪ್ರಪಂಚದಲ್ಲಿ ಕೆಟ್ಟ ಕೆಲಸಕ್ಕೆ ಕೈ ಹಾಕಲು ಮುಂದಾಗಿದ್ದಾರೆ. ನಾನು ಹಲವು ಬಾರಿ ಜೈಲು ನೋಡಿದ್ದೇನೆ. ಆದರೆ ಒಂದು ಸುಳ್ಳು ತಗೊಂಡು ಬಂದು ನನ್ನ ಮೇಲೆ ಗೂಬೆ ಕೂರಿಸಿದ್ದಾರೆ ಎಂದು ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದರು.
ಇದೇ ವೇಳೆ ಮತ್ತೆ ಸಚಿವರಾಗುತ್ತೀರಾ? ಎಂಬ ಪ್ರಶ್ನೆಗೆ ಉತ್ತರಿಸಿದ ನಾಗೇಂದ್ರ, ಇದು ಪಕ್ಷದ ಹೈಕಮಾಂಡ್‌ಗೆ ಬಿಟ್ಟ ವಿಚಾರ. ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಇದು ಮುಖ್ಯಮಂತ್ರಿ, ಹೈಕಮಾಂಡ್ ಮತ್ತು ಪಕ್ಷದ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಿಗೆ ಬಿಟ್ಟ ವಿಚಾರ. ಅವರು ಯಾವುದೇ ನಿರ್ಧಾರ ತೆಗೆದುಕೊಂಡರೂ ನಾನು ಅದಕ್ಕೆ ಬದ್ಧನಾಗಿರುತ್ತೇನೆ ಎಂದು ಹೇಳಿದರು.
Advertisement