
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುಟುಂಬದವರು ಭಾಗಿಯಾಗಿದ್ದಾರೆ ಎನ್ನಲಾದ ಮುಡಾ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ (ಇಡಿ) ದಾಳಿಯನ್ನು ಪ್ರತಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ಸ್ವಾಗತಿಸಿದ್ದು, ಹಗರಣ ಬಯಲಿಗೆಳೆಯಲು ಮತ್ತು ಸತ್ಯ ಹೊರಬರಲು ಇಡಿ ತನಿಖೆ ಅಗತ್ಯವಾಗಿದೆ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಆರೋಪಿಯಾಗಿರುವ ಪ್ರಕರಣದ ಇಡಿ ತನಿಖೆಯನ್ನು ಪ್ರಶ್ನಿಸಿರುವ ಆಡಳಿತಾರೂಢ ಕಾಂಗ್ರೆಸ್ ನ್ನು ಎರಡು ಪಕ್ಷಗಳ ನಾಯಕರು ತರಾಟೆಗೆ ತೆಗೆದುಕೊಂಡಿದ್ದು, ಅವರ ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುವ ಲೋಕಾಯುಕ್ತ ಪೊಲೀಸರಿಂದ ಪ್ರಕರಣದ ನ್ಯಾಯಯುತ ತನಿಖೆ ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಅಕ್ರಮಗಳ ಆರೋಪದ ಮೇಲೆ ಇಡಿ ಶುಕ್ರವಾರ ಕಚೇರಿ ಮೇಲೆ ದಾಳಿ ನಡೆಸಿದ್ದು, ದಾಖಲೆ ಪತ್ರಗಳನ್ನು ಪರಿಶೀಲಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಇಡಿ ದಾಳಿ ಕುರಿತು ಪ್ರತಿಕ್ರಿಯಿಸಿದ ವಿಪಕ್ಷ ನಾಯಕ ಆರ್.ಅಶೋಕ್, ಸಿಎಂ ಸಿದ್ದರಾಮಯ್ಯ ಅವರದ್ದೂ ಸೇರಿದಂತೆ ಸುಮಾರು 1,200ಕ್ಕೂ ಅಧಿಕ ನಿವೇಶನಗಳ ಹಗರಣ ನಡೆದಿದೆ ಎಂಬ ದೂರು ಬಂದಿದ್ದು, ಅದಕ್ಕಾಗಿ ಇಡಿ ದಾಳಿ ಮಾಡಿದೆ. 3-4 ಸಾವಿರ ಕೋಟಿ ರೂ. ಹಗರಣ ನಡೆದಿದೆ ಎಂದು ಮುಡಾ ಅಧ್ಯಕ್ಷರಾಗಿದ್ದ ಕಾಂಗ್ರೆಸ್ ನವರೇ ಆದ ಮರಿಗೌಡ ಪತ್ರದಲ್ಲಿ ತಿಳಿಸಿದ್ದರು. ಆದಾದ ಬಳಿಕ ಸ್ನೇಹಮಯಿ ಕೃಷ್ಣ ಇಜೀಗ ದೂರು ನೀಡಿದ್ದಾರೆ. ಇದರಲ್ಲಿ ರಾಜಕೀಯ ಪ್ರಶ್ನೆ ಉದ್ಬವವೇ ಆಗುವುದಿಲ್ಲ. ಬಿಜೆಪಿ ಅಥವಾ ಕೇಂದ್ರ ಸರ್ಕಾರದ ಪಾತ್ರ ಇಲ್ಲ ಎಂದರು.
ಇದನ್ನು ರಾಜಕೀಯವಾಗಿ ನೋಡಬಾರದು. ನಿವೇಶನಗಳು ವಾಪಸ್ ಸಿಕ್ಕರೆ ಹಾಗೂ ಹಣ ಸಿಕ್ಕರೆ ರಾಜ್ಯ ಸರ್ಕಾರಕ್ಕೆ ಲಾಭವಾಗುತ್ತದೆ. ಕಾಂಗ್ರೆಸ್ ದಾಳಿಯನ್ನು ಸ್ವಾಗತಿಸಬೇಕು.ಹಣ ವಶಕ್ಕೆ ಪಡೆಯಲು ಸಹಕಾರ ನೀಡಬೇಕು. ಇಡಿ ದಾಳಿ ಪ್ರಶ್ನಿಸುವವರು ಕೋರ್ಟ್ ಗೆ ಹೋಗಬಹುದು ಎಂದು ಹೇಳಿದರು.
ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಸಿದ್ದರಾಮಯ್ಯ ಮತ್ತು ನಗರಾಭಿವೃದ್ಧಿ ಖಾತೆ ಸಚಿವ ಬೈರತಿ ಸುರೇಶ್ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು, ಸತ್ಯಾಂಶ ಹೊರಬರಲು ತನಿಖೆಗೆ ಸಹಕಾರ ನೀಡಬೇಕು ಎಂದು ಒತ್ತಾಯಿಸಿದರು.
ಹೆಲಿಕಾಪ್ಟರ್ ನಲ್ಲಿ ದಾಖಲೆ ಸ್ಥಳಾಂತರಿಸಿದ್ದವರು ತನಿಖೆಯನ್ನು ಪ್ರಶ್ನಿಸುತ್ತಿದ್ದಾರೆ. ದಾಖಲೆಗಳನ್ನು ಈಗಾಗಲೇ ಸ್ಥಳಾಂತರಿಸಲಾಗಿದೆ. ಈಗ ಇಡಿ ದಾಖಲೆಗಳಾಗಿ ಶೋಧ ಕಾರ್ಯ ನಡೆಸುತ್ತಿದೆ. ಅವರಿಗೆ ಅವುಗಳನ್ನು ಹುಡುಕಲು ಆಗುತ್ತಿಲ್ಲ. ಫೈಲ್ ಗಳು ಎಲ್ಲಿಗೆ ಹೋದವು? ಅವುಗಳನ್ನು ಯಾಕೆ ಸ್ಥಳಾಂತರ ಮಾಡಲಾಯಿತು? ಎಂಬ ಎಲ್ಲಾ ಸಂಗತಿಗಳು ತನಿಖೆಯಿಂದ ಹೊರಬರಬೇಕು ಎಂದರು.
ಇಡಿ ದಾಳಿ ಟೀಕಿಸುತ್ತಿರುವ ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಕೇಂದ್ರ ಸಚಿವ ಹೆಚ್. ಡಿ. ಕುಮಾರಸ್ವಾಮಿ, ಮುಡಾ ಪ್ರಕರಣದಲ್ಲಿ ಲೋಕಾಯುಕ್ತ ತನಿಖೆಯಿಂದ ಸತ್ಯಾಂಶ ಹೊರಬರಲು ಸಾಧ್ಯವಿಲ್ಲ. ಇಡಿ ತನಿಖೆಯಿಂದ ಏನು ಬರುತ್ತದೆ ಎಂಬುದನ್ನು ನೋಡಬೇಕು. ತನಿಖೆಗೆ ನ್ಯಾಯಾಲಯ ಆದೇಶಿಸಿದೆ. ನ್ಯಾಯಯುತವಾಗಿ ತನಿಖೆ ಆಗಬೇಕು. ಆದರೆ, ಸಿಎಂ ಅಧೀನದಲ್ಲಿರುವ ಲೋಕಾಯುಕ್ತ ಅಧಿಕಾರಿಗಳು ಹೇಗೆ ಸಿಎಂ ವಿರುದ್ಧ ತನಿಖೆ ಮಾಡುತ್ತಾರೆ? ಅವರಿಂದ ಸತ್ಯಾಂಶ ಹೊರಬರಲಿದೆಯೇ ಎಂದು ಪ್ರಶ್ನಿಸಿದರು.
Advertisement