
ಮೈಸೂರು: ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದ ಯೋಗೇಶ್ವರ್ ಒಬ್ಬ ಫ್ರಾಡ್. ಅವನನ್ನು ಸೈನಿಕ ಎನ್ನಬಾರದು, ಸೈನಿಕ ಎನ್ನುವ ಮೂಲಕ ಸೈನಿಕರಿಗೆ ಅಪಮಾನ ಮಾಡಬಾರದು ಎಂದು ಏಕ ವಚನದ ಮೂಲಕ ವಿಧಾನಪರಿಷತ್ ಸದಸ್ಯ ಎಚ್. ವಿಶ್ವನಾಥ್ ಬುಧವಾರ ವಾಗ್ದಾಳಿ ನಡೆಸಿದ್ದಾರೆ.
ಸಿ.ಪಿ. ಯೋಗೇಶ್ವರ್ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಸೇರ್ಪಡೆಯಾದ ಬಳಿಕ ಅತ್ತ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಶ್ವನಾಥ್, 'ಸೈನಿಕ ಕುಲಕ್ಕೆ ಯೋಗೇಶ್ವರ್ ಅಪಮಾನ, ಅವನನ್ನು ಸೈನಿಕ ಅಂತ ಕರೆಯಬಾರದು’ ಕಾಂಗ್ರೆಸ್ಗೆ ಯೋಗೇಶ್ವರ್ ಅನಿವಾರ್ಯನಾ? ಎಂದು ಪ್ರಶ್ನಿಸಿದರು.
ಈಗಾಗಲೇ ಮುಡಾ, ವಾಲ್ಮೀಕಿ ಫ್ರಾಡ್ ಜೊತೆಗೆ ಯೋಗೇಶ್ವರ್ ಎಂಬ ಮೂರನೇ ಫ್ರಾಡ್ ಸೇರಿಸಿಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ ಕಾಂಗ್ರೆಸ್ ಪಕ್ಷವನ್ನು ಹಾಳು ಮಾಡುವ ಕೆಲಸ ಮಾಡುತ್ತಿದ್ದಾರೆ. ಮೂರು ಕ್ಷೇತ್ರಗಳ ಉಪಚುನಾವಣೆಯಿಂದ ಯಾವುದೇ ರಾಜಕೀಯ ಬದಲಾವಣೆ ಆಗುವುದಿಲ್ಲ ಎಂದರು.
ಜೈಲಿಗೆ ಹೋಗಿ ಬಂದ ಒಬ್ಬ ಮಂತ್ರಿಗೆ ಮೈಸೂರುಪೇಟ, ಹಾರ ಹಾಕಿ ಸ್ವಾಗತ ಮಾಡಿದ್ದೀರಿ. ನಿಮ್ಮನ್ನು ವಾಲ್ಮೀಕಿ ಸಮುದಾಯದ ಜನರು ನಂಬುವುದಿಲ್ಲ. ಗ್ಯಾರಂಟಿ ಯೋಜನೆಗಳು ಜನರನ್ನು ತಲುಪುತ್ತಿಲ್ಲ. ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ ಭೈರತಿ ಸುರೇಶ್ ನಂತಹ ಅಯೋಗ್ಯನನ್ನು ಮಂತ್ರಿ ಮಾಡಿಕೊಂಡು ರಾಜ್ಯಕ್ಕೆ ಮಸಿ ಬಳಿದಿದ್ದೀರಿ. ಕರ್ನಾಟಕ ಅಂದರೆ ಫ್ರಾಡ್ ಗಳ ಸಂತೆ ಆಗಿ ಹೋಗಿದೆ. ಇದಕ್ಕೆ ಸಿಎಂ ಸಿದ್ದರಾಮಯ್ಯ ನೇರ ಕಾರಣ ಎಂದು ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ಮಗ ಸೊಸೆ ಹೆಸರಿನಲ್ಲಿ ಪಬ್ ಮಾಡಿದ್ದಾರೆ. ಅದು 350 ಕೋಟಿ ಬೆಲೆ ಬಾಳುತ್ತದೆ. ಅದಕ್ಕೆ ಬೈರತಿ ಸುರೇಶ್ ಮಾಸ್ಟರ್ ಮೈಂಡ್. ಅವನ ಕ್ಷೇತ್ರದಲ್ಲೇ ಆ ಪಬ್ ಇದೆ. ಸಿದ್ದರಾಮಯ್ಯ ನಾನು ಒಳ್ಳೆಯವನು ಎಂದು ಡಂಗೂರ ಹೊಡೆಯುತ್ತಿದ್ದಾರೆ. ಆದರೆ ಅವರ ಸಾಚಾತನ ಜನಕ್ಕೆ ಗೊತ್ತಾಗಿದೆ. ಭೈರತಿ ಸುರೇಶ್ ಒಳಗೆ ಹಾಕಿದ್ರೆ ಎಲ್ಲಾ ವಿಚಾರ ಹೊರಗೆ ಬರುತ್ತದೆ ಎಂದರು.
ನಾನು ಕೂಡ ಮೂರು ಪಾರ್ಟಿಗಳಲ್ಲಿ ಗುರುತಿಸಿಕೊಂಡಿದ್ದೇನೆ. ಆದರೆ ನನ್ನ ತತ್ವ ಸಿದ್ದಾಂತ ಬಿಟ್ಟಿಲ್ಲ. ಜಂಡಾ ಬಿಟ್ಟರೂ ಅಜೆಂಡಾ ಬಿಟ್ಟಿಲ್ಲ. ಇತ್ತೀಚೆಗೆ ಪಕ್ಷ ರಾಜಕಾರಣದ ಬದಲು ವ್ಯಕ್ತಿ ರಾಜಕಾರಣ ಮುನ್ನೆಲೆಗೆ ಬಂದಿದೆ. ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷವನ್ನು ಸಂಪೂರ್ಣವಾಗಿ ಹಾಳು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
Advertisement