ಬೆಂಗಳೂರು: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ತೀವ್ರ ರಂಗೇರುತ್ತಿದ್ದು, ಬಿಜೆಪಿ ವಿಧಾನ ಪರಿಷತ್ ಸದಸ್ಯ ಹಾಗೂ ಚನ್ನಪಟ್ಟಣ ಟಿಕೆಟ್ ಆಕಾಂಕ್ಷಿಯಾಗಿದ್ದ ಸಿಪಿ ಯೋಗೇಶ್ವರ್ ಅವರು ಸೋಮವಾರ ತಮ್ಮ ವಿಧಾನ ಪರಿಷತ್ ಸ್ಥಾನಕ್ಕೆ ಯೋಗೇಶ್ವರ್ ರಾಜೀನಾಮೆ ನೀಡಿದ್ದಾರೆ. ಚನ್ನಪಟ್ಟಣ ಕ್ಷೇತ್ರದಿಂದ ಎನ್ ಡಿ ಎ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಕುರಿತು ಮಾಜಿ ಸಚಿವ ಸಿ ಪಿ ಯೋಗೇಶ್ವರ್ ಬೇಡಿಕೆ ಇಟ್ಟಿದ್ರು ಇದೀಗ ಎನ್ ಡಿ ಎ ಟಿಕೆಟ್ ಯೋಗೇಶ್ವರ್ ಗೆ ಸಿಗುವುದು ಡೌಟ್ ಎನ್ನಲಾಗಿದ್ದು, ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವರಾದ ಹೆಚ್ ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಮಾಡಲಿದ್ದಾರೆ ಎನ್ನಲಾಗಿದೆ.
ಕಾಂಗ್ರೆಸ್ ಪಕ್ಷ ಸೇರಲು ಸಜ್ಜಾಗಿರುವ ಸಿ.ಪಿ.ಯೋಗೇಶ್ವರ್ ಜೇಬಿನಲ್ಲಿ ಐದು ಬಿ ಫಾರಂ ಇಟ್ಟುಕೊಂಡು ತಿರುಗಾಡುತ್ತಿದ್ದಾರೆಂಬ ಮಾಹಿತಿ ಬಂದಿದೆ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆರೋಪಿಸಿದ್ದಾರೆ.
ಮಂಗಳವಾರ ಜೆಡಿಎಸ್ ಕಾರ್ಯಕರ್ತರು, ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ‘ನಾನು ಹೊಂದಾಣಿಕೆ ರಾಜಕೀಯ ಮಾಡಲ್ಲ. ಒಂದು ಪಕ್ಷದಲ್ಲಿದ್ದು ಬೇರೆ ಪಕ್ಷಗಳ ‘ಬಿ ಫಾರಂ’ ಇಟ್ಟುಕೊಂಡು ಓಡಾಡುವುದು ಗೊತ್ತಿಲ್ಲ. ಹಾಗೆ ಮಾಡುವ ಜಾಯಮಾನವೂ ನನ್ನದಲ್ಲ’ ಎಂದು ಅವರು ಹೇಳಿದರು. ರಾಜ್ಯದ ಬಿಜೆಪಿ ನಾಯಕರು ಯೋಗೇಶ್ವರ್ ಪರ ಬ್ಯಾಟಿಂಗ್ ಮಾಡ್ತಿದ್ದೀರಿ. ಈಗ ಯೋಗೇಶ್ವರ್ ಕಾಂಗ್ರೆಸ್ ಮನೆ ಬಾಗಿಲು ಮುಂದೆ ನಿಂತಿರುವ ಬಗ್ಗೆ ಸುದ್ದಿ ಕೇಳಿ ಬರುತ್ತಿದೆ’ ಎಂದು ದೂರಿದರು.
ಯೋಗೇಶ್ವರ್ ಗೆ ನೀವು ಒಪ್ಕೊಳೋದಾದ್ರೆ ಜೆಡಿಎಸ್ ಚಿಹ್ನೆಯಡಿ ಸ್ಪರ್ಧೆ ಮಾಡಿ ಎಂದು ಹೇಳಿದ್ದೆವು. ಈ ಹಿಂದೆ ಯಾವುದಾದರೂ ಚಿಹ್ನೆ ಸರಿ ನಾನು ಸ್ಪರ್ಧೆ ಮಾಡುತ್ತೇನೆಂದು ಭಾಷಣ ಬಿಗಿದಿದ್ದರು. ಆದರೆ, ಈಗ ಅವರು ಬೇರೆ ವರಸೆಯ ಹೆಜ್ಜೆಗಳನ್ನು ಇಡುತ್ತಿದ್ದಾರೆ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಚುನಾವಣೆಯಲ್ಲಿ ದೇವೇಗೌಡರು ಸೋತಿಲ್ಲವೇ? ನಾನು ಎರಡು ಬಾರಿ ಸೋತಿರಬಹುದು, ಆದರೆ ಸತ್ತಿಲ್ಲ, ಹೀಗಾಗಿ ಚುನಾವಣೆಗೆ ಹೆದರಿ ಕೂರುವ ಜಾಯಮಾನ ನನ್ನದಲ್ಲ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ. ಮಂಡ್ಯದಲ್ಲಿ ಸ್ಪರ್ಧಿಸಲು ನನಗೆ ಮೊದಲು ಅವಕಾಶ ಕೊಟ್ಟರು. ಆ ಚುನಾವಣೆ ಯಾವ ರೀತಿ ನಡೆದಿದೆ ಅಂತ ಇಡೀ ರಾಜ್ಯದ ಜನತೆಗೆ ಗೊತ್ತು. ರಾಜಕೀಯ ಷಡ್ಯಂತ್ರ ಅಲ್ಲಿಗೆ ಮುಗಿಯಲಿಲ್ಲ. ರಾಮನಗರದಲ್ಲಿ ಕಾರ್ಯಕರ್ತರ ಒತ್ತಡದಿಂದ ನಾನು ಸ್ಪರ್ಧೆ ಮಾಡಿದೆ. ಅಲ್ಲೂ ಕಾಣದ ರಾಜಕೀಯ ಕೈವಾಡ ನಡೆಯಿತು. ಮೈತ್ರಿಗೆ ಎಲ್ಲೂ ಸಮಸ್ಯೆ ಆಗಬಾರದು. ಮುಂದೆ ಕಾಲವೇ ಉತ್ತರ ಕೊಡುತ್ತದೆ. ಚರ್ಚೆ ಕೂಡ ಆಗುತ್ತದೆ ಎಂದು ಹೇಳಿದರು.
ಯೋಗೇಶ್ವರ್ ಹೇಳಿಕೆಗಳನ್ನ ಗಮನಿಸಿದ್ದೇವೆ. ಅವರು ಗೊಂದಲದ ಹೇಳಿಕೆ ನೀಡಿದ್ದರು. ಆ ಮೇಲೆ ಕುಮಾರಸ್ವಾಮಿ, ಒಕ್ಕಲಿಗರನ್ನು ತುಳಿಯುತ್ತಿದ್ದಾರೆ ಅಂತೆಲ್ಲಾ ಹೇಳಿದ್ದರು. ಆದರೆ ಎರಡು ದಿನಗಳಿಂದ ಏನೆಲ್ಲ ನಡೆಯುತ್ತಿದೆ ಎನ್ನುವುದು ನನಗೆ ಗೊತ್ತಿದೆ. ಸಿಎಂ, ಡಿಸಿಎಂ, ಸಚಿವರು, ಅಕ್ಕ-ಪಕ್ಕದ ನಾಯಕರು ಯೋಗೇಶ್ವರ್‌ಗೆ ಟಿಕೆಟ್ ಕೊಡುತ್ತೇವೆ ಎನ್ನುತ್ತಿದ್ದಾರೆ ಎಂದು ಅವರು ತಿಳಿಸಿದರು. ಚನ್ನಪಟ್ಟಣ ಉಪಚುನಾವಣೆಗೆ ನಾನು ಹೆದರುವುದಿಲ್ಲ ಏಕೆಂದರೆ ಜೆಡಿಎಸ್ ಕಾರ್ಯಕರ್ತರು ನಮಗೆ ಬೆಂಬಲ ನೀಡುತ್ತಿದ್ದಾರೆ. ಪಕ್ಷದಿಂದ ಲಾಭ ಪಡೆದರೂ ಮಾಜಿ ಜೆಡಿಎಸ್ ನಾಯಕರು ತಮ್ಮನ್ನು ನಿರಾಸೆಗೊಳಿಸಿದರು. ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಕೇಂದ್ರ ನಾಯಕತ್ವದ ಬಗ್ಗೆ ಹೆಚ್ಚಿನ ಗೌರವ ಹೊಂದಿರುವುದರಿಂದ ಬಿಜೆಪಿಯೊಂದಿಗೆ ಜೆಡಿಎಸ್ ಮೈತ್ರಿಗೆ ಯಾವುದೇ ಬೆದರಿಕೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು. 2007ರಲ್ಲಿ ಬಿಜೆಪಿ ಜೊತೆಗಿನ ಜೆಡಿಎಸ್ ಮೈತ್ರಿ ಕಡಿದುಕೊಳ್ಳುವಂತೆ ದೇವೇಗೌಡರು ಸಲಹೆ ನೀಡದಿದ್ದರೆ ಕುಮಾರಣ್ಣ 15 ವರ್ಷ ಸಿಎಂ ಆಗಿರುತ್ತಿದ್ದರು ಎಂದು ನಿಖಿಲ್ ಹೇಳಿದ್ದಾರೆ.
ಸಭೆಯಲ್ಲಿದ್ದ ದೇವೇಗೌಡರು ಮಾತನಾಡಲಿಲ್ಲ. ಒಂದು ವೇಳೆ ನಿಖಿಲ್ ಕಣಕ್ಕಿಳಿಯದಿದ್ದಲ್ಲಿ ಪರ್ಯಾಯ ಅಭ್ಯರ್ಥಿಗಳಾದ ಜೆಡಿಎಲ್ ಪಿ ಮುಖಂಡ ಸಿ.ಬಿ.ಸುರೇಶ್ ಬಾಬು, ಪಕ್ಷದ ಹಿರಿಯ ಮುಖಂಡ ಜಯಮುತ್ತು ಅವರನ್ನು ಕಣಕ್ಕಿಳಿಸಿಬಹುದು. ಆದರೆ, ಕುಮಾರಸ್ವಾಮಿ ಅವರ ಪತ್ನಿ ಅನಿತಾ ಅವರೇ ಅಭ್ಯರ್ಥಿಯಾಗಬಹುದು ಎಂಬ ಗುಸುಗುಸು ಇನ್ನೂ ಕೇಳಿಬರುತ್ತಿದೆ. ನಾಮಪತ್ರ ಸಲ್ಲಿಕೆಗೆ ಇನ್ನು ಮೂರು ದಿನ ಬಾಕಿ ಉಳಿದಿದ್ದು, ತೀರ್ಮಾನಿಸಲು ಸಾಕಷ್ಟು ಸಮಯವಿದೆ ಎಂದು ಕುಮಾರಸ್ವಾಮಿ ಸಮರ್ಥಿಸಿಕೊಂಡಿದ್ದಾರೆ.
Advertisement