
ರಾಮನಗರ: ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಮಾಜಿ ಸಚಿವ ಸಿ ಪಿ ಯೋಗೀಶ್ವರ್ ಅವರು ನವೆಂಬರ್ 13 ರಂದು ನಡೆಯಲಿರುವ ಚನ್ನಪಟ್ಟಣ ವಿಧಾನಸಭಾ ಉಪಚುನಾವಣೆಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಗುರುವಾರ ನಾಮಪತ್ರ ಸಲ್ಲಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಸೇರಿದಂತೆ ಪಕ್ಷದ ಪ್ರಮುಖರು ಸಿಪಿ ಯೋಗೇಶ್ವರ್ ಅವರಿಗೆ ಸಾಥ್ ನೀಡಿದರು.
ಯೋಗೀಶ್ವರ್ ಅವರು ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಮಾಜಿ ಸಂಸದ ಡಿ.ಕೆ.ಸುರೇಶ್ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರೊಂದಿಗೆ ಒಂದೂವರೆ ಕಿಲೋ ಮೀಟರ್ ಬೃಹತ್ ರೋಡ್ ಶೋ ನಡೆಸಿದ್ದು, ಪಕ್ಷದ ಕಾರ್ಯಕರ್ತರು ಮತ್ತು ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು.
ರೋಡ್ ಶೋ ಮೂಲಕ ಚನ್ನಪಟ್ಟಣ ತಾಲೂಕು ಕಚೇರಿಗೆ ಆಗಮಿಸಿದ ಸಿಪಿ ಯೋಗೇಶ್ವರ್, ತಮ್ಮ ಉಮೇದುವಾರಿಕೆ ಸಲ್ಲಿಸಿದರು. ಸಿಪಿ ಯೋಗೇಶ್ವರ್ ನಾಮಪತ್ರ ಸಲ್ಲಿಕೆ ವೇಳೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್, ಸಚಿವರು, ಶಾಸಕರು ಉಪಸ್ಥಿತರಿದ್ದರು. ಯೋಗೀಶ್ವರ ಅವರು ಬುಧವಾರ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದರು.
ಚನ್ನಪಟ್ಟಣ ಶಾಸಕರಾಗಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಮತ್ತು ಈಗ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾದ ನಂತರ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅವರಿಂದ ತೆರವಾದ ಸ್ಥಾನಕ್ಕೆ ಚನ್ನಪಟ್ಟಣ ಉಪಚುನಾವಣೆ ನಡೆಯುತ್ತಿದೆ.
ಉಪಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ನೇರ ಸ್ಪರ್ಧೆ ಏರ್ಪಡಲಿದೆ.
ನಾಮಪತ್ರ ಸಲ್ಲಿಸಿದ ಬಳಿಕ ಮಾತನಾಡಿದ ಸಿಪಿ ಯೋಗೀಶ್ವರ ಅವರು, ಸಿದ್ದರಾಮಯ್ಯನವರ ವೈಯಕ್ತಿಕ ಉಪಸ್ಥಿತಿ ಮತ್ತು ಆಶೀರ್ವಾದ, ಡಿಕೆ ಶಿವಕುಮಾರ್ ಮತ್ತು ಸುರೇಶ್ ಅವರ ಬೆಂಬಲ ಮತ್ತು ಸಹಕಾರವು ನನಗೆ "ದೊಡ್ಡ ಶಕ್ತಿ" ಎಂದು ಹೇಳಿದರು.
ಯೋಗೀಶ್ವರ ಅವರು ಚನ್ನಪಟ್ಟಣದಲ್ಲಿ ಜನಪ್ರಿಯ ನಾಯಕರಾಗಿದ್ದು, ಐದು ಬಾರಿ ಶಾಸಕರಾಗಿ, ಸಚಿವರಾಗಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದು, ತಾಲ್ಲೂಕಿನ ಕೆರೆಗಳಿಗೆ ನೀರು ತುಂಬಿಸುವ ಕೆಲಸವನ್ನು ಮಾಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಜೆಡಿಎಸ್ ಅಭ್ಯರ್ಥಿಯಾಗಿ ಯಾರನ್ನು ಬೇಕಾದರೂ ಕಣಕ್ಕಿಳಿಸಲಿ. ಕುಮಾರಸ್ವಾಮಿ ಅವರೇ ಸ್ಪರ್ಧಿಸಲಿ ಅಥವಾ ಅವರ ಮಗ ಅಥವಾ ಹೆಂಡತಿಯನ್ನು ಕಣಕ್ಕಿಳಿಸಲಿ. ನಮ್ಮ ಅಭ್ಯರ್ಥಿ ಯೋಗೀಶ್ವರ ಅವರು ನೂರಕ್ಕೆ ನೂರು ಗೆಲ್ಲುತ್ತಾರೆ, ಅವರು ಗೆಲ್ಲುವ ಕುದುರೆ" ಎಂದು ಸಿಎಂ ಹೇಳಿದರು.
2023ರ ವಿಧಾನಸಭಾ ಚುನಾವಣೆಯಲ್ಲಿ ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ ಅವರು 96,592 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು. ಸಿಪಿ ಯೋಗೀಶ್ವರ್ ಅವರು 80,677 ಮತಗಳನ್ನು ಪಡೆದಿದ್ದರು. ಆಗ ಕಾಂಗ್ರೆಸ್ ಅಭ್ಯರ್ಥಿ ಕೇವಲ 15,374 ಮತಗಳನ್ನು ಪಡೆದಿದ್ದರು.
Advertisement