ಬೆಂಗಳೂರು: ಬೊಂಬೆಗಳ ನಾಡು ಚನ್ನಪಟ್ಟಣ ವಿಧಾನಸಭೆ ಉಪ ಚುನಾವಣೆ ಕಾವು ಹೆಚ್ಚಾಗಿದೆ. ರಾಜಕೀಯದಲ್ಲಿ ಮೂರನೇ ಬಾರಿ ಅಗ್ನಿಪರೀಕ್ಷೆಗೆ ಇಳಿದಿರುವ ಎನ್ ಡಿಎ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಮೇಲೆ ಎಲ್ಲರ ಗಮನ ಕೇಂದ್ರೀಕೃತವಾಗಿದೆ.
ಜೆಡಿಎಸ್ ರಾಜ್ಯಾಧ್ಯಕ್ಷ, ಕೇಂದ್ರ ಸಚಿವ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿಯವರ ಮಗ ನಿಖಿಲ್ ನಿನ್ನೆ ತಮ್ಮ ಕುಟುಂಬ ಸದಸ್ಯರು ಮತ್ತು ಬೆಂಬಲಿಗರೊಂದಿಗೆ ಸೇರಿ ನಾಮಪತ್ರ ಸಲ್ಲಿಸಿದ್ದಾರೆ. ಈ ಹಿಂದೆ ಮಂಡ್ಯ ಲೋಕಸಭೆ ಮತ್ತು ರಾಮನಗರ ವಿಧಾನಸಭೆ ಕ್ಷೇತ್ರಗಳ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದ ನಿಖಿಲ್ ಕುಮಾರಸ್ವಾಮಿಗೆ ಈ ಬಾರಿ ಅದೃಷ್ಟ ಕೈಹಿಡಿಯುತ್ತದೆಯೇ ಅಥವಾ ಕೈಕೊಡುತ್ತದೆಯೇ ಎಂಬುದು ಕುತೂಹಲವಾಗಿದೆ.
ಈ ಬಾರಿ ಚನ್ನಪಟ್ಟಣ ಜನತೆ ನನ್ನ ಕೈಹಿಡಿಯುತ್ತಾರೆ, ಕೈಬಿಡುವುದಿಲ್ಲ ಎಂದು ವಿಶ್ವಾಸದಿಂದ ನುಡಿಯುತ್ತಾರೆ ನಿಖಿಲ್. ಬಿಜೆಪಿ-ಜೆಡಿಎಸ್ ನಾಯಕರು ಕೂಡ ಇದೇ ರೀತಿಯ ಆಶಾವಾದದ ನುಡಿಗಳನ್ನು ಹೇಳುತ್ತಾರೆ. ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ನಿಖಿಲ್ 30ರಿಂದ 40 ಸಾವಿರ ಮತಗಳ ಅಂತರದಲ್ಲಿ ಗೆಲ್ಲುತ್ತಾರೆ ಎಂದರು. ಈ ಹಿಂದಿನ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಏರ್ಪಟ್ಟಿದ್ದ ತ್ರಿಕೋನ ಸ್ಪರ್ಧೆಯಲ್ಲಿ ಕುಮಾರಸ್ವಾಮಿಯವರು 15 ಸಾವಿರ ಮತಗಳ ಅಂತರದಿಂದ ಗೆದ್ದಿದ್ದರು ಎಂದು ಅವರು ಅಂಕಿಅಂಶ ಮುಂದಿಡುತ್ತಾರೆ.
ಈ ಬಾರಿ ಕಾಂಗ್ರೆಸ್ ವಿರುದ್ಧ ಆಡಳಿತ ವಿರೋಧಿ ಅಲೆ ಇದೆ, ಬಿಜೆಪಿ-ಜೆಡಿಎಸ್ ಮೈತ್ರಿ ಜನತೆಗೆ ಇಷ್ಟವಾಗಿ ನಿಖಿಲ್ ಗೆ ಮತ ಹಾಕುತ್ತಾರೆ ಎಂದರು. ಮಾಜಿ ಸಿಎಂ ಯಡಿಯೂರಪ್ಪ ಸಹ ನಿಖಿಲ್ ಗೆ ಗೆಲ್ಲುವ ಸಾಧ್ಯತೆ ಹೆಚ್ಚಾಗಿದೆ ಎನ್ನುತ್ತಾರೆ.
ಆದರೆ, ಬಿಜೆಪಿ-ಜೆಡಿಎಸ್ ಮೈತ್ರಿಯಲ್ಲಿ ಎಲ್ಲರಲ್ಲಿಯೂ ಈ ವಿಶ್ವಾಸ ಕಂಡುಬರುತ್ತಿಲ್ಲ, ನಾಮಪತ್ರ ಸಲ್ಲಿಕೆ ವೇಳೆ ಸಿ ಪಿ ಯೋಗೇಶ್ವರ್ ಗಿಂತ ಹೆಚ್ಚಿನ ಜನರು ನಿಖಿಲ್ ನಾಮಪತ್ರ ಸಲ್ಲಿಸುವಾಗ ಸೇರಿದ್ದರು. ನಿನ್ನೆ ಸುಮಾರು 20 ಸಾವಿರ ಮಂದಿ ಬೆಂಬಲಿಗರು ಜಮಾಯಿಸಿದ್ದರು ಎನ್ನಲಾಗುತ್ತಿದೆ, ಆದರೆ ಇದೆಲ್ಲವೂ ಮತಗಳಾಗಿ ಪರಿವರ್ತನೆಯಾಗುವುದು ಸಂಶಯವಿದೆ. ಯೋಗೇಶ್ವರ್ ಅವರು ಉಪ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವನ್ನು ಕಾಂಗ್ರೆಸ್ ನ ಮಾಜಿ ಸಂಸದ ಡಿ.ಕೆ.ಸುರೇಶ್ ಹಾಗೂ ಸಿಎಂ ಸಿದ್ದರಾಮಯ್ಯ ಬಹಿರಂಗವಾಗಿ ವ್ಯಕ್ತಪಡಿಸಿದ್ದಾರೆ.
ಚನ್ನಪಟ್ಟಣದ ಜನಸಂಖ್ಯಾಶಾಸ್ತ್ರವು ಚುನಾವಣಾ ಚಿತ್ರಣದ ಸಂಕೀರ್ಣತೆ ತೋರಿಸುತ್ತದೆ. ಚನ್ನಪಟ್ಟಣ ಕ್ಷೇತ್ರದಲ್ಲಿ ಸರಿಸುಮಾರು 1,04,000 ಒಕ್ಕಲಿಗರು, 28,000 ಮುಸ್ಲಿಮರು, 38,000 ಪರಿಶಿಷ್ಟ ಜಾತಿಗಳು, 6,000 ಪರಿಶಿಷ್ಟ ಪಂಗಡಗಳು ಮತ್ತು ಗಮನಾರ್ಹ ಸಂಖ್ಯೆಯಲ್ಲಿ ಇತರ ಹಿಂದುಳಿದ ಸಮುದಾಯದ ಮತದಾರರು ಇದ್ದಾರೆ. ಒಕ್ಕಲಿಗ ಮತಗಳು ಇಬ್ಬರು ಅಭ್ಯರ್ಥಿಗಳ ನಡುವೆ ವಿಭಜನೆಯಾಗಬಹುದು ಎಂದು ವಿಶ್ಲೇಷಕರು ನಿರೀಕ್ಷಿಸಿದರೆ, ಅಲ್ಪಸಂಖ್ಯಾತರು, ಎಸ್‌ಸಿ ಮತ್ತು ಹಿಂದುಳಿದ ಸಮುದಾಯದ ಮತದಾರರು ಸಿ ಪಿ ಯೋಗೇಶ್ವರ್ ಬೆಂಬಲಿಸಬಹುದು ಎಂದು ಹೇಳಲಾಗುತ್ತಿದೆ, ಇದರಿಂದ ಯೋಗೇಶ್ವರ್ ಗೆ ಗೆಲುವಿನ ಸಾಧ್ಯತೆ ಹೆಚ್ಚಾಗಿದೆ.
ರಾಜಕೀಯ ವಿಶ್ಲೇಷಕರು ವಿಭಿನ್ನ ಅಭಿಪ್ರಾಯ ಹೊಂದುತ್ತಾರೆ. ಕೆಲವರು ಯೋಗೇಶ್ವರ್ ಅವರಿಗೆ ಸುಲಭ ಗೆಲುವು ಎಂದು ಊಹಿಸಿದರೆ ಇನ್ನು ಕೆಲವರು ಜೆಡಿಎಸ್-ಬಿಜೆಪಿ ಮೈತ್ರಿಯು ಕಾಂಗ್ರೆಸ್‌ನೊಳಗಿನ ಭಿನ್ನಾಭಿಪ್ರಾಯದ ಲಾಭವನ್ನು ಸರಿದೂಗಿಸಬಹುದು ಎಂದು ವಾದಿಸುತ್ತಾರೆ,
ಜೆಡಿಎಸ್ ನಾಯಕರು ಈ ಬಾರಿ ಜಾಗರೂಕತೆಯ ಹೆಜ್ಜೆಯಿಡುತ್ತಿದ್ದಾರೆ, ಒಂದು ವೇಳೆ ನಿಖಿಲ್ ಸೋತರೂ ಕೂಡ ಮುಂದಿನ ಸಲಕ್ಕೆ ಅನುಕಂಪದ ಅಲೆಯನ್ನು ನಿರ್ಮಿಸಬಹುದು ಇದರಿಂದ ಭವಿಷ್ಯಕ್ಕೆ ಪ್ರಯೋಜನವಾಗಬಹುದು ಎಂಬುದು ಅವರ ಅನಿಸಿಕೆಯಾಗಿದೆ.
ಇಲ್ಲಿಯವರೆಗಿನ ನಿಖಿಲ್ ರಾಜಕೀಯ ಪಯಣ ಸವಾಲಿನಿಂದ ಕೂಡಿದೆ. 2019 ರ ಲೋಕಸಭಾ ಚುನಾವಣೆಯಲ್ಲಿ, ಜಿಲ್ಲೆಯ ಎಂಟು ಶಾಸಕರ ಪೈಕಿ ಜೆಡಿಎಸ್ ಏಳು ಶಾಸಕರನ್ನು ಹೊಂದಿದ್ದರೂ ಸಹ, ನಿಖಿಲ್ ಮಂಡ್ಯದಿಂದ ಸ್ವತಂತ್ರ ಅಭ್ಯರ್ಥಿ ಸುಮಲತಾ ಅಂಬರೀಶ್ ವಿರುದ್ಧ ಸೋತರು. ಕಳೆದ ವರ್ಷ ರಾಮನಗರದಲ್ಲಿ ಅವರು ಮತ್ತೊಂದು ಸೋಲನ್ನು ಎದುರಿಸಿದರು, ಅಲ್ಲಿ ಅವರು ಕ್ಷೇತ್ರದವರಿಗೆ ಅಪರಿಚಿತರಾಗಿದ್ದ ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಹುಸೇನ್ ವಿರುದ್ಧ ಸುಮಾರು 10,000 ಮತಗಳ ಅಂತರದಿಂದ ಸೋತಿದ್ದರು.
ಈಗ ಮೂರನೇ ಬಾರಿಗೆ ಚನ್ನಪಟ್ಟಣದ ಮತದಾರರ ನಿರ್ಧಾರದ ಮೇಲೆ ನಿಖಿಲ್ ರಾಜಕೀಯ ಭವಿಷ್ಯ ನಿಂತಿದೆ.
Advertisement