
ಬೆಂಗಳೂರು: ‘ಒಂದು ರಾಷ್ಟ್ರ, ಒಂದು ಚುನಾವಣೆ’ ಕುರಿತು ಪ್ರಧಾನಿ ಮೋದಿಯವರ ಹೇಳಿಕೆಯನ್ನು ಗುರುವಾರ ಸ್ಪಷ್ಟವಾಗಿ ತಳ್ಳಿಹಾಕಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ಸಂಸತ್ತಿನಲ್ಲಿ ಒಮ್ಮತವಿಲ್ಲದೆ ಒಂದು ರಾಷ್ಟ್ರ, ಒಂದು ಚುನಾವಣೆ ಅಸಾಧ್ಯ ಎಂದು ಹೇಳಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ ಖರ್ಗೆ, 'ಪ್ರಧಾನಿ ಮೋದಿ ಏನು ಹೇಳಿದ್ದಾರೋ ಅದನ್ನು ಮಾಡುವುದಿಲ್ಲ. ಏಕೆಂದರೆ ಸಂಸತ್ತಿಗೆ ಬಂದಾಗ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು, ಆಗ ಮಾತ್ರ ಇದು ಜಾರಿಗೊಳಿಸಲು ಸಾಧ್ಯ. ಆದರೆ ಅವರು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದಿಲ್ಲ. ಹೀಗಾಗಿ ಒಂದು ನೇಷನ್ ಒನ್ ಎಲೆಕ್ಷನ್ ಅಸಾಧ್ಯ ಎಂದರು.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು 'ಒಂದು ರಾಷ್ಟ್ರ, ಒಂದು ಚುನಾವಣೆ' ಮತ್ತು ಜಾತ್ಯತೀತ ನಾಗರಿಕ ಸಂಹಿತೆಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂದು ಪ್ರಧಾನಿ ಮೋದಿ ಇಂದು ಹೇಳಿದ್ದಾರೆ.
ಗುಜರಾತ್‌ನ ಕೆವಾಡಿಯಾದಲ್ಲಿ ನಡೆದ ರಾಷ್ಟ್ರೀಯ ಏಕತಾ ದಿನವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, "ನಾವು ಈಗ ಒಂದು ರಾಷ್ಟ್ರ ಒಂದು ಚುನಾವಣೆಯತ್ತ ಕೆಲಸ ಮಾಡುತ್ತಿದ್ದೇವೆ. ಇದು ಭಾರತದ ಪ್ರಜಾಪ್ರಭುತ್ವವನ್ನು ಬಲಪಡಿಸುತ್ತದೆ. ದೇಶವು ಈಗ ಕನಸನ್ನು ನನಸಾಗಿಸುವಲ್ಲಿ ಹೊಸ ವೇಗವನ್ನು ಪಡೆಯುತ್ತಿದೆ. ಅಭಿವೃದ್ಧಿ ಹೊಂದಿದ ಭಾರತ ಇಂದು, ಒಂದು ರಾಷ್ಟ್ರ ಒಂದು ನಾಗರಿಕ ಸಂಹಿತೆಯತ್ತ ಸಾಗುತ್ತಿದೆ. ಅದುವೆ ಸೆಕ್ಯುಲರ್ ಸಿವಿಲ್ ಕೋಡ್ ಆಗಿದೆ ಎಂದು ಮೋದಿ ಹೇಳಿದ್ದರು.
Advertisement