ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದಂತೆ ಈಗ ಲೂಟಿಕೋರ ಅಧಿಕಾರಿಯ ಅಮಾನತು: ವಿಜಯೇಂದ್ರ

ಸರ್ಕಾರ ಈ ಕೂಡಲೇ 50:50ಅನುಪಾತದಲ್ಲಿ ಮುಡಾದಲ್ಲಿ ವಿತರಣೆಯಾಗಿರುವ ಸಾವಿರಾರು ನಿವೇಶನಗಳ ಕ್ರಯವನ್ನು ರದ್ದುಗೊಳಿಸಿ ಅಧಿಸೂಚನೆ ಹೊರಡಿಸಲಿ ಎಂದು ವಿಜಯೇಂದ್ರ ಆಗ್ರಹಿಸಿದ್ದಾರೆ.
ಬಿವೈ ವಿಜಯೇಂದ್ರ
ಬಿವೈ ವಿಜಯೇಂದ್ರ
Updated on

ಬೆಂಗಳೂರು: ಮುಡಾ ಹಿಂದಿನ ಆಯುಕ್ತ ದಿನೇಶ್‌ ಕುಮಾರ್‌ ಅವರನ್ನು ಅಮಾನತು ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ವಿಜಯೇಂದ್ರ, ‘ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದಂತೆ’ ಕನಿಷ್ಟ ಈಗಲಾದರೂ ಲೂಟಿಕೋರ ಅಧಿಕಾರಿಯೊಬ್ಬರನ್ನು ಅಮಾನತುಗೊಳಿಸಿದೆ ಎಂದು ಹೇಳಿದ್ದಾರೆ.

ಈ ಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ಶೇಕಡ 50:50ರ ಅನುಪಾತದಲ್ಲಿ ಪೂರ್ವಾನ್ವಯವಾಗಿ ನಿವೇಶನ ಪಡೆಯುವುದು ನಿಯಮಬಾಹಿರ ಎಂದು ನಮ್ಮ ಬಿಜೆಪಿ ಸರ್ಕಾರದ ಅವಧಿಯಲ್ಲಿ ನೇಮಿಸಿದ್ದ ತಾಂತ್ರಿಕ ಸಮಿತಿ ಕಳೆದ 3-11-2023 ರಂದೇ ಕಾಂಗ್ರೆಸ್ ಸರ್ಕಾರಕ್ಕೆ ವಿಸ್ತೃತ ವರದಿ ಸಲ್ಲಿಸಿತ್ತು. ಈ ವರದಿಯಲ್ಲಿ ಮುಡಾದಲ್ಲಿ ನಡೆಯುತ್ತಿದ್ದ ಬ್ರಹ್ಮಾಂಡ ಭ್ರಷ್ಟಾಚಾರಗಳ ಬಗ್ಗೆ ಪೂರ್ಣ ಮಾಹಿತಿಯನ್ನು ನೀಡಲಾಗಿತ್ತು.

ಬಿವೈ ವಿಜಯೇಂದ್ರ
Muda Scam: ಮೊದಲ ತಲೆದಂಡ, 'ಮುಡಾ' ಹಿಂದಿನ ಆಯುಕ್ತ GT Dinesh Kumar ಅಮಾನತು

ಕಾಂಗ್ರೆಸ್ ಸರ್ಕಾರದ ಭ್ರಷ್ಟ ಹಗರಣಗಳ ರಕ್ಷಣೆಯ ಪ್ರತೀಕವೆಂಬಂತೆ ಧೂಳು ಹಿಡಿದು ಕುಳಿತಿದ್ದ ತಾಂತ್ರಿಕ ಸಮಿತಿಯ ತನಿಖಾ ವರದಿಯ ಪ್ರತಿಯನ್ನು ನಾವು ಬಿಡುಗಡೆ ಮಾಡಿದ ನಂತರ ಗತ್ಯಂತರವಿಲ್ಲದೆ ಕೈಗೆತ್ತಿಕೊಂಡು ಇದೀಗ ಮುಡಾ ಬ್ರಹ್ಮಾಂಡ ಭ್ರಷ್ಟಾಚಾರದ ರೂವಾರಿಗಳಲ್ಲೊಬ್ಬರಾದ ಹಿಂದಿನ ಆಯುಕ್ತ ಜಿ. ಟಿ.ದಿನೇಶ್ ಕುಮಾರ್ ರನ್ನು ಅಮಾನತು ಗೊಳಿಸಲಾಗಿದೆ. ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದಂತೆ" ಕನಿಷ್ಟ ಈಗಲಾದರೂ ಲೂಟಿಕೋರ ಅಧಿಕಾರಿಯೊಬ್ಬರನ್ನು ಅಮಾನತುಗೊಳಿಸಿದೆ. ಸರ್ಕಾರ ಈ ಕೂಡಲೇ 50:50ಅನುಪಾತದಲ್ಲಿ ಮುಡಾದಲ್ಲಿ ವಿತರಣೆಯಾಗಿರುವ ಸಾವಿರಾರು ನಿವೇಶನಗಳ ಕ್ರಯವನ್ನು ರದ್ದುಗೊಳಿಸಿ ಅಧಿಸೂಚನೆ ಹೊರಡಿಸಲಿ ಎಂದು ಆಗ್ರಹಿಸಿದ್ದಾರೆ.

ಅಮಾನತಿಗೆ ನೀಡಿರುವ ಕಾರಣಗಳಲ್ಲಿ ಶೇಕಡ 50:50ರ ಅನುಪಾತದಲ್ಲಿ ನಿಯಮ ಬಾಹಿರವಾಗಿ ನಿವೇಶನಗಳನ್ನು ವಿತರಿಸಿರುವ ಅಂಶವನ್ನು ಪ್ರಮುಖವಾಗಿ ಉಲ್ಲೇಖಿಸಲಾಗಿದೆ, ಇದು ಏನು ಹೇಳುತ್ತದೆ ಎಂದರೆ ಶೇ 50:50 ರ ಅನುಪಾತದಲ್ಲಿ ಪೂರ್ವನ್ವಯವಾಗಿ ಮಾನ್ಯ ಸಿದ್ದರಾಮಯ್ಯನವರ ಪತ್ನಿಯವರಿಗೆ ಮಂಜೂರಾಗಿರುವ 14 ನಿವೇಶನಗಳು ಸಂಪೂರ್ಣ ಅಕ್ರಮ ಹಾಗೂ ನಿಯಮಬಾಹಿರ ಎಂಬುದು ಸ್ಪಷ್ಟವಾಗಿದೆ. ವಿಚಿತ್ರವೆಂದರೆ ಮುಖ್ಯಮಂತ್ರಿಗಳ ಕುಟುಂಬಕ್ಕೆ 14 ನಿವೇಶನಗಳನ್ನು ಬಳುವಳಿ ನೀಡಿದ ಹಿಂದಿನ ಆಯುಕ್ತರೊಬ್ಬರ ವಿರುದ್ಧ ಯಾವುದೇ ಕ್ರಮ ಜರುಗಿಸದೇ ಋಣ ಸಂದಾಯಮಾಡಲಾಗಿದೆ ಎಂದು ವಿಜಯೇಂದ್ರ ಟ್ವೀಟ್ ಮಾಡಿದ್ದಾರೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನ್ಯಾಯಾಲಯದ ಆದೇಶವನ್ನು ಕಾಯುವ ಅಗತ್ಯವಾದರೂ ಏನಿದೆ? ಸರ್ಕಾರವೇ ನಿಮ್ಮ ಧರ್ಮಪತ್ನಿ ಅವರು ಪಡೆದಿರುವ ನಿವೇಶನಗಳು ಅಕ್ರಮ ಹಾಗೂ ನಿಯಮ ಬಾಹಿರ ಎಂದು ಹೇಳಿರುವಾಗ ಈಗಲಾದರೂ ತಮ್ಮ ಭಂಡತನವನ್ನು ಪಕ್ಕಕ್ಕೆ ಸರಿಸಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸ್ಥಾನದ ಘನತೆಗೆ ಬಂದಿರುವ ಚ್ಯುತಿಯನ್ನು ಹೋಗಲಾಡಿಸಿ ಗೌರವ ಉಳಿಸಿಕೊಳ್ಳಿ ಎಂದು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com