
ಬೆಂಗಳೂರು: ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ಬದಲಾವಣೆಯಾಗಲಿದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ತಮ್ಮ ಸಂಪುಟದ ಸಚಿವರನ್ನು ಹಿಡಿದಿಟ್ಟುಕೊಳ್ಳಲು ಹೊಸ ತಂತ್ರದ ಮೊರೆ ಹೋಗಿದ್ದಾರೆ.
ಸಿಎಂ ಸಿದ್ದರಾಮಯ್ಯ ಇತ್ತೀಚೆಗೆ ಗೃಹ ಸಚಿವ ಡಾ. ಜಿ.ಪರಮೇಶ್ವರ್ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನೊಳಗೊಂಡ ಒಂದು ಸಚಿವರ ತಂಡಕ್ಕೆ ಔತಣಕೂಟ ಏರ್ಪಡಿಸಿದ್ದರು. ಈ ಭೋಜನ ಕೂಟಕ್ಕೆ ಬಾರದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್.ಮುನಿಯಪ್ಪ ಸೇರಿದಂತೆ ಇತರೆ ಸಚಿವರು ಹಾಗೂ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡರು. ತಮ್ಮ ಕುರ್ಚಿ ಅಲುಗಾಡಿಸುತ್ತಿರುವ ಮುಡಾ ನಿವೇಶನ ಹಂಚಿಕೆ ವಿಚಾರದಿಂದ ಗಮನ ಬೇರೆಡೆ ಸೆಳೆಯಲು ಸಿದ್ದರಾಮಯ್ಯ ಅವರು ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳನ್ನು ತೆರೆದಿಡಲು ತಾಲೀಮು ನಡೆಸುತ್ತಿದ್ದಾರೆ.
ಗುರುವಾರ ನಡೆಯಲಿರುವ ಸಂಪುಟ ಸಭೆಯು ಕೋವಿಡ್ ಸಾಂಕ್ರಾಮಿಕದ ವೇಳೆ ನಡೆದಿದೆ ಎನ್ನಲಾದ ಸುಮಾರು 7,200 ಕೋಟಿ ರೂಪಾಯಿಗಳ ಅಕ್ರಮಗಳ ಕುರಿತು ನ್ಯಾಯಮೂರ್ತಿ ಜಾನ್ ಮೈಕೆಲ್ ಡಿ'ಕುನ್ಹಾ ತನಿಖಾ ಆಯೋಗದ ಮಧ್ಯಂತರ ವರದಿ ಸಂಬಂಧ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸುವ ಸಾಧ್ಯತೆಯಿದೆ. ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ನೇಮಕಾತಿ ಹಗರಣದ ಕುರಿತು ನ್ಯಾಯಮೂರ್ತಿ ಬಿ ವೀರಪ್ಪ ಆಯೋಗದ ವರದಿಯೂ ಸರ್ಕಾರದ ಬಳಿಯಿದೆ. ವಿಧಾನಮಂಡಲದ ಚಳಿಗಾಲದ ಅಧಿವೇಶನದಲ್ಲಿ ಈ ವರದಿಗಳನ್ನು ಮಂಡಿಸುವ ಕುರಿತು ಸಂಪುಟ ಚರ್ಚೆ ನಡೆಸಲಿದೆ ಎಂದು ಮೂಲಗಳು ತಿಳಿಸಿವೆ. ನ್ಯಾಯಮೂರ್ತಿ ಡಿ’ಕುನ್ಹಾ ಅವರು ಕೇವಲ ಮಧ್ಯಂತರ ವರದಿಯನ್ನು ಮಂಡಿಸಿರುವುದರಿಂದ ಸರ್ಕಾರ ಅದನ್ನು ಹೇಗೆ ಎದುರಿಸುತ್ತದೆ ಎಂಬುದನ್ನು ನೋಡಬೇಕು ಎಂದು ಅವರು ಹೇಳಿದರು. ಪಕ್ಷದ ಹೈಕಮಾಂಡ್ ಸಿದ್ದರಾಮಯ್ಯ ಬೆನ್ನಿಗೆ ನಿಂತಿದೆ, ಜೊತೆಗೆ ರಾಜ್ಯ ಸರ್ಕಾರದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟ ಪಡಿಸಿದ್ದಾರೆ. ಈ ನಡುವೆ ಹೈಕೋರ್ಟ್ ತೀರ್ಪು ಏನೇ ಬಂದರೂ ಅವರು ಸಿದ್ದರಾಮಯ್ಯ ರಾಜಿನಾಮೆ ನೀಡಬಾರದು ಎಂಬುದು ಅವರ ಸಂಪುಟದ ಸಹೋದ್ಯೋಗಿಗಳು ಮತ್ತು ಪಕ್ಷದ ಮುಖಂಡರ ಹೇಳಿಕೆಗಳಿಂದ ಸ್ಪಷ್ಟವಾಗಿದೆ ಎಂದು ಕಾಂಗ್ರೆಸ್ ಮುಖಂಡರೊಬ್ಬರು ತಿಳಿಸಿದ್ದಾರೆ.
ಒಂದು ವೇಳೆ ಸಿಎಂ ಸ್ಥಾನ ತೆರವಾದೇ ಆ ಸ್ಥಾನಕ್ಕೆ ಡಿ.ಕೆ ಶಿವಕುಮಾರ್ ಅವರ ಹೆಸರು ಕೇಳಿಬರುತ್ತಿದೆ. ಆದರೆ ಈಗಿನ ಕಾಂಗ್ರೆಸ್ ಸರ್ಕಾರದ ಮೊದಲರ್ಧ ಅವಧಿ ಮುಗಿದ ನಂತರ ಸಿಎಂ ಹುದ್ದೆ ನೀಡುವುದಾಗಿ ಹೈಕಮಾಂಡ್ ಭರವಸೆ ನೀಡಿರುವುದಿಂದ ಡಿಕೆಶಿ ಆಸಕ್ತಿ ತೋರುತ್ತಿಲ್ಲ ಎಂದು ಅವರು ಹೇಳಿದರು. ಸಿದ್ದರಾಮಯ್ಯ ಅವರು ಒಪ್ಪಿಗೆ ನೀಡಿದರೆ ಸಿಎಂ ಆಗುತ್ತೇನೆ ಎಂದು ಹೇಳಿಕೆ ನೀಡಿದ್ದ ಹಿರಿಯ ಮುಖಂಡ ಆರ್.ವಿ.ದೇಶಪಾಂಡೆ ತಮ್ಮ ವರಸೆ ಬದಲಿಸಿದ್ದು ಸಿದ್ದರಾಮಯ್ಯ ಅವರೇ ಐದು ವರ್ಷ ಸಿಎಂ ಆಗಿ ಮುಂದುವರಿಯಲಿದ್ದಾರೆ ಎಂದು ತಿಳಿಸಿದ್ದಾರೆ.
ಕೆಲ ದಿನಗಳ ಹಿಂದೆ ನವದೆಹಲಿಯಲ್ಲಿ ಹೈಕಮಾಂಡ್ ನಾಯಕರನ್ನು ಭೇಟಿಯಾಗಿದ್ದ ಪಿಡಬ್ಲ್ಯುಡಿ ಸಚಿವ ಸತೀಶ್ ಜಾರಕಿಹೊಳಿ, ಕೆಪಿಸಿಸಿ ಅಧ್ಯಕ್ಷರಾಗುವ ಬಗ್ಗೆ ಮಾತ್ರ ಚರ್ಚಿಸಿದ್ದಾರೆಯೇ ಹೊರತು ಸಿಎಂ ಸ್ಥಾನದ ಬಗ್ಗೆ ಅಲ್ಲ ಎಂದು ಮೂಲಗಳು ತಿಳಿಸಿವೆ. ಇದರರ್ಥ ಹೈಕಮಾಂಡ್ ಸಿಎಂ ಬದಲಾವಣೆಗೆ ನಿರ್ಧರಿಸದ ಹೊರತು ಸಿದ್ದರಾಮಯ್ಯಗೆ ತಕ್ಷಣದ ಬೆದರಿಕೆ ಹಾಕುವ ಸಾಮರ್ಥ್ಯದ ನಾಯಕರ ರಾಜ್ಯದಲ್ಲಿ ಯಾರು ಇಲ್ಲ ಎಂಬುದಂತು ಸ್ಪಷ್ಟವಾಗಿದೆ.
ಸಂಗೊಳ್ಳಿ ರಾಯಣ್ಣನ ಜನ್ಮ ದಿನಾಚರಣೆಯಲ್ಲಿ ತಮ್ಮ ವಿರುದ್ಧ ಕೆಲಸ ಮಾಡುವವರಿಗೆ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದರು, ಹಿಂದಿನಿಂದಲೂ ನನಗೆ ಬೆನ್ನು ತಟ್ಟುವವರು ಇದ್ದಾರೆ. ಹಾಗೆ ಬೆನ್ನಿಗೆ ಚೂರಿ ಹಾಕುವವರೂ ಇದ್ದಾರೆ, ಟಿಪ್ಪು ಸುಲ್ತಾನ್‌ನನ್ನು ಹಿಡಿಯಲು ಬ್ರಿಟಿಷರಿಗೆ ಸಹಾಯ ಮಾಡಿದ ಮೀರ್ ಸಾದಿಕ್ ಅವರನ್ನು ಉಲ್ಲೇಖಿಸಿ ಮಾತನಾಡಿದ್ದ ಸಿದ್ದರಾಮಯ್ಯ ಜನರ ಆಶೀರ್ವಾದ ನನಗೆ ಇರುವವರೆಗೆ ಯಾರೂ ನನ್ನನ್ನು ಅಲುಗಾಡಿಸಲು ಸಾಧ್ಯವಿಲ್ಲಎಂದು ವಿರೋಧಿಗಳಿಗೆ ಸಂದೇಶ ರವಾನಿಸಿದ್ದರು.
Advertisement