ಬೆಂಗಳೂರು: ಚನ್ನಪಟ್ಟಣ ಉಪಚುನಾವಣೆಯ ಅಭ್ಯರ್ಥಿ ಆಯ್ಕೆ ವಿಚಾರವಾಗಿ ಅಂತಿಮ ನಿರ್ಧಾರ ತೆಗೆದುಕೊಳ್ಳಲು ಬಿಜೆಪಿ ಹೈಕಮಾಂಡ್ ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಅವರಿಗೆ ಅವಕಾಶ ನೀಡಿರುವುದರಿಂದ, ಮಾಜಿ ಸಚಿವ ಮತ್ತು ಎಂಎಲ್‌ಸಿ ಸಿಪಿ ಯೋಗೇಶ್ವರ್ ಎನ್‌ಡಿಎ ಅಭ್ಯರ್ಥಿಯಾಗುವ ಸಾಧ್ಯತೆಗಳು ಕಡಿಮೆ ಎನ್ನಲಾಗುತ್ತಿದೆ.
ಇದರ ನಡುವೆ ಕೊಪ್ಪಳದಲ್ಲಿ ಮಾತನಾಡಿರುವ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಯೋಗೇಶ್ವರ್ ಗೆ ನೇರವಾಗಿ ಪ್ರಶ್ನೆ ಕೇಳಿದ್ದಾರೆ. ಹಾಲಿ ಎಂಎಲ್‌ಸಿ ಆಗಿದ್ದರೂ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಯೋಗೇಶ್ವರ್ ಏಕೆ ಬಯಸುತ್ತಿದ್ದಾರೆ. ಯೋಗೇಶ್ವರ ಅವರ ಎಂಎಲ್‌ಸಿ ಅವಧಿ 2026ಕ್ಕೆ ಮುಕ್ತಾಯವಾಗಲಿದೆ, ಪಕ್ಷಕ್ಕಾಗಿ ಶ್ರಮಿಸಿದ ಕಾರ್ಯಕರ್ತರು ನಮ್ಮಲ್ಲಿ ಅನೇಕರು ಇದ್ದಾರೆ . ಉಪಚುನಾವಣೆಗೆ ದಿನಾಂಕ ಘೋಷಣೆಯಾದ ನಂತರ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ನಿಖಿಲ್ ತಿಳಿಸಿದ್ದಾರೆ.
ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಬಿಜೆಪಿ ಹೈಕಮಾಂಡ್ ಮುಂದೆ ಇದೇ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ ಮತ್ತು ಅವರಿಗೆ ಮನವರಿಕೆ ಮಾಡಿದ್ದಾರೆ ಎಂದು ಮೂಲವೊಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದೆ. ಚನ್ನಪಟ್ಟಣ ತಾಲೂಕು ಜೆಡಿಎಸ್ ಅಧ್ಯಕ್ಷ ಜಯಮುತ್ತು ಅಥವಾ ಹಾಪ್‌ಕಾಮ್ಸ್ ದೇವರಾಜ್ ಸೇರಿದಂತೆ ಕುಮಾರಸ್ವಾಮಿ ಅವರ ಕುಟುಂಬದ ಸದಸ್ಯರನ್ನು ಅಥವಾ ಪಕ್ಷದ ನಿಷ್ಠಾವಂತ ನಾಯಕರಿಗೆ ಮಣೆ ಹಾಕಲು ಜೆಡಿಎಸ್ ಸಿದ್ಧವಿದ್ದರೂ ಪಕ್ಷದ ಚಿಹ್ನೆಯ ಮೇಲೆ ಅವರನ್ನು ಕಣಕ್ಕಿಳಿಸಲು ಜೆಡಿಎಸ್ ಬಯಸುವುದಿಲ್ಲ ಎಂದು ಮೂಲಗಳು ತಿಳಿಸಿವೆ. ಒಂದೊಮ್ಮೆ ಯೋಗೇಶ್ವರ್ ಅವರಿಗೆ ಚನ್ನಪಟ್ಟಣ ಕ್ಷೇತ್ರ ಬಿಟ್ಟುಕೊಟ್ಟರೆ ಕ್ಷೇತ್ರದ ಪ್ರಬಲ ಒಕ್ಕಲಿಗ ನಾಯಕರಾಗಿ ಮತ್ತೆ ಹೊರಹೊಮ್ಮಲು ಯೋಗೋಶ್ವರ್ ಗೆ ಸಹಕಾರಿಯಾಗಲಿದೆ ಎಂಬುದು ಜೆಡಿಎಸ್‌ಗೆ ಗೊತ್ತಿದೆ ಹೀಗಾಗಿ ಅಪಾಯ ತೆಗೆದುಕೊಳ್ಳಲು ಜೆಡಿಎಸ್ ಬಯಸ್ತಿಲ್ಲ ಎಂದು ಮೂಲಗಳು ತಿಳಿಸಿವೆ.
ಈಗಾಗಲೇ ಕಾಂಗ್ರೆಸ್ ಮುಖಂಡರಾದ ಡಿಸಿಎಂ ಡಿ.ಕೆ.ಶಿವಕುಮಾರ್ ಮತ್ತು ಅವರ ಕಿರಿಯ ಸಹೋದರ ಹಾಗೂ ಮಾಜಿ ಸಂಸದ ಡಿ.ಕೆ.ಸುರೇಶ್ ಅವರು ಪ್ರಬಲ ಸಮುದಾಯದ ನಾಯಕರಾಗಿ ಛಾಪು ಮೂಡಿಸಿದ್ದಾರೆ.ಹೀಗಾಗಿ ಕ್ಷೇತ್ರದಲ್ಲಿ ನಾಯಕನಿಗೆ ಪರಿಸ್ಥಿತಿಯನ್ನು ಅನುಕೂಲ ಮಾಡಿಕೊಡಲು ಜೆಡಿಎಸ್ ಮನಸ್ಸು ಮಾಡುತ್ತಿಲ್ಲ ಎಂದು ರಾಜಕೀಯ ವಿಶ್ಲೇಷಕರು ಹೇಳಿದ್ದಾರೆ. ಕುಮಾರಸ್ವಾಮಿ ಮತ್ತು ನಿಖಿಲ್‌ಗೆ ಶಿವಕುಮಾರ್ ಹಾಗೂ ಯೋಗೇಶ್ವರ್ ಇಬ್ಬರೂ ಭವಿಷ್ಯದಲ್ಲಿ ಅಪಾಯಕಾರಿಯಾಗಿದ್ದಾರೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
Advertisement