
ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ನಾಯಕತ್ವವನ್ನು ಪಕ್ಷದ ನಾಯಕರು ಒಪ್ಪಿಕೊಂಡಿಲ್ಲ ಎಂದು ಭಾರಿ ಮತ್ತು ಮಧ್ಯಮ ಕೈಗಾರಿಕೆ ಸಚಿವೆ ಎಂ.ಬಿ. ಪಾಟೀಲ್ ಶನಿವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಜಯೇಂದ್ರ ಹೆಚ್ಚಿನ ದಿನ ರಾಜ್ಯ ಬಿಜೆಪಿ ಅಧ್ಯಕ್ಷರಾಗಿರುವುದಿಲ್ಲ. ಶೀಘ್ರದಲ್ಲಿಯೇ ಅವರು ಆ ಸ್ಥಾನದಿಂದ ಕೆಳಗಿಳಿಯಲಿದ್ದಾರೆ. ಬಿಜೆಪಿ ನಾಯಕರಾದ ಬಸನಗೌಡ ಪಾಟೀಲ ಯತ್ನಾಳ್, ರಮೇಶ್ ಜಾರಕಿಹೊಳಿ, ಆರ್.ಅಶೋಕ್ ಮತ್ತು ಅಶ್ವತ್ಥ ನಾರಾಯಣ್ ಅವರು, ವಿಜಯೇಂದ್ರರ ನಾಯಕತ್ವವನ್ನು ಒಪ್ಪಿಕೊಂಡಿಲ್ಲ ಎಂದರು.
ಸಿದ್ದರಾಮಯ್ಯ ಅವರ ರಾಜೀನಾಮೆ ಕುರಿತು ಮಾತನಾಡುವ ವಿಜಯೇಂದ್ರ, ಅವರ ತಂದೆ ಬಿಎಸ್ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಹೇಗೆ ಕೆಳಗಿಳಿಸಲಾಯಿತು ಎಂಬಂತಹ ಅನೇಕ ಮಾಹಿತಿಗಳನ್ನು ಅರಿಯಬೇಕು. ಅವರ ತಂದೆಯನ್ನು ಅವರ ಪಕ್ಷದ ನಾಯಕರೇ ಅಧಿಕಾರದಿಂದ ಕೆಳಗಿಳಿಸಿದರು. ಇದನ್ನು ಮೊದಲು ಅವರು ತಿಳಿಯಬೇಕು ಎಂದರು.
ಮುಡಾ ಪ್ರಕರಣ ಕುರಿತು ಮಾತನಾಡಿದ ಸಚಿವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಏನೂ ಇಲ್ಲದ ಕಾರಣ ರಾಜ್ಯ ಸರ್ಕಾರ ಈ ವಿವಾದವನ್ನು ಬೇರೆಡೆಗೆ ತಿರುಗಿಸುವ ಅಗತ್ಯವಿಲ್ಲ. ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಬಿಜೆಪಿ ಸರ್ಕಾರ ಸಾವಿರಾರು ಕೋಟಿ ದುರ್ಬಳಕೆ ಮಾಡಿದೆ. ಹಾಸಿಗೆ ಮತ್ತು ಪಿಪಿಇ ಕಿಟ್‌ಗಳ ಖರೀದಿಯಲ್ಲಿ ಅಕ್ರಮ ನಡೆದಿದ್ದು, ಜನರು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾಗ ಸಾವಿರಾರು ಕೋಟಿ ರೂ. ಲೂಟಿ ಮಾಡಲಾಗಿದೆ ಎಂದು ಅವರು ಹೇಳಿದರು.
ಕೋವಿಡ್-19 ಸಮಯದಲ್ಲಿ ಹಣ ದುರುಪಯೋಗದ ಬಗ್ಗೆ ಜನರು ಬಿಜೆಪಿಯನ್ನು ಪ್ರಶ್ನಿಸಬೇಕು. ಬಿಜೆಪಿ ಸರ್ಕಾರ ಮಾಡಿದ ಕೋವಿಡ್ ಹಗರಣದ ಬಗ್ಗೆ ಪ್ರಲ್ಹಾದ್ ಜೋಶಿ ಜನರಿಗೆ ತಿಳಿಸಬೇಕು. ಈ ಬೃಹತ್ ಮೊತ್ತವನ್ನು ಬಿಜೆಪಿ ತಮ್ಮ ಚುನಾವಣೆಗೆ ಬಳಸಿಕೊಂಡಿದೆ. ಸಾವಿರಾರು ಜನರು ಸಾಯುತ್ತಿದ್ದ ಸಮಯದಲ್ಲಿ ಸಾವಿರಾರು ಕೋಟಿ ಲೂಟಿ ಹೊಡೆದಿರುವುದನ್ನು ಯಾರೂ ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ ಎಂದ ಅವರು, ಮುಡಾ ಪ್ರಕರಣವನ್ನು ನ್ಯಾಯಾಲಯವು ನಿರ್ಧರಿಸಲಿ ಎಂದರು.
ಬಿಜೆಪಿ ಆಡಳಿತದ ಅವಧಿಯಲ್ಲಿ ನಡೆದ PSI ಪ್ರಕರಣದ ಬಗ್ಗೆ ಮಾತನಾಡಬೇಕಲ್ಲವೇ? ಕೋವಿಡ್-19 ಸಮಯದಲ್ಲಿ ನನ್ನ ಆಸ್ಪತ್ರೆ ಬಡವರಿಗೆ ಉಚಿತ ಚಿಕಿತ್ಸೆ ನೀಡಿದೆ. ರೋಗಿಗಳಿಗೆ ಶುಲ್ಕವನ್ನು ಕಡಿಮೆ ಮಾಡಲಾಗಿತ್ತು. ನಮಗೆ ಪ್ರಶಸ್ತಿಯೂ ಸಿಕ್ಕಿತು. ನಾವು ಸಂಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡಬೇಕು ಮತ್ತು ಹಣವನ್ನು ಲೂಟಿ ಮಾಡಬಾರದು ಎಂದು ಸಚಿವರು ಹೇಳಿದರು.
Advertisement