ಕೊಪ್ಪಳ: ಕಾಂಗ್ರೆಸ್ ಸರ್ಕಾರದಲ್ಲಿ ನಾಯಕತ್ವ ಬದಲಾವಣೆ ವಿಚಾರವಾಗಿ ಚರ್ಚೆ ನಡೆಯುತ್ತಿದೆ. ದಿನಕ್ಕೊಬ್ಬರು ನಾನು ಸಿಎಂ ಆಕಾಂಕ್ಷಿ ಎಂದು ಹೇಳಿಕೆ ನೀಡುತ್ತಿದ್ದಾರೆ. ಸಿಎಂ ಆದರೆ ತಪ್ಪೇನು ಎಂದು ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಪ್ರಶ್ನಿಸಿದ್ದಾರೆ.
ಸಿಎಂ ಬದಲಾವಣೆ ಕೂಗು ವಿಚಾರವಾಗಿ ಸುದ್ದಿಗಾರರೊಂದಿಗೆ ಸೋಮವಾರ ನಗರದಲ್ಲಿ ಮಾತನಾಡಿದರು. ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಿ.ಆರ್ ಪಾಟೀಲ್ ಬಿಟ್ಟರೆ, ನಾನು ಹೆಚ್ಚು ಬಾರಿ ಆಯ್ಕೆಯಾದ ಹಿರಿಯ. ಈ ಭಾಗಕ್ಕೆ ಸಿಎಂ ಸ್ಥಾನವನ್ನು ಲಿಂಗಾಯತ ಸಮುದಾಯ ಹಾಗೂ ಕಲ್ಯಾಣ ಕರ್ನಾಟಕಕ್ಕೆ ಆದ್ಯತೆ ಕೊಟ್ಟರೆ ನಾನು ಫ್ರಂಟ್ ರನ್ನರ್. ಪ್ರಜಾಪ್ರಭುತ್ವದಲ್ಲಿ ಯಾರೇನು ಆಗ್ತಾರೆ ಗೊತ್ತಿಲ್ಲ. ನನಗೂ ಲಾಟರಿ ಹೊಡಿಬಹುದು ಎಂದು ಹೇಳಿದರು. ಆದರೆ, ಮುಂದಿನ ಮೂರೂವರೆ ವರ್ಷ ಈ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಆಗಿರಬೇಕು. ಅಂದಾಗ ಮಾತ್ರ ರಾಜ್ಯ ಅಭಿವೃದ್ಧಿ ಆಗುತ್ತದೆ. ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯಬೇಕು ಎಂಬುದು ನಮ್ಮ ಆಸೆ ಕೂಡಾ ಎಂದರು. ಸಿದ್ದರಾಮಯ್ಯ ಸಿಎಂ ಸೀಟನಿಂದ ಇಳಿಯುತ್ತಾರೆ ಎಂದು ಯಾರು ಹೇಳಿದ್ದು? ಸದ್ಯ ಸಿಎಂ ಆಗಬೇಕು ಅಂತ ಯಾರು ಆಸೆಪಡುವ ಅವಶ್ಯಕತೆ ಇಲ್ಲ ಎಂದು ಹೇಳಿದರು.
ಇನ್ನು, "ದೇಶಪಾಂಡೆ ಅವರ ಮಾತಲ್ಲಿ ತಪ್ಪೇನಿಲ್ಲ. ಸಿದ್ದರಾಮಯ್ಯ ಹೇಳಿದರೆ ಸಿಎಂ ಆಗುತ್ತೇನೆ ಅಂತ ಹೇಳಿದ್ದಾರೆ. ಯಾರೇ ಆಗಲಿ ಸಿಎಂ ಸ್ಥಾನಕ್ಕೆ ಆಸೆ ಪಟ್ಟರೆ ತಪ್ಪಿಲ್ಲ. ನಾನೂ ಕೂಡಾ ಲಿಂಗಾಯತರ ಕೋಟಾದಲ್ಲಿ ಬರುತ್ತೇನೆ. ನಮ್ಮ ಪಕ್ಷ ಲಿಂಗಾಯತ ಕಮ್ಯೂನಿಟಿಗೆ ಕೊಡುವುದಾದರೆ ನನಗೆ ಕೊಡಲಿ. ನನಗೆ ಯಾವುದೇ ಮುಜುಗರ ಇಲ್ಲ. ಆದರೆ, ನಮ್ಮ ಪಕ್ಷ ಹಾಗೂ ಸಿದ್ದರಾಮಯ್ಯ ಮನಸ್ಸು ಮಾಡಬೇಕು. ಯಾವಾಗ ಯಾರು ಏನಾಗ್ತಾರೆ ಅಂತ ಗೊತ್ತಿಲ್ಲ" ಎಂದು ಮನದಾಸೆ ಹೊರಹಾಕಿದರು. ನಾಯಕತ್ವದಲ್ಲಿ ಬದಲಾವಣೆಯಾದರೆ, ಮುಖ್ಯಮಂತ್ರಿ ಗಾದಿಗೆ ಏರಲು ಸಾಕಷ್ಟು ಅನುಭವಿ ಮತ್ತು ಸಮರ್ಥ ನಾಯಕರು ಪಕ್ಷದಲ್ಲಿ ಇರುವುದರಿಂದ ಸಿದ್ದರಾಮಯ್ಯ ಅವರೇ ಒಕ್ಕಲಿಗ ಅಥವಾ ಲಿಂಗಾಯತ ಸಮುದಾಯದ ಹೆಸರನ್ನು ಮುಂದಿಡುತ್ತಾರೆ ಎಂದು ಹೇಳಿದರು.
Advertisement