ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ಕಾಂಗ್ರೆಸ್ ನಲ್ಲಿ ಶೀತಲ ಸಮರ: ಹೈಕಮಾಂಡ್ ಗೆ ಸಿದ್ದು-ಡಿಕೆಶಿ ಬೆಂಬಲಿಗರ ಪತ್ರ!
ಬೆಂಗಳೂರು: ಕಾಂಗ್ರೆಸ್ ಮುಖಂಡರಾದ ಆರ್.ವಿ.ದೇಶಪಾಂಡೆ, ಬಸವರಾಜ ರಾಯರೆಡ್ಡಿ, ಶಾಮನೂರು ಶಿವಶಂಕರಪ್ಪ ಅವರು ಮುಖ್ಯಮಂತ್ರಿ ಹುದ್ದೆಗೆ ತಾವು ಆಕಾಂಕ್ಷಿಗಳು ಎಂದು ಬಹಿರಂಗ ಹೇಳಿಕೆ ನೀಡುತ್ತಿದ್ದಾರೆ.
ಇದೆಲ್ಲದರ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಇವರುಗಳ ಸದ್ದಡಗಿಸಲು ತಮ್ಮದೇ ಆದ ತಂತ್ರಗಾರಿಕೆ ನಡೆಸಿದ್ದಾರೆ. ಸಿದ್ದರಾಮಯ್ಯ ಬೆಂಬಲಿಗರ ಗುಂಪು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಗೆ ಪತ್ರ ಬರೆದರೆ, ಶಿವಕುಮಾರ ಅವರ ಇಬ್ಬರು ಕಟ್ಟಾ ಅನುಯಾಯಿಗಳು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪತ್ರ ಬರೆದು, ಸಿಎಂ ಸ್ಥಾನಕ್ಕಾಗಿ ನಾಯಕರು ನೀಡುತ್ತಿರುವ ಹೇಳಿಕೆಗಳಿಗೆ ಲಗಾಮು ಹಾಕಬೇಕೆಂದು ಮನವಿ ಮಾಡಿದ್ದಾರೆ.
ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲದಿರುವಾಗ ಬದಲಾವಣೆಯ ಪ್ರಶ್ನೆಯೇ ಉದ್ಭವಿಸುವುದಿಲ್ಲ ನಾನೇ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತೇನೆ ಎಂದು ಸ್ವತ ಸಿದ್ದರಾಮಯ್ಯನರೇ ಹೇಳಿದ್ದಾರೆ. ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿಯುತ್ತಾರೆ ಎಂದು ಸಚಿವರು ಹೇಳುತ್ತಿದ್ದಾರೆ. ಹೀಗಾಗಿ ನಾನು ಮುಂದುವರಿಯುತ್ತೇನೆ ಎಂಬುದರಲ್ಲಿ ಸಂದೇಹವಿಲ್ಲ ಎಂದಿದ್ದಾರೆ.
ಸಿಎಂ ಸ್ಥಾನ ಬದಲಾವಣೆ ಕುರಿತು ಹೇಳಿಕೆ ನೀಡುತ್ತಿರುವ ನಾಯಕರಿಗೆ ಲಗಾಮು ಹಾಕುವಂತೆ ಎಚ್‌ಎಂ ರೇವಣ್ಣ, ವಿಎಸ್ ಉಗ್ರಪ್ಪ, ಸಿಎಸ್ ದ್ವಾರಕಾನಾಥ್ ಸೇರಿದಂತೆ ಸಿದ್ದರಾಮಯ್ಯ ಅವರ ಆಪ್ತ ನಾಯಕರು ರಾಹುಲ್‌ಗೆ ಪತ್ರ ಬರೆದಿದ್ದಾರೆ.
ಸಿದ್ದರಾಮಯ್ಯ ಅವರಿಗೆ ಪರ್ಯಾಯ ನಾಯಕರಿಲ್ಲದ ಕಾರಣ ಐದು ವರ್ಷಗಳ ಅವಧಿಯನ್ನು ಪೂರ್ಣಗೊಳಿಸಬೇಕು ಎಂದು ಬಯಸುತ್ತೇವೆ ಎಂದಿದ್ದಾರೆ. ಈ ನಡುವೆ ಶಿವಕುಮಾರ್ ಅವರ ಕಟ್ಟಾ ಬೆಂಬಲಿಗರಾದ ಪಕ್ಷದ ಎಂಎಲ್ ಸಿ ದಿನೇಶ್ ಗೂಳಿಗೌಡ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಅವರು ಮುಖ್ಯಮಂತ್ರಿ ಸ್ಥಾನ ಬದಲಾವಣೆ ಕುರಿತು ಹೇಳಿಕೆ ನೀಡುವವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಖರ್ಗೆ ಅವರಿಗೆ ಪತ್ರ ಬರೆದಿದ್ದಾರೆ. ಪರ್ಯಾಯ ನಾಯಕನ ಅಗತ್ಯವಿಲ್ಲ ಏಕೆಂದರೆ ಸಿದ್ದರಾಮಯ್ಯ ರಾಜಿನಾಮೆ ನೀಡಿದರೇ ಶಿವಕುಮಾರ್ ಮಾತ್ರ ಸಿಎಂ ಆಗಬೇಕು ಎಂಬುದು ಡಿಕೆಶಿ ಬೆಂಬಲಿಗರ ಆಂಬೋಣ.
ಈ ರೀತಿಯ ಹೇಳಿಕೆಗಳನ್ನು ನೀಡದಂತೆ ಸಿದ್ದರಾಮಯ್ಯ ಪ್ರಯತ್ನಿಸಲಿಲ್ಲ. ಪಿಡಬ್ಲ್ಯುಡಿ ಸಚಿವ ಸತೀಶ್ ಜಾರಕಿಹೊಳಿ ಅಥವಾ ಗೃಹ ಸಚಿವ ಡಾ ಜಿ ಪರಮೇಶ್ವರ ಅವರು ಹೈಕಮಾಂಡ್ ನಾಯಕರನ್ನು, ವಿಶೇಷವಾಗಿ ರಾಹುಲ್ ಅವರನ್ನು ಭೇಟಿ ಮಾಡಿದ ಪ್ರಶ್ನೆಗಳಿಗೂ ಅವರು ಉತ್ತರಿಸಲಿಲ್ಲ. ಆದರೆ ಸಿದ್ದರಾಮಯ್ಯ ಒಪ್ಪಿಗೆ ಇಲ್ಲದೇ ಈ ಇಬ್ಬರು ನಾಯಕರು ರಾಹುಲ್ ಗಾಂಧಿ ಭೇಟಿಯಾಗುತ್ತಿರಲಿಲ್ಲ ಎಂದು ಮೂಲಗಳು ಸೂಚಿಸಿವೆ. ಇದೇ ವೇಳೆ ಬುಧವಾರ ಪರಮೇಶ್ವರ ಅವರ ಬೆಂಬಲಿಗರು ಅವರ ಮನೆಯಲ್ಲಿ ಸಿಎಂ ಆಗಬೇಕೆಂದು ಘೋಷಣೆ ಕೂಗಿದರು. ಆದರೆ ಮುಜುಗರಕ್ಕೊಳಗಾದ ಗೃಹ ಸಚಿವರು ಅವರಿಗೆ ಆ ರೀತಿ ಮಾತನಡದಂತೆ ಸೂಚಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ