ಬೆಳಗಾವಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಒಬ್ಬ ಭ್ರಷ್ಟ, ಅವನಿಗೆ ಯಾವುದೇ ಐಡಿಯಾಲಜಿ ಇಲ್ಲ ಎಂದು ತಮ್ಮದೇ ಪಕ್ಷದ ರಾಜ್ಯಾಧ್ಯಕ್ಷರ ವಿರುದ್ಧ ಮಾಜಿ ಸಚಿವ ಹಾಗೂ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಅವರು ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.
ವಿಜಯೇಂದ್ರ ರಾಜ್ಯಾಧ್ಯಕ್ಷ ಎಂದು ನಾನು ಒಪ್ಪೋದಿಲ್ಲ. ಮುಂದಿನ ಅಧ್ಯಕ್ಷ ಯಾರು ಎಂಬುದು ಪಕ್ಷದ ವರಿಷ್ಠರು ತೀರ್ಮಾನ ಮಾಡಬೇಕು. ವಿಜಯೇಂದ್ರ ಬಿಜೆಪಿ ಪಕ್ಷದಲ್ಲಿ ಇನ್ನೂ ಜೂನಿಯರ್, ಅವನಿಗೆ ಯಾವುದೇ ಐಡಿಯಾಲಜಿ ಇಲ್ಲ. ಬಿಜೆಪಿಯ ಭ್ರಷ್ಟ ಎಂಬ ಲೇಬಲ್ ವಿಜಯೇಂದ್ರ ಮೇಲಿದೆ ಎಂದು ರಮೇಶ್ ಜಾರಕಿಹೊಳಿ ಕಿಡಿ ಕಾರಿದ್ದಾರೆ.
ವಿಜಯೇಂದ್ರ ಅಧ್ಯಕ್ಷ ಆಗಿದ್ದಕ್ಕೆ ನನ್ನ ವಿರೋಧವಿದೆ. ಹಾಗಂತ ನಾನೆಂದೂ ಯಡಿಯೂರಪ್ಪನವರಿಗೆ ವಿರೋಧಿ ಅಲ್ಲ. ಯಡಿಯೂರಪ್ಪ ನಮ್ಮ ಪಕ್ಷಕ್ಕೆ ಪ್ರಶ್ನಾತೀತ ನಾಯಕ. ಯಡಿಯೂರಪ್ಪರ ಬಗ್ಗೆ ನಮಗೆ ತುಂಬಾ ಗೌರವವಿದೆ. ಆದರೆ, ವಿಜಯೇಂದ್ರ ನಮ್ಮ ಪಕ್ಷದ ನಾಯಕನಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.
ಆರ್ಎಸ್ಎಸ್ ಪ್ರಮುಖ ನಾಯಕರು, ಬಿಜೆಪಿ ನಾಯಕರ ಸಭೆಯ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ರಮೇಶ್ ಜಾರಕಿಹೊಳಿ, ಸಭೆಯಲ್ಲಿ ಏನು ಚರ್ಚೆಯಾಯಿತು ಎಂದು ಹೇಳುವುದಕ್ಕೆ ಆಗುವುದಿಲ್ಲ. ತಪ್ಪು ಮಾಡಿದವರನ್ನು ಸಭೆಯಲ್ಲಿ ಮುಖಂಡರು ಬೈದಿದ್ದಾರೆ ಅಷ್ಟೇ ಎಂದರು.
ಅಥಣಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಮೇಶ್ ಜಾರಕಿಹೊಳಿ, 15ರಿಂದ 20 ಜನರ ಸಾಮೂಹಿಕ ನಾಯಕತ್ವದಲ್ಲಿ ಪಕ್ಷ ಮುನ್ನಡೆಸಲಿ ಎಂದು ಬಿಜೆಪಿ, ಆರ್ಎಸ್ಎಸ್ ಪ್ರಮುಖರ ಸಭೆಯಲ್ಲಿ ಮನವಿ ಮಾಡಿದ್ದೇವೆ. ವರಿಷ್ಠರು ನೀವು ಇಂತಿಂಥ ಕೆಲಸ ಮಾಡುವಂತೆ ಟಾಸ್ಕ್ ನೀಡಿದ್ದಾರೆ. 120ರಿಂದ 130 ಕ್ಷೇತ್ರಗಳನ್ನು ಗೆಲ್ಲಿಸಿಕೊಡುವ ಶಕ್ತಿ ನಮ್ಮಲ್ಲಿದೆ. ವರಿಷ್ಠರು ನೀಡಿದ ಟಾಸ್ಕ್ನಲ್ಲಿ ನಾನು ವಿಫಲನಾದರೆ ನನ್ನನ್ನು ಒದ್ದು ಹೊರಹಾಕಿ ಎಂದು ಸಂಘ ಪರಿವಾರದ ಪ್ರಮುಖರ ಸಭೆಯಲ್ಲಿ ಹೇಳಿದ್ದೇನೆ ಎಂದರು.
ಅನಂತ್ ಕುಮಾರ್ ತೀರಿಕೊಂಡ ಮೇಲೆ ಬಿಜೆಪಿಯಲ್ಲಿ ಯಾರೂ ಪ್ರಬಲ ನಾಯಕನಾಗಿಲ್ಲ. ಒಬ್ಬರ ಕೈಯಲ್ಲಿ ಆಡಳಿತ ಕೊಡುವುದು ಬೇಡ. ಸಾಮೂಹಿಕ ನಾಯಕತ್ವಕ್ಕೆ ಒತ್ತು ಕೊಡುವಂತೆ ನಾವು ಮೊನ್ನೆ ಸಭೆಯಲ್ಲಿ ಹೇಳಿದ್ದೇವೆ. ಒಬ್ಬರ ಕೈಗೆ ಪಕ್ಷ ಸಿಕ್ಕರೆ ನಾನು ಕೂಡ ಎರಡನೇ ಯಡಿಯೂರಪ್ಪನಾಗುತ್ತೇನೆ. ಆ ಚೇರ್ ಮೇಲೆ ಕೂತರೆ ಸರ್ವಾಧಿಕಾರ ಧೋರಣೆ ಬರುತ್ತದೆ. 15 ರಿಂದ 20 ಜನರ ಸಾಮೂಹಿಕ ನಾಯಕತ್ವದ ಕೈಯಲ್ಲಿ ಲೀಡರ್ ಶಿಪ್ ಕೊಡುವಂತೆ ಮನವಿ ಮಾಡಿದ್ದೇವೆ ಎಂದು ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ.
ಯಡಿಯೂರಪ್ಪನವರ ಬಗ್ಗೆ ನಮಗೆ ಬಹಳ ಗೌರವವಿದೆ. ಯಡಿಯೂರಪ್ಪಗೆ ವಯಸ್ಸಾಗಿದೆ, ಅವರಿಗೆ ವಿಶ್ರಾಂತಿಯ ಅಗತ್ಯವಿದೆ. ನಮಗೆ ಯಡಿಯೂರಪ್ಪನವರ ಸಲಹೆ ಬೇಕಾದರೆ ಅವರ ಮನೆಗೆ ಹೋಗುತ್ತೇವೆ ಎಂದರು.
Advertisement