ನಾಗಮಂಗಲ ಗಲಭೆ: ವಿಪಕ್ಷ ನಾಯಕರ ಮೇಲೆ FIR, ಹೇಡಿತನದ ಪರಮಾವಧಿ- ಆರ್ ಅಶೋಕ್ ಕಿಡಿ

"ಕೈಲಾಗದವನು ಮೈಪರಚಿಕೊಂಡ" ಎಂಬಂತೆ ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದ ಕೋಮುದಳ್ಳುರಿಗೆ ಕಾರಣರಾದ ಮತಾಂಧರನ್ನು ಪತ್ತೆ ಹಚ್ಚಿ ಅವರ ಹೆಡೆಮುರಿ ಕಟ್ಟಬೇಕಾದ ಗೃಹ ಸಚಿವ ಡಾ. ಜಿ. ಪರಮೇಶ್ವರ್ ವಿಪಕ್ಷ ನಾಯಕರ ಮೇಲೆ FIR ಹಾಕಿರುವುದು ಹೇಡಿತನದ ಪರಮಾವಧಿ ಎಂದು ಟೀಕಿಸಿದ್ದಾರೆ.
ವಿಪಕ್ಷ ನಾಯಕ ಆರ್.ಅಶೋಕ್
ವಿಪಕ್ಷ ನಾಯಕ ಆರ್.ಅಶೋಕ್
Updated on

ಬೆಂಗಳೂರು: ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ತಮ್ಮ ವಿರುದ್ಧ ಎಫ್ ಐಆರ್ ಹಾಕಿರುವುದಕ್ಕೆ ವಿಪಕ್ಷ ನಾಯಕ ಆರ್. ಅಶೋಕ್ ಗೃಹ ಸಚಿವರ ವಿರುದ್ಧ ಕಿಡಿಕಾರಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಸುಧೀರ್ಘ ಫೋಸ್ಟ್ ಮಾಡಿರುವ ಆರ್. ಅಶೋಕ್, "ಕೈಲಾಗದವನು ಮೈಪರಚಿಕೊಂಡ" ಎಂಬಂತೆ ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದ ಕೋಮುದಳ್ಳುರಿಗೆ ಕಾರಣರಾದ ಮತಾಂಧರನ್ನು ಪತ್ತೆ ಹಚ್ಚಿ ಅವರ ಹೆಡೆಮುರಿ ಕಟ್ಟಬೇಕಾದ ಗೃಹ ಸಚಿವ ಡಾ. ಜಿ. ಪರಮೇಶ್ವರ್ ವಿಪಕ್ಷ ನಾಯಕರ ಮೇಲೆ FIR ಹಾಕಿರುವುದು ಹೇಡಿತನದ ಪರಮಾವಧಿ ಎಂದು ಟೀಕಿಸಿದ್ದಾರೆ.

ಬೆಂಗಳೂರಿನಿಂದ ಕೇವಲ 130 ಕಿಮೀ ದೂರದಲ್ಲಿರುವ ನಾಗಮಂಗಲದಲ್ಲಿ ರಾಜ್ಯವೇ ಬೆಚ್ಚಿಬೀಳುವಂತಹ ಘಟನೆ ನಡೆದು ಒಂದು ವಾರ ಕಳೆದಿದ್ದರೂ ಈವರೆಗೂ ತಾವು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವ ಕೆಲಸ ಮಾಡಿಲ್ಲ. ಘಟನಾ ಸ್ಥಳಕ್ಕೆ ಹೋಗಿ ಅಲ್ಲಿ ಆಸ್ತಿ-ಪಾಸ್ತಿ ಕಳೆದುಕೊಂಡು, ಭಯಭೀತರಾಗಿರುವ ಸ್ಥಳೀಯರ ಅಳಲು, ದುಮ್ಮಾನ, ಆತಂಕ, ಆಕ್ರೋಶ ಕೇಳಿದ್ದಿದ್ದರೆ ತಮಗೆ ಪರಿಸ್ಥಿತಿಯ ಗಂಭೀರತೆ ಅರ್ಥವಾಗುತ್ತಿತ್ತು. ಆದರೆ ತಮಗೆ ಕರ್ತವ್ಯ ಪ್ರಜ್ಞೆಯೇ ಇಲ್ಲ ಪರಮೇಶ್ವರ್ ಅಸಮರ್ಥ ಗೃಹ ಸಚಿವ ಎಂದು ವಾಗ್ದಾಳಿ ನಡೆಸಿದ್ದಾರೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿದಾಗ ಸ್ಥಳೀಯರು, ಪ್ರತ್ಯಕ್ಷದರ್ಶಿಗಳು, ಪತ್ರಕರ್ತರು ವ್ಯಕ್ತಪಡಿಸಿರುವ ಅನುಮಾನವನ್ನ ಎಕ್ಸ್ ಖಾತೆ ಮೂಲಕ ಸರ್ಕಾರದ ಗಮನಕ್ಕೆ ತರುವ ಪ್ರಯತ್ನ ಮಾಡಿದ್ದೇನೆಯೇ ಹೊರತು, ಯಾವುದೇ ಸುಳ್ಳು ಮಾಹಿತಿ ಹಂಚಿಕೊಂಡಿಲ್ಲ. ಇಷ್ಟಕ್ಕೂ ಎಫ್ಐಆರ್ ಹಾಕಿರುವ ಪೊಲೀಸರು ನನ್ನ ಪೋಸ್ಟ್ ನಲ್ಲಿರುವ ಮಾಹಿತಿಯನ್ನ ಪೂರ್ತಿಯಾಗಿ ಓದಿದ್ದಾರೋ ಇಲ್ಲವೋ ಅಥವಾ ಅವರಿಗೆ ಕನ್ನಡ ಸರಿಯಾಗಿ ಬರುತ್ತೋ ಇಲ್ಲವೋ ಅರ್ಥವಾಗುತ್ತಿಲ್ಲ. ಚಿಕ್ಕಮಗಳೂರಿನಲ್ಲಿ ಮತಾಂಧರು ಪ್ಯಾಲೆಸ್ಟೈನ್ ಧ್ವಜ ಹಿಡಿದು ಮಾಡಿದ ಪುಂಡಾಟಿಕೆ, ದಾವಣಗೆರೆಯಲ್ಲಿ ಕೇಸರಿ ಧ್ವಜ ಹಾರಿಸಿದ ಹಿಂದೂಗಳ ಮೇಲೆ ಮತಾಂಧರು ಹಲ್ಲೆ ಮಾಡಿರುವ ಘಟನೆಗಳ ವಿಡಿಯೋವನ್ನು ಪೋಸ್ಟ್ ಮಾಡಿರುವುದಾಗಿ ಅವರು ಹೇಳಿದ್ದಾರೆ.

ವಿಪಕ್ಷ ನಾಯಕ ಆರ್.ಅಶೋಕ್
ನಾಗಮಂಗಲ‌ ಕೋಮುಗಲಭೆ ಪ್ರಕರಣ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಆರ್. ಅಶೋಕ್ ವಿರುದ್ಧ FIR

ರಾಜ್ಯದ ಅನೇಕ ಕಡೆಗಳಲ್ಲಿ ಗಣೇಶೋತ್ಸವವನ್ನೇ ಗುರಿಯಾಗಿಟ್ಟುಕೊಂಡು ನಡೆದಿರುವ ಇಂತಹ ಪ್ರಚೋದನಕಾರಿ ಘಟನೆಗಳ ಹಿಂದೆ ಮತೀಯ ಮೂಲಭೂತವಾದಿ ಸಂಘಟನೆಗಳ ಕೈವಾಡ ಇರಬಹುದು ಎಂದು ಜವಾಬ್ದಾರಿಯುತ ಪ್ರತಿಪಕ್ಷ ನಾಯಕನಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದೇನೆಯೇ ಹೊರತು ಯಾವುದೇ ಸುಳ್ಳು ಮಾಹಿತಿ ಹಂಚಿಕೊಂಡಿಲ್ಲ. ನಾಗಮಂಗಲದಲ್ಲಿ ಪೆಟ್ರೋಲ್ ಬಾಂಬ್ ಹಾಕಿರುವ ದೃಶ್ಯಗಳು, ಕಲ್ಲು ಎಸೆದಿರುವ ದೃಶ್ಯಗಳು, ವಾಹನ, ಅಂಗಡಿಗಳನ್ನ ಧ್ವಂಸ ಮಾಡಿದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ, ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದರೂ ಇದೊಂದು 'ಸಣ್ಣ' ಘಟನೆ, 'ಆಕಸ್ಮಿಕ' ಘಟನೆ ಎಂದು ಜನರಿಗೆ ಸುಳ್ಳು ಮಾಹಿತಿ ನೀಡಿದ್ದಕ್ಕೆ ಅಸಲಿಗೆ ಗೃಹ ಸಚಿವ ಪರಮೇಶ್ವರ್ ಮೇಲೆ ಮೊದಲು FIR ದಾಖಲಿಸಬೇಕು. ಸಚಿವರಿಗೆ ತಪ್ಪು ಮಾಹಿತಿ ನೀಡಿದ ಪೊಲೀಸರ ಮೇಲೆ ಎಫ್ಐಆರ್ ಹಾಕಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಕೋಮುಗಲಭೆಗಳನ್ನ ತಡೆಯಲಾಗದ ನಾಲಾಯಕ್ ಸರ್ಕಾರ, ಮತಾಂಧರ ಹೆಡೆಮುರಿ ಕಟ್ಟಲಾಗದ ನಿಸ್ತೇಜ ಸರ್ಕಾರ ನನ್ನ ಮೇಲೆ ಎಫ್ಐಆರ್ ಹಾಕಿರುವುದು ಹೇಡಿತನದ ಲಕ್ಷಣ. ದೇಶ, ಧರ್ಮದ ರಕ್ಷಣೆ ವಿಚಾರದಲ್ಲಿ, ಹಿಂದೂಗಳ ರಕ್ಷಣೆ ವಿಚಾರದಲ್ಲಿ, ಹಿಂದೂಗಳ ಹಬ್ಬ, ಉತ್ಸವಗಳ ವಿಚಾರದಲ್ಲಿ ರಾಜಿ ಆಗುವ ಪ್ರಶ್ನೆಯೇ ಇಲ್ಲ. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ, ರಾಮಜನ್ಮಭೂಮಿ ಹೋರಾಟದ ಸಂದರ್ಭದಲ್ಲಿ ದೇಶಕ್ಕಾಗಿ ಧರ್ಮಕ್ಕಾಗಿ ಜೈಲು ವಾಸ ಅನುಭವಿಸಿದವನು ನಾನು. ಇಂತಹ ಒಂದಲ್ಲ ನೂರು ಎಫ್ಐಆರ್ ಹಾಕಿದರೂ ನನ್ನ ದನಿ ಅಡಗಿಸಲು ಸಾಧ್ಯವಿಲ್ಲ. ಗೊಡ್ಡು ಬೆದರಿಕೆಗಳಿಗೆ ಹೆದರುವುದಿಲ್ಲ ಎಂದು ಅವರು ಸರ್ಕಾರಕ್ಕೆ ಸಂದೇಶ ರವಾನಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com