ಮೈಸೂರು: ಬಿಜೆಪಿಯವರ ಕುಮ್ಮಕ್ಕಿನಿಂದಲೇ ರಾಜ್ಯದಲ್ಲಿ ಗಲಭೆಗಳಾಗುತ್ತಿವೆ ಎಂದು ಸಿಎಂ ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ.
ಮೈಸೂರಿನಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬಿಜೆಪಿಯವರು ಕೋಮುವಾದಿಗಳು, ಅವರು ನೀಡುವ ಹೇಳಿಕೆಗಳಿಂದ ರಾಜ್ಯದ ಅಲ್ಲಲ್ಲಿ ಕೋಮುಗಲಭೆಗಳು, ಗಲಾಟೆಗಳು ಆಗುತ್ತಿವೆ. ಪ್ರತಿನಿತ್ಯವೇನೂ ರಾಜ್ಯದಲ್ಲಿ ಗಲಾಟೆಗಳು ನಡೆಯುತ್ತಿಲ್ಲ, ಇದುವರೆಗೆ ಎರಡು ಪ್ರಕರಣಗಳು ನಡೆದಿವೆ. ಘಟನೆ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಹೇಳಿದ್ದೇನೆ. ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ತಿಳಿಸಿದ್ದೇನೆ. ನಾಗಮಂಂಗಲ ಪ್ರಕರಣದಲ್ಲಿ ಡಿವೈಎಸ್ಪಿ, ಇನ್ಸ್ಪೆಕ್ಟರ್ ಅಮಾನತು ಮಾಡಿದ್ದೇವೆ ಎಂದರು.
ಇನ್ನು ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಡಿನೋಟಿಫಿಕೇಶನ್ ಹೊರಡಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, ದಾಖಲೆಗಳನ್ನು ಸಚಿವರು ಬಿಡುಗಡೆ ಮಾಡಿದ್ದಾರೆ. ನಾನು ಆ ದಾಖಲೆಗಳನ್ನು ನೀಡುತ್ತೇನೆ. ಆ ಭೂಮಿಯನ್ನು ಕುಮಾರಸ್ವಾಮಿ ಬಾಮೈದನ ಹೆಸರಿನಲ್ಲಿ ರಿಜಿಸ್ಟರ್ ಆಗಿದೆ. ಅತ್ತೆಗೆ ಹಲವರು ಜಿಪಿಎ ಮಾಡಿಕೊಟ್ಟಿದ್ದಾರೆ. ಇದು ಗಂಭೀರ ಪ್ರಕರಣ. ದಾಖಲೆ ತರಿಸಿ ಪರಿಶೀಲನೆ ಮಾಡುತ್ತೇನೆ ಎಂದರು.
ಕುಮಾರಸ್ವಾಮಿ ಯಾವಾಗಲೂ ಹಿಟ್ ಅಂಡ್ ರನ್ ಕೇಸು, ತಮ್ಮ ಮೇಲಿನ ಎಲ್ಲಾ ಆರೋಪಗಳಿಗೆ ಕೂಡ ಹಿಟ್ ಅಂಡ್ ರನ್ ರೀತಿ ಮಾತನಾಡಿ ಹೋಗುತ್ತಾರೆ ಎಂದು ಟೀಕಿಸಿದರು.
ಶಾಸಕ ಮುನಿರತ್ನ ಮೇಲೆ ಗಂಭೀರ ಪ್ರಕರಣಗಳಿವೆ. ಎಸ್ ಐಟಿ ತನಿಖೆ ಮಾಡಲು ಸಚಿವರು, ಶಾಸಕರು ಪತ್ರ ಕೊಟ್ಟಿದ್ದಾರೆ. ಪತ್ರದ ಮೇಲಿನ ಮುಂದಿನ ಕ್ರಮ ಕೈಗೊಳ್ಳಿ ಎಂದು ಗೃಹ ಸಚಿವರಿಗೆ ಹೇಳಿದ್ದೇನೆ. ವಿಶೇಷ ತನಿಖಾ ತಂಡದ ಅಗತ್ಯವಿದೆ ಎಂದಿದ್ದಾರೆ. ಈ ಬಗ್ಗೆ ಗೃಹ ಸಚಿವರು ಪರಿಶೀಲಿಸಿ ಕ್ರಮ ಕೈಗೊಳ್ಳುತ್ತಾರೆ ಎಂದರು.
ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ಮರು ಪರೀಕ್ಷೆಗೆ ಸೂಚನೆ: ಆದಷ್ಟು ಬೇಗ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ಮರು ಪರೀಕ್ಷೆಗೆ ವ್ಯವಸ್ಥೆ ಮಾಡುವಂತೆ ಕರ್ನಾಟಕ ಲೋಕಸೇವಾ ಆಯೋಗಕ್ಕೆ ಸೂಚನೆ ನೀಡಿರುವುದಾಗಿ ಕೂಡ ಸಿಎಂ ಹೇಳಿದರು.
ಪರೀಕ್ಷೆಯಲ್ಲಿ ಇಂಗ್ಲಿಷ್‌ನಿಂದ ಕನ್ನಡಕ್ಕೆ ಪ್ರಶ್ನೆಗಳನ್ನು ಕಳಪೆಯಾಗಿ ಭಾಷಾಂತರಿಸಿರುವ ಬಗ್ಗೆ ಆಕ್ರೋಶ ವ್ಯಕ್ತವಾಗಿದ್ದು, ಕನ್ನಡ ಮಾಧ್ಯಮ ವಿದ್ಯಾರ್ಥಿಗಳಲ್ಲಿ ಗೊಂದಲಕ್ಕೆ ಕಾರಣವಾಗಿತ್ತು. ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ಮರು ಪರೀಕ್ಷೆಗೆ ಆದಷ್ಟು ಬೇಗ ವ್ಯವಸ್ಥೆ ಮಾಡುವಂತೆ ಕೆಪಿಎಸ್ ಸಿಗೆ ಸೂಚನೆ ನೀಡಲಾಗಿದೆ ಎಂದರು.
350 ಗೆಜೆಟೆಡ್ ಪ್ರೊಬೇಷನರಿ ಅಧಿಕಾರಿಗಳ ಹುದ್ದೆಗಳನ್ನು ಭರ್ತಿ ಮಾಡಲು ಪೂರ್ವಭಾವಿ ಪರೀಕ್ಷೆಗಳು ಆಗಸ್ಟ್ 27 ರಂದು ನಡೆದಿದ್ದವು.
ಕಾನ್ ಸ್ಟೇಬಲ್ ಹುದ್ದೆಗಳ ವಯೋಮಿತಿಯನ್ನು 27ರಿಂದ 33 ವರ್ಷಕ್ಕೆ ಏರಿಸಬೇಕೆಂಬ ಬೇಡಿಕೆ ಕುರಿತು ಮಾತನಾಡಿದ ಅವರು, ಈ ಬಗ್ಗೆ ಒಂದೇ ಬಾರಿ ತೀರ್ಮಾನ ಕೈಗೊಳ್ಳುವಂತೆ ಗೃಹ ಸಚಿವರಿಗೆ ಸೂಚಿಸಿರುವುದಾಗಿ ತಿಳಿಸಿದರು.
Advertisement