ಬೆಂಗಳೂರು: ಕರ್ನಾಟಕದಲ್ಲಿ ರಾಜ್ಯಪಾಲರು ಮತ್ತು ಸರ್ಕಾರದ ನಡುವಿನ ಜಟಾಪಟಿ ಮುಂದುವರಿದಿದ್ದು, ರಾಜ್ಯಪಾಲರು ಪ್ರತಿನಿತ್ಯ ಸರ್ಕಾರದಿಂದ ಮಾಹಿತಿ ಪಡೆದ ಉದಾಹರಣೆಗಳಿಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ ಹೇಳಿದ್ದು ಎಲ್ಲದಕ್ಕೂ ಉತ್ತರಿಸುವ ಅಗತ್ಯವಿಲ್ಲ ಎಂದು ಒತ್ತಿ ಹೇಳಿದರು.
ಬೆಂಗಳೂರಿನ ಮಾಧ್ಯಮದವರೊಂದಿಗೆ ಮಾತನಾಡಿದ ಪರಮೇಶ್ವರ ಅವರು, ರಾಜ್ಯಪಾಲರು ಅತ್ಯಂತ ಜವಾಬ್ದಾರಿಯುತ ಮತ್ತು ಗೌರವಾನ್ವಿತ ಸ್ಥಾನವನ್ನು ಹೊಂದಿದ್ದಾರೆ. ಮೊದಲ ಬಾರಿಗೆ ರಾಜ್ಯಪಾಲರು ಸರ್ಕಾರದ ದೈನಂದಿನ ಆಡಳಿತದ ಬಗ್ಗೆ ಮಾಹಿತಿ ಕೇಳುತ್ತಿದ್ದಾರೆ. ಸಂವಿಧಾನದ ಆಶಯವನ್ನು ಕಾಪಾಡುವುದು ರಾಜ್ಯಪಾಲರ ಜವಾಬ್ದಾರಿಯಾಗಿದೆ ಎಂದ ಅವರು, ದೈನಂದಿನ ಆಡಳಿತವನ್ನು ನಿರ್ವಹಿಸುವ ಅಧಿಕಾರ ಮುಖ್ಯಮಂತ್ರಿ ಮತ್ತು ಸರ್ಕಾರಕ್ಕೆ ಇದೆ. ಆದರೆ ರಾಜ್ಯಪಾಲರು ಮಾಹಿತಿ ಕೇಳುತ್ತಿರುವುದು ಅಥವಾ ಮಧ್ಯಪ್ರವೇಶಿಸುತ್ತಿರುವುದು ಇದೇ ಮೊದಲು. ನಾನು 35 ವರ್ಷಗಳಿಂದ ರಾಜಕೀಯದಲ್ಲಿದ್ದೇನೆ. ನಾವು ಅನೇಕ ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳನ್ನು ನೋಡಿದ್ದೇವೆ. ಅಂತಹ ಪರಿಸ್ಥಿತಿ ಎಂದಿಗೂ ಉದ್ಭವಿಸಿರಲಿಲ್ಲ, ರಾಜ್ಯಪಾಲರು ಸರ್ಕಾರದ ದೈನಂದಿನ ಕೆಲಸ ಅಥವಾ ನಿರ್ಧಾರಗಳ ಬಗ್ಗೆ ಮಾಹಿತಿ ಕೇಳಿರುವ ಉದಾಹರಣೆಗಳಿಲ್ಲ ಪರಮೇಶ್ವರ್ ಹೇಳಿದರು.
ಅಗತ್ಯವಿದ್ದಾಗ, ಮುಖ್ಯಮಂತ್ರಿ, ಮುಖ್ಯ ಕಾರ್ಯದರ್ಶಿ, ಅಥವಾ ಗೃಹ ಸಚಿವರು ರಾಜ್ಯಪಾಲರಿಗೆ ವಿಶೇಷವಾಗಿ ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಮಾಹಿತಿ ನೀಡುತ್ತಾರೆ. ರಾಜ್ಯಪಾಲರಿಗೆ ಸಂಬಂಧಪಟ್ಟ ಸಚಿವರನ್ನು ಕರೆದು ಕೇಳುವ ಹಕ್ಕು ಇದೆ. ಆದರೆ, ದೈನಂದಿನ ಪತ್ರಗಳ ಮೂಲಕ ಮಾಹಿತಿ ಕೇಳುವುದು ಸಂವಿಧಾನಕ್ಕೆ ವಿರುದ್ಧವಾಗಿದೆ. ರಾಜ್ಯಪಾಲರು ಮತ್ತು ಸರ್ಕಾರದ ನಡುವೆ ಉತ್ತಮ ಬಾಂಧವ್ಯ ಇರಬೇಕು. ಆಗ ಮಾತ್ರ ಜನಪರ ಹಾಗೂ ರಾಜ್ಯಕ್ಕಾಗಿ ಕೆಲಸ ಮಾಡಲು ಸಾಧ್ಯ .ಈ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಸಂಪುಟದಲ್ಲಿ ಚರ್ಚಿಸಿ ಏನು ಕ್ರಮ ಕೈಗೊಳ್ಳಬೇಕು ಎಂದು ತೀರ್ಮಾನಿಸುತ್ತೇವೆ ಎಂದರು.
ರಾಜ್ಯಪಾಲರು ಕೇಳುವ ಎಲ್ಲದಕ್ಕೂ ಉತ್ತರಿಸುವ ಕಟ್ಟುಪಾಡು ಇಲ್ಲ. ಆದರೆ ಉತ್ತರ ನೀಡಬೇಕಾದ್ದಕ್ಕೆ ನಾವು ಖಂಡಿತವಾಗಿ ಉತ್ತರಿಸುತ್ತೇವೆ. ಪ್ರತಿ ಪ್ರಶ್ನೆಗೆ ನಾವು ಉತ್ತರಿಸಬೇಕು ಎಂಬ ಕಡ್ಡಾಯವಿಲ್ಲ. ರಾಜ್ಯಪಾಲರು ಯಾಕೆ ಹೀಗೆ ಮಾಡುತ್ತಿದ್ದಾರೆ ಎಂಬುದು ಗೊತ್ತಿಲ್ಲ, ಚುನಾಯಿತ ಮುಖ್ಯಮಂತ್ರಿಗೆ ರಾಜ್ಯಪಾಲರು ಏಕಾಏಕಿ ಶೋಕಾಸ್ ನೋಟಿಸ್ ಜಾರಿ ಮಾಡಿದ್ದು ತಪ್ಪು ಎಂದು ನಾವು ಪ್ರತಿಭಟನೆ ನಡೆಸಿದ್ದೇವೆ. ನಾವು ವಿನಾಕಾರಣ ಪ್ರತಿಭಟನೆ ಮಾಡಿಲ್ಲ, ತನಿಖೆಯೂ ನಡೆದಿಲ್ಲ. ಯಾರೋ ದೂರು ನೀಡಿದ ಮಾತ್ರಕ್ಕೆ ಯಾವುದೇ ವರದಿ ನೀಡದೆ, ವಿಚಾರಣೆ ನಡೆಸದೆ ಶೋಕಾಸ್ ನೋಟಿಸ್ ನೀಡಿರುವುದು ಸರಿಯಲ್ಲ ಎಂದು ಟೀಕಿಸಿದರು.
ಮುಖ್ಯಮಂತ್ರಿಗೆ ಒಂದು ಮಾನದಂಡ, ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿಗೆ ಇನ್ನೊಂದು ಮಾನದಂಡ ಇರಬಾರದು, ಅದೇ ಮಾನದಂಡದಲ್ಲಿ ಕೆಲಸ ನಡಿಬೇಕು, ಒಬ್ಬರಿಗೆ ನೋಟಿಸ್ ನೀಡಿದರೆ ಮತ್ತೊಬ್ಬರಿಗೂ ನೀಡಲಿ, ಈ ಬಗ್ಗೆ ರಾಜ್ಯಪಾಲರನ್ನು ನಾವೂ ಸಹ ಪ್ರಶ್ನಿಸಿದ್ದೇವೆ ಎಂದು ಅವರು ಹೇಳಿದರು.
Advertisement