ಬೆಂಗಳೂರು: ಮುಡಾ ಸೈಟು ಹಂಚಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಯಾವುದೇ ತಪ್ಪು ಮಾಡಿಲ್ಲ ಮತ್ತು ಈ ಪ್ರಕರಣದಲ್ಲಿ ಆರೋಪ ಮುಕ್ತರಾಗಿ ಹೊರಬರುತ್ತಾರೆ ಎಂಬ ವಿಶ್ವಾಸವಿದೆ ಎಂದು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಬುಧವಾರ ಹೇಳಿದ್ದಾರೆ.
ಇಂದು ವಿಧಾನಸೌಧದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತ ತನಿಖೆಗೆ ಆದೇಶಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಡಿಸಿಎಂ, ಮುಡಾ ಸೈಟು ಹಂಚಿಕೆಯಲ್ಲಿ ಸಿದ್ದರಾಮಯ್ಯನವರ ಪಾತ್ರವಿಲ್ಲ. ಅಧಿಕಾರಿಗಳ ಕೈವಾಡವಿರಬಹುದು ಎಂದರು.
‘ಏನಾದರೂ ತಪ್ಪು ನಡೆದಿದ್ದರೆ ಅದನ್ನು ಅಧಿಕಾರಿಗಳೇ ಮಾಡಿರಬೇಕು, ಅದು ನನಗೆ ಗೊತ್ತಿಲ್ಲ, ಆದರೆ ಮುಖ್ಯಮಂತ್ರಿಗಳ ಕೈವಾಡವಿಲ್ಲ ಎಂದು ನಾನು ಸ್ಪಷ್ಟವಾಗಿ ಹೇಳುತ್ತಿದ್ದೇನೆ. ಅವರು ಆರೋಪ ಮುಕ್ತರಾಗಿ ಹೊರಬರುತ್ತಾರೆ ಎಂದರು.
ಇದೇ ವೇಳೆ ಸಿದ್ದರಾಮಯ್ಯನವರ ರಾಜೀನಾಮೆಗೆ ಪ್ರತಿಪಕ್ಷ ಬಿಜೆಪಿ ಮತ್ತು ಜೆಡಿಎಸ್‌ನ ಆಗ್ರಹದ ಕುರಿತು ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, "ರಾಜಕೀಯ ಮಾಡುವವರು ಅದನ್ನು ಮುಂದುವರಿಸುತ್ತಾರೆ. ಆದರೆ ಕಾನೂನು ಮತ್ತು ರಾಜಕೀಯದ ನಡುವೆ ವ್ಯತ್ಯಾಸವಿದೆ" ಎಂದರು.
ವಿರೋಧ ಪಕ್ಷಗಳ ನಾಯಕರ ವಿರುದ್ಧವೂ ಆರೋಪಗಳು ಇವೆ. ಹಾಗಾಗಿ ಮೊದಲು ವಿರೋಧ ಪಕ್ಷಗಳ ನಾಯಕರು ರಾಜೀನಾಮೆ ನೀಡಲಿ ಎಂದು ಡಿಸಿಎಂ ಡಿಕೆ ಶಿವಕುಮಾರ್ ವಾಗ್ದಾಳಿ ನಡೆಸಿದರು.
"ಹಲವು ಕೇಂದ್ರ ಸಚಿವರ ವಿರುದ್ಧ ಹಲವು ತನಿಖೆಗಳು ನಡೆಯುತ್ತಿವೆ. ಆದರೂ ಅವರು ಇನ್ನೂ ಅಧಿಕಾರದಲ್ಲಿ ಮುಂದುವರಿದಿದ್ದಾರೆ. ಅವರು ಮೊದಲು ರಾಜೀನಾಮೆ ನೀಡಲಿ ನಂತರ ನಾವು ಈ (ಸಿದ್ದರಾಮಯ್ಯ) ರಾಜೀನಾಮೆ ಬಗ್ಗೆ ಚರ್ಚಿಸುತ್ತೇವೆ ಎಂದರು.
Advertisement