'ದೆಹಲಿ ಚಲೋ' ಹೋರಾಟ ದೇಶದ ಏಕತೆ, ಭದ್ರತೆಗೆ ಬೆದರಿಕೆ: ಪ್ರಧಾನಿ ಮೋದಿ ಹೇಳಿಕೆ ವಿರುದ್ಧ ಸಿಎಂ ಸಿದ್ದರಾಮಯ್ಯ ಕಿಡಿ

ತೆರಿಗೆ ಹಂಚಿಕೆ ಸೇರಿದಂತೆ ಕನ್ನಡಿಗರಿಗೆ ಕೇಂದ್ರ ಸರ್ಕಾರದಿಂದ ಆಗುತ್ತಿರುವ ಅನ್ಯಾಯವನ್ನು ಪ್ರತಿಭಟಿಸಿ ಕಾಂಗ್ರೆಸ್ ಸರ್ಕಾರ ನಡೆಸಿದ್ದ ‘‘ದೆಹಲಿ ಚಲೋ’’ ಹೋರಾಟ ದೇಶದ ಏಕತೆ ಮತ್ತು ಭದ್ರತೆಗೆ ಬೆದರಿಕೆ ಒಡ್ಡಿದೆ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆ ಅಚ್ಚರಿ ಉಂಟು ಮಾಡಿದೆ ಎಂದು ಸಿಎಂ ಸಿದ್ದರಾಮಯ್ಯ ಗುರುವಾರ ಹೇಳಿದ್ದಾರೆ. 
ಸಿಎಂ ಸಿದ್ದರಾಮಯ್ಯ ಮತ್ತು ಪ್ರಧಾನಿ ಮೋದಿ
ಸಿಎಂ ಸಿದ್ದರಾಮಯ್ಯ ಮತ್ತು ಪ್ರಧಾನಿ ಮೋದಿ
Updated on

ಬೆಂಗಳೂರು: ತೆರಿಗೆ ಹಂಚಿಕೆ ಸೇರಿದಂತೆ ಕನ್ನಡಿಗರಿಗೆ ಕೇಂದ್ರ ಸರ್ಕಾರದಿಂದ ಆಗುತ್ತಿರುವ ಅನ್ಯಾಯವನ್ನು ಪ್ರತಿಭಟಿಸಿ ಕಾಂಗ್ರೆಸ್ ಸರ್ಕಾರ ನಡೆಸಿದ್ದ ‘‘ದೆಹಲಿ ಚಲೋ’’ ಹೋರಾಟ ದೇಶದ ಏಕತೆ ಮತ್ತು ಭದ್ರತೆಗೆ ಬೆದರಿಕೆ ಒಡ್ಡಿದೆ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆ ಅಚ್ಚರಿ ಉಂಟು ಮಾಡಿದೆ ಎಂದು ಸಿಎಂ ಸಿದ್ದರಾಮಯ್ಯ ಗುರುವಾರ ಹೇಳಿದ್ದಾರೆ. 

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಇದೇ ಮೋದಿಯವರು ಗುಜರಾತ್ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಯುಪಿಎ ಸರ್ಕಾರದ ವಿರುದ್ಧ ಪುಂಖಾನುಪುಂಖವಾಗಿ ನೀಡಿರುವ ಹೇಳಿಕೆಗಳನ್ನು ಅವರ ಗಮನಕ್ಕೆ ತರಬಯಸುತ್ತೇನೆ. ಅವರ ಹೇಳಿಕೆಗಳು ದೇಶದ ಏಕತೆ ಮತ್ತು ಭದ್ರತೆಗೆ ಬೆದರಿಕೆ ಒಡ್ಡಿರಲಿಲ್ಲವೇ? ಎಂದು ಪ್ರಶ್ನಿಸಿದ್ದಾರೆ. 

ಕೇಂದ್ರ ಹಣಕಾಸು ಆಯೋಗದ ವಿರುದ್ಧ ಮೊದಲು ಮಾತನಾಡಿದ ಮೋದಿಯವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ 2012ರ ಡಿಸೆಂಬರ್ ಆರರಂದು ಹೇಳಿಕೆಯೊಂದನ್ನು ನೀಡಿ, ಗುಜರಾತ್ ರಾಜ್ಯ ಕೇಂದ್ರ ಸರ್ಕಾರಕ್ಕೆ ರೂ.60,000 ಕೋಟಿ ನೀಡುತ್ತಿದೆ, ಇದರಲ್ಲಿ ನಮಗೆ ವಾಪಸ್ ಬಂದದ್ದು ಎಷ್ಟು? ಗುಜರಾತ್ ಭಿಕ್ಷುಕ ರಾಜ್ಯವೇ? ಎಂದು ಪ್ರಶ್ನಿಸಿದ್ದರು. 2008ರಲ್ಲಿ ವಡೋದರಾದ ಮಾತನಾಡುತ್ತಾ ‘ಗುಜರಾತ್ ರಾಜ್ಯ ಪ್ರತಿವರ್ಷ ರೂ.40,000 ಕೋಟಿ ರೂ.ಗಳನ್ನು ತೆರಿಗೆ ರೂಪದಲ್ಲಿ ಕೇಂದ್ರ ಸರ್ಕಾರಕ್ಕೆ ಪಾವತಿಸುತ್ತಿದೆ. ಅದರಲ್ಲಿ ಕೇವಲ ಶೇಕಡಾ 2.5ರಷ್ಟು ಮಾತ್ರ ರಾಜ್ಯಕ್ಕೆ ವಾಪಸು ನೀಡಲಾಗುತ್ತದೆ. ಇಷ್ಟು ಜುಜುಬಿ ಮೊತ್ತವನ್ನು ವಾಪಸು ನೀಡುವ ಬದಲಿಗೆ ಒಂದು ವರ್ಷದ ಅವಧಿಗೆ ನಮ್ಮ ತೆರಿಗೆಯನ್ನು ನಾವೇ ಬಳಸಿಕೊಳ್ಳಲು ಅವಕಾಶ ನೀಡಬಾರದೇಕೆ? ಎಂದು ಕೇಂದ್ರ ಸರ್ಕಾರದ ಅಸ್ತಿತ್ವನ್ನೇ ಪ್ರಶ್ನಿಸಿದ್ದರು.

ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ 2012ರ ಜನವರಿ ಒಂಭತ್ತರಂದು ನಡೆದಿದ್ದ ಹತ್ತನೇ ಪ್ರವಾಸಿ ಭಾರತೀಯ ಸಮ್ಮೇಳನದಲ್ಲಿ  ‘ಕೇಂದ್ರ ಸರ್ಕಾರ ಇಲ್ಲವೆ ಪ್ರಧಾನಮಂತ್ರಿಯವರಿಂದ ನಮಗೆ ಚಿಕ್ಕಾಸಿನ ನೆರವು ಸಿಗುತ್ತಿಲ್ಲ. ನಾವು ನಮ್ಮ ಸಂಪನ್ಮೂಲವನ್ನೇ ನೆಚ್ಚಿಕೊಂಡಿದ್ದೇವೆ’ ಎಂದು ವಿದೇಶಿ ಗಣ್ಯರಿದ್ದ ವೇದಿಕೆಯಲ್ಲಿಯೇ ದೂರಿದ್ದರು. ಹದಿನಾಲ್ಕನೇ ಹಣಕಾಸು ಆಯೋಗದ ಜೊತೆಗಿನ ಮಾತುಕತೆಯಲ್ಲಿ ಇದೇ ‘ಕೇಂದ್ರ ಸರ್ಕಾರ ರಾಜ್ಯದಿಂದ ಸಂಗ್ರಹಿಸುವ ತೆರಿಗೆಯಲ್ಲಿ ಕನಿಷ್ಠ ಶೇಕಡಾ 32 ರಿಂದ 50ರ ವರೆಗೆ ರಾಜ್ಯಕ್ಕೆ ಪಾಲು ನೀಡಬೇಕು’ ಎಂದು ವಾದಿಸಿದ್ದಾಗಿ ಮುಖ್ಯಮಂತ್ರಿ ತಿಳಿಸಿದ್ದಾರೆ.

ಯುಪಿಎ ಸರ್ಕಾರ ವಿದೇಶಿ ನೇರ ಬಂಡವಾಳ ಹೂಡಿಕೆಯ ಕಾನೂನನ್ನು ಜಾರಿಗೆ ತಂದಾಗ ಅದನ್ನು ವಿರೋಧಿಸಿದ್ದ ನರೇಂದ್ರ ಮೋದಿ ‘ಇನ್ನು ಮುಂದೆ ನಿತ್ಯ ಬಳಕೆಯ ಉಪ್ಪು, ಸಾಂಬಾರ ಪದಾರ್ಥಗಳನ್ನೂ ವಿದೇಶಿಯರೇ ಮಾರುತ್ತಾರೆ' ಎಂದು ವ್ಯಂಗ್ಯವಾಡಿದ್ದರು. ಎಫ್ ಡಿ ಐ ನಿಂದಾಗಿ ದೇಶದ ಸಣ್ಣ ಸಣ್ಣ ಅಂಗಡಿ ಮಾಲೀಕರು ಮತ್ತು ಉತ್ಪಾದನಾ ಕ್ಷೇತ್ರದಲ್ಲಿರುವವರು ನಿರುದ್ಯೋಗಿಗಳಾಗುತ್ತಾರೆ ಎಂದು ಆತಂಕ ವ್ಯಕ್ತಪಡಿಸಿದ್ದರು. ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿಯತ್ತಿದ್ದಾಗ ನರೇಂದ್ರ ಮೋದಿಯವರು ‘ಯುಪಿಎ ಸರ್ಕಾರ ಮತ್ತು ರೂಪಾಯಿ ಉರುಳಿ ಕೆಳಗೆ ಬೀಳುವುದರದಲ್ಲಿ ಪೈಪೋಟಿ ನಡೆಸುವಂತಿದೆ' ಎಂದು ವ್ಯಂಗ್ಯವಾಡಿದ್ದರು. 

ಇಂತಹ ಹತ್ತಾರು ಯೂ ಟರ್ನ್ ಗಳನ್ನು ನಾನು ಪಟ್ಟಿ ಮಾಡಿಕೊಡಬಹುದು. ಆ ದಿನಗಳಲ್ಲಿ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದ, ಟೀಕಿಸಿದ್ದ ನರೇಂದ್ರ ಮೋದಿ ಅವರ ಹೇಳಿಕೆಗಳಿಂದ ದೇಶದ ಏಕತೆ ಮತ್ತು ಭದ್ರತೆಗೆ ಎದುರಾಗದ ಬೆದರಿಕೆ ಈಗ ನಮ್ಮ ಪ್ರತಿಭಟನೆಯಿಂದ ಹೇಗೆ ಎದುರಾಯಿತು ಎನ್ನುವುದನ್ನು ಪ್ರಧಾನಿ ನರೇಂದ್ರ ಮೋದಿಯವರೇ ವಿವರಿಸಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com