ದೆಹಲಿ ವರಿಷ್ಠರ ಭೇಟಿ ಯಶಸ್ವಿ; ನಾನು ಬಿಜೆಪಿ ಸೇರಲು ಯಡಿಯೂರಪ್ಪ ವಿರೋಧ ಮಾಡಿದ್ದರಂತೆ: ಯತ್ನಾಳ್

ಯಡಿಯೂರಪ್ಪ ನೇತೃತ್ವದ ಹಿಂದಿನ ಬಿಜೆಪಿ ಸರ್ಕಾರವು ಕೋವಿಡ್ -19 ರೋಗಿಗಳಿಗೆ ಮೀಸಲಾದ ರೆಮ್‌ಡೆಸಿವಿರ್ ಡೋಸ್‌ಗಳನ್ನು ಹೆಚ್ಚು ಬೆಲೆ  ನೀಡಿ ಖರೀದಿಸಿದೆ ಎಂದು ಆರೋಪಿಸಿದರು.
ಬಸನಗೌಡ ಪಾಟೀಲ್ ಯತ್ನಾಳ್
ಬಸನಗೌಡ ಪಾಟೀಲ್ ಯತ್ನಾಳ್
Updated on

ವಿಜಯಪುರ: ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ ಮತ್ತು ಅವರ ಪುತ್ರ ಬಿವೈ ವಿಜಯೇಂದ್ರ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದು, ಮಾಜಿ ಸಿಎಂ ವಿರುದ್ಧ ಭ್ರಷ್ಟಾಚಾರದ ಆರೋಪವನ್ನು ಪುನರುಚ್ಚರಿಸಿದ್ದಾರೆ.

ಸೋಮವಾರ ಇಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಕೇಂದ್ರ ಸಚಿವ ಯತ್ನಾಳ್, ಯಡಿಯೂರಪ್ಪ ನೇತೃತ್ವದ ಹಿಂದಿನ ಬಿಜೆಪಿ ಸರ್ಕಾರವು ಕೋವಿಡ್ -19 ರೋಗಿಗಳಿಗೆ ಮೀಸಲಾದ ರೆಮ್‌ಡೆಸಿವಿರ್ ಡೋಸ್‌ಗಳನ್ನು ಹೆಚ್ಚು ಬೆಲೆ ನೀಡಿ ಖರೀದಿಸಿದೆ ಎಂದು ಆರೋಪಿಸಿದರು.

ಒಂದು ಡೋಸ್‌ಗೆ 990 ರೂ.ಗೆ ಟೆಂಡರ್ ಕರೆಯಲಾಗಿತ್ತು, ಆಗಿನ ಕರ್ನಾಟಕ ಸರ್ಕಾರ ಅದನ್ನು 1,350 ರೂ.ಗೆ ಖರೀದಿಸಿತು. ಈ ಬಗ್ಗೆ ನನ್ನ ಬಳಿ ಹೆಚ್ಚಿನ ಮಾಹಿತಿ ಇದೆ, ಮುಂದಿನ ದಿನಗಳಲ್ಲಿ ಅದನ್ನು ಬಹಿರಂಗಪಡಿಸುತ್ತೇನೆ ಎಂದು ಯತ್ನಾಳ್ ಹೇಳಿದ್ದಾರೆ. ಈ ಪ್ರಕರಣದ ಸತ್ಯಾಸತ್ಯತೆಯನ್ನು ಬಯಲಿಗೆಳೆಯಲು ಸಿಬಿಐ ತನಿಖೆಗೆ ಆದೇಶಿಸಬೇಕು ಎಂದು ಕರ್ನಾಟಕದ ಕಾಂಗ್ರೆಸ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ನಡೆದ ಕೋವಿಡ್ ಹಗರಣದ ಬಗ್ಗೆಯೂ ಹೈಕಮಾಂಡ್ ನಾಯಕರಿಗೆ ತಿಳಿಸಿದ್ದೇನೆ. ನವದೆಹಲಿಯ ಭೇಟಿ ಅತ್ಯಂತ ಯಶಸ್ವಿಯಾಗಿದೆ ಎಂದು ವಿವರಣೆ ನೀಡಿದರು.

ನಾನು ಬಿಜೆಪಿಗೆ ಸೇರೋದಕ್ಕೆ ಯಡಿಯೂರಪ್ಪ ವಿರೋಧ ಮಾಡಿದ್ದರು. ಅವರು ನನ್ನನ್ನು ಬಿಜೆಪಿಗೆ ಕರೆದುಕೊಂಡು ಬಂದು ಟಿಕೆಟ್‌ ಕೊಟ್ಟಿಲ್ಲ. ಈ ವಿಷಯ ಕೇಂದ್ರದ ನಾಯಕರಿಂದ ಗೊತ್ತಾಗಿದೆ. ನಾನು ಬಿಜೆಪಿಗೆ ಸೇರುವುದಕ್ಕೆ ಯಡಿಯೂರಪ್ಪ ಅವರು ಭಾರಿ ವಿರೋಧ ಮಾಡಿದ್ದರು. ನನ್ನನ್ನು ಬಿಜೆಪಿಗೆ ಕರೆಸಿದ್ದು, ಆಗಿನ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಅಮಿತ್‌ ಶಾ ಎಂದು ಯತ್ನಾಳ್‌ ಹೇಳಿದರು.

ರಾಷ್ಟ್ರೀಯ ಅಧ್ಯಕ್ಷರ ಭೇಟಿಗೂ ಮುನ್ನ ಅರುಣ್‌ ಸಿಂಗ್ ಹಾಗೂ ರಾಧಾ‌ಮೋಹನ್ ಅಗರವಾಲ್ ಅವರನ್ನು ಭೇಟಿ ಮಾಡಲು ತಿಳಿಸಿದ್ದರು. ಅವರಿಬ್ಬರ ಬಳಿ ಮಾತನಾಡಿ ಮಾಹಿತಿಯನ್ನು ತಿಳಿದುಕೊಂಡ ಬಳಿಕ ಅಮಿತ್ ಶಾ ಹಾಗೂ ನಡ್ಡಾ ಅವರು ನನ್ನನ್ನು ಭೇಟಿ ಮಾಡಿದರು. 25 ನಿಮಿಷಗಳ ಕಾಲ ಸುದೀರ್ಘ ಮಾತುಕತೆ ನಡೆಯಿತು. ಎಲ್ಲಾ ವಿಚಾರಗಳನ್ನು ಕೇಂದ್ರದ ನಾಯಕರ ಮುಂದೆ ಹೇಳಿದ್ದೇನೆ. ಎಲ್ಲವನ್ನೂ ಮುಂದಿನ ದಿನಗಳಲ್ಲಿ ಸರಿಪಡಿಸುವುದಾಗಿ ಭರವಸೆ ನೀಡಿದ್ದಾರೆ ಎಂದರು.

ನಾನು ಪಕ್ಷದ ಕೆಲವರ ವಿರುದ್ಧ ಬಹಿರಂಗವಾಗಿ ಮಾಡಿದ ಆರೋಪ ಸಂಬಂಧಿಸಿದಂತೆ ವರಿಷ್ಠರು ನನಗೆ ಯಾವುದೇ ಎಚ್ಚರಿಕೆಯನ್ನು ನೀಡಿಲ್ಲ. ನಡ್ಡಾ ಮತ್ತು ಶಾ ಅವರು ಅತ್ಯಂತ ಗೌರವಯುತವಾಗಿ ನನ್ನ ಮಾತುಗಳನ್ನು ಕೇಳಿಸಿಕೊಂಡಿದ್ದು, ಭ್ರಷ್ಟಾಚಾರದ ವಿರುದ್ಧ ನನ್ನ ಹೋರಾಟದಲ್ಲಿ ಯಾವುದೇ ರಾಜೀ ಇಲ್ಲ ಎಂದು ಯತ್ನಾಳ್ ಸ್ಪಷ್ಟಪಡಿಸಿದರು.

ಜ.12 ರಿಂದ 18ರ ವರೆಗೆ ವಿಜಯಪುರ ನಗರದಲ್ಲಿ ನಡೆಯಲಿರುವ ಸಿದ್ದೇಶ್ವರ ಜಾತ್ರೆಯಲ್ಲಿ ವ್ಯಾಪಾರ, ವಹಿವಾಟಿಗೆ ಹಿಂದೂಗಳಿಗೆ ಅವಕಾಶ ನೀಡಲಾಗುವುದು. ಆದರೆ, ಜಾತ್ರೆಯಲ್ಲಿ ಮುಸ್ಲಿಮ್ ಸಮುದಾಯದವರು ವ್ಯಾಪಾರ ನಡೆಸಲು ಯಾವುದೇ ನಿರ್ಬಂಧವಿಲ್ಲ ಎಂದು ಸಿದ್ದೇಶ್ವರ ಸಂಸ್ಥೆಯ ಅಧ್ಯಕ್ಷರೂ ಆಗಿರುವ ಶಾಸಕ ಯತ್ನಾಳ್ ಇದೇ ವೇಳೆ ಸ್ಪಷ್ಟಪಡಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com