ನಾನು ಹಿಂದೂ ವಿರೋಧಿ ಅಲ್ಲ, ಅಯೋಧ್ಯೆಗೆ ಹೋಗಿ ರಾಮ ಮಂದಿರಕ್ಕೂ ಭೇಟಿ ನೀಡುತ್ತೇನೆ: ಸಿಎಂ ಸಿದ್ದರಾಮಯ್ಯ

ನಾನು ಹಿಂದೂ ವಿರೋಧಿ ಅಲ್ಲ, ಅಯೋಧ್ಯೆಗೆ ಹೋಗಿ ರಾಮ ಮಂದಿರಕ್ಕೂ ಭೇಟಿ ನೀಡುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಪ್ರತಿಪಕ್ಷ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ.
ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ

ಬೆಂಗಳೂರು: ನಾನು ಹಿಂದೂ ವಿರೋಧಿ ಅಲ್ಲ, ಅಯೋಧ್ಯೆಗೆ ಹೋಗಿ ರಾಮ ಮಂದಿರಕ್ಕೂ ಭೇಟಿ ನೀಡುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಪ್ರತಿಪಕ್ಷ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ.

ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಸಿಎಂ, ರಾಮಲಲ್ಲ ಮೂರ್ತಿ ಪ್ರತಿಷ್ಠಾಪನಾ ಸಮಾರಂಭದಲ್ಲಿ ಭಾಗವಹಿಸುವುದಿಲ್ಲ ಎಂಬ ನಮ್ಮ ಪಕ್ಷದ ಹಿರಿಯ ನಾಯಕರ ನಿಲುವನ್ನು ಬೆಂಬಲಿಸುತ್ತೇನೆ ಎಂಬ ಹೇಳಿಕೆಯ ವಿರುದ್ಧ ರಾಜ್ಯ ಬಿಜೆಪಿ ನಾಯಕರು ಯಥಾಪ್ರಕಾರ ನನ್ನನ್ನು ಹಿಂದೂ ವಿರೋಧಿ ಎಂದು ಬಿಂಬಿಸಲು ನಾಲಗೆ ಹರಿಬಿಡುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.

ನಾನು ಹಿಂದೂ ವಿರೋಧಿಯೂ ಅಲ್ಲ, ಶ್ರೀರಾಮಚಂದ್ರನ ವಿರೋಧಿಯೂ ಅಲ್ಲ. ಜನವರಿ 22ರಂದು ಅಯೋಧ್ಯೆಯಲ್ಲಿ ನಡೆಯಲಿರುವ ಬಿಜೆಪಿ ನಾಟಕ ಮಂಡಳಿಯ ಪ್ರದರ್ಶನವೆಲ್ಲ ಮುಗಿದ ನಂತರ ಅರಾಮವಾಗಿ ಒಂದು ದಿನ ನಾನು ಅಯೋಧ್ಯೆಗೆ ಹೋಗಿ ರಾಮ ಮಂದಿರಕ್ಕೂ ಭೇಟಿ ನೀಡಿ ಬರಬೇಕೆಂದು ತೀರ್ಮಾನ ಮಾಡಿದ್ದೇನೆ. ನನ್ನನ್ನು ಶ್ರೀ ರಾಮಚಂದ್ರನ ವಿರೋಧಿಯೆಂದು ಕತೆ ಕಟ್ಟುತ್ತಿರುವವರ ಜೊತೆಗೂ ಆ ಭೇಟಿಯ ಪೋಟೋಗಳನ್ನು ಹಂಚಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

ನಾನು ಈಗಾಗಲೇ ತಿಳಿಸಿರುವಂತೆ ಪ್ರಧಾನಿ ಮೋದಿ ಮತ್ತು ಸಂಘ ಪರಿವಾರದ ನಾಯಕರು ಮೂರ್ತಿ ಪ್ರತಿಷ್ಠಾಪನಾ ಧಾರ್ಮಿಕ ಕಾರ್ಯಕ್ರಮವನ್ನು ರಾಜಕೀಯ ಪ್ರಚಾರದ ಕಾರ್ಯಕ್ರಮ ಮಾಡಿರುವುದನ್ನು ಪ್ರತಿಭಟಿಸಿ ನಾವು ಆ ಸಮಾರಂಭದಿಂದ ದೂರ ಇದ್ದೇವೆಯೇ ಹೊರತು ನಾವೇನು ದೇವರು-ಧರ್ಮದ ವಿರೋಧಿಗಳಲ್ಲ. 

ನಾವು ಮಾತ್ರವಲ್ಲ ಹಿಂದೂ ಧರ್ಮದ ಹಿರಿಯ ಸ್ವಾಮೀಜಿಗಳಾದ ಶಂಕರಾಚಾರ್ಯರು ಕೂಡಾ ಜನವರಿ 22ರಂದು ಅಯೋಧ್ಯೆಗೆ ಹೋಗುವುದಿಲ್ಲ ಎಂದು ಹೇಳಿದ್ದಾರೆ. ಇದರ ಬಗ್ಗೆ ಬಿಜೆಪಿ ಮತ್ತು ಆರ್.ಎಸ್.ಎಸ್ ಪ್ರತಿಕ್ರಿಯೆ ಏನಿರಬಹುದು ಎಂಬ ಕುತೂಹಲ ನನಗೂ ಇದೆ ಎಂದಿದ್ದಾರೆ.

ರಾಮ ಮಂದಿರದ ಉದ್ಘಾಟನೆಗೆ ನನಗೆ ಆಹ್ವಾನ ಬಂದಿಲ್ಲ. ಶ್ರೀರಾಮನಿಗೆ ನಮನ ಸಲ್ಲಿಸಲು ನಾವು ಅವರ ಹಿಂದೆ(ಬಿಜೆಪಿ) ಹೋಗುವುದಿಲ್ಲ. ನಾವೂ ರಾಮನನ್ನು ಆರಾಧಿಸುತ್ತೇವೆ. ಆದರೆ ಬಿಜೆಪಿ ರಾಮ ಮಂದಿರ ವಿಚಾರದಲ್ಲಿ ರಾಜಕೀಯ ಮಾಡುತ್ತಿದೆ. ನಾವು ಅವರ ರಾಜಕೀಯವನ್ನು ವಿರೋಧಿಸುತ್ತೇವೆಯೇ ಹೊರತು ರಾಮನಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ನಮ್ಮ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಜನವರಿ 22 ರಂದು ರಾಜ್ಯಾದ್ಯಂತ ರಾಮಮಂದಿರಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಿದ್ದಾರೆ ಎಂದು ಸಿಎಂ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com