ಲೋಕಸಭೆ ಚುನಾವಣೆಯಲ್ಲಿ 'ಒಳಮೀಸಲಾತಿ' ಅಸ್ತ್ರ: ಕೇಂದ್ರದ ಹೆಗಲಿಗೆ ಜವಾಬ್ದಾರಿ ಹೊರಿಸಿ ನುಣುಚಿಕೊಂಡ ರಾಜ್ಯ ಸರ್ಕಾರ!
ಬೆಂಗಳೂರು: ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿರುವ ವಿವಿಧ ಸಮುದಾಯಗಳಿಗೆ ಒಳ ಮೀಸಲಾತಿಯನ್ನು ಕಲ್ಪಿಸಲು ಸಂವಿಧಾನಕ್ಕೆ ತಿದ್ದುಪಡಿ ತರುವಂತೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಸಚಿವ ಸಂಪುಟ ಸಭೆ ಶಿಫಾರಸು ಮಾಡಿದೆ.
ಲೋಕಸಭೆ ಚುನಾವಣೆಯಲ್ಲಿ ಇದು ಪ್ರಮುಖ ವಿಷಯವಾಗುವ ಸಂಭವ ಇದೆ. ಈ ಹಿನ್ನೆಲೆಯೊಳಗೆ, ಒಳ ಮೀಸಲಾತಿ ವಿಷಯವನ್ನು ಕೇಂದ್ರದ ಹೆಗಲಿಗೆ ಹೊರಿಸುವ ದಾಳ ಉರುಳಿಸುವತ್ತ ಕಾಂಗ್ರೆಸ್ ಸರ್ಕಾರ ಹೆಜ್ಜೆ ಇಟ್ಟಿದೆ. ಸಂವಿಧಾನದ 341ನೇ ವಿಧಿಗೆ ಮೂರನೇ ಖಂಡವನ್ನು ಸೇರಿಸುವ ಮೂಲಕ ಪರಿಶಿಷ್ಟರಲ್ಲಿ ಒಳ ಮೀಸಲು ಅನುಷ್ಠಾನಕ್ಕೆ ತರುವಂತೆ ಶಿಫಾರಸು ಮಾಡಿದೆ. ಹೀಗಾಗಿ ಕರ್ನಾಟಕ, ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಇದು ಪ್ರಮುಖ ವಿಷಯವಾಗಲಿದೆ.
ಬಸವರಾಜ ಬೊಮ್ಮಾಯಿ ನೇತೃತ್ವದ ಹಿಂದಿನ ಬಿಜೆಪಿ ಸರ್ಕಾರ ಕಾನೂನು ಮತ್ತು ಸಂವಿಧಾನದ ಚೌಕಟ್ಟಿನಲ್ಲಿ ತನ್ನ ಕೆಲಸವನ್ನು ಮಾಡಿದೆ. ರಾಜ್ಯದ ಪ್ರಸ್ತಾವನೆಯನ್ನು ಪರಿಶೀಲಿಸಿದ ನಂತರ ಕೇಂದ್ರವು ತನ್ನ ಜವಾಬ್ದಾರಿಯನ್ನು ನಿರ್ವಹಿಸಲಿದೆ, ಸರ್ಕಾರ ಏನು ಪ್ರಸ್ತಾವನೆ ಕೊಟ್ಟಿದೆ ಎಂದು ಪರಿಶೀಲಿಸಿ ತೀರ್ಮಾನ ಮಾಡುತ್ತೇವೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಬೆಂಗಳೂರಿನಲ್ಲಿನಡೆದ ಬಿಜೆಪಿ ಎಸ್‌ಟಿ ಸಮುದಾಯದ ರ್ಯಾಲಿಯಲ್ಲಿ ತಿಳಿಸಿದ್ದಾರೆ. ಇದರೊಂದಿಗೆ ಕೋಟಾದೊಳಗಿನ ಒಳಮೀಸಲಾತಿ ಪರವಾಗಿ ಕೇಂದ್ರ ಸರ್ಕಾರವಿದೆ ಎಂಬ ಸಂದೇಶವನ್ನು ರವಾನಿಸಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್‌ನೊಂದಿಗೆ ಗುರುತಿಸಿಕೊಂಡಿರುವ ಎಸ್‌ಸಿ ಬಲ ಸಮುದಾಯವಾಗಿ, ಮೀಸಲಾತಿ ವರ್ಗೀಕರಣಕ್ಕಾಗಿ ದಶಕಗಳಿಂದ ಹೋರಾಟ ನಡೆಸುತ್ತಿರುವ ಎಸ್‌ಸಿ ಎಡ ಸಮುದಾಯವನ್ನು ಓಲೈಸಲು ಬಿಜೆಪಿ ಈಗ ಪ್ರಯತ್ನಿಸುತ್ತಿದೆ. ಲೋಕಸಭೆ ಚುನಾವಣೆಯಲ್ಲಿ ಸಮುದಾಯದ ಗಣನೀಯ ಸಂಖ್ಯೆ ನಿರ್ಣಾಯಕ ಪಾತ್ರ ವಹಿಸುತ್ತದೆ ಎಂದು ರಾಜಕೀಯ ಪಂಡಿತರು ಹೇಳಿದ್ದಾರೆ.
ತೆಲಂಗಾಣ ವಿಧಾನಸಭಾ ಚುನಾವಣೆಯ ರ್ಯಾಲಿಯಲ್ಲಿ ಮಾದಿಗ ಮೀಸಲಾತಿ ಹೋರಾಟ ಸಮಿತಿ (ಎಂಆರ್‌ಪಿಎಸ್) ನಾಯಕ ಮಂದಕೃಷ್ಣ ಮಾದಿಗ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಮುದಾಯದ ಬೇಡಿಕೆಯನ್ನು ಈಡೇರಿಸುವ ಸುಳಿವು ನೀಡಿದರು.
ಈ ವರ್ಷದ ಜನವರಿಯಲ್ಲಿ ಪ್ರಕರಣದ ಪರಿಶೀಲನೆ ಆರಂಭಿಸಿದ ಸುಪ್ರೀಂ ಕೋರ್ಟ್‌ನ ಏಳು ನ್ಯಾಯಾಧೀಶರ ಪೀಠದ ಮುಂದೆ ಇರುವುದರಿಂದ, ಮೋದಿ ಸರ್ಕಾರವು ನ್ಯಾಯಾಲಯದ ತೀರ್ಪಿನೊಂದಿಗೆ ಹೋಗುತ್ತದೆಯೇ ಅಥವಾ 341 (3 ನೇ ವಿಧಿಗೆ ತಿದ್ದುಪಡಿ ಮಾಡಲು ಪ್ರಯತ್ನಿಸುತ್ತದೆಯೇ ಎಂದು ನೋಡಬೇಕು) ಎಂದು ಪಂಡಿತರು ವಿವರಿಸಿದ್ದಾರೆ.
ದೇಶದ 11 ರಾಜ್ಯಗಳು ಎಸ್ಸಿ ಕೋಟಾದ ಒಳಮೀಸಲಾತಿ ಪರವಾಗಿವೆ ಎಂದು ಮೂಲಗಳು ತಿಳಿಸಿವೆ. ಮೇ ತಿಂಗಳ ವಿಧಾನಸಭಾ ಚುನಾವಣೆಗೂ ಮುನ್ನ ಎಸ್‌ಸಿ ಕೋಟಾ ವರ್ಗೀಕರಣಕ್ಕೆ ಶಿಫಾರಸು ಮಾಡಿರುವ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು ಜಾರಿಗೊಳಿಸುವುದಾಗಿ ಕಾಂಗ್ರೆಸ್ ಜನರಿಗೆ ಭರವಸೆ ನೀಡಿತ್ತು. ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಅದರ ಮೈತ್ರಿಕೂಟದ ಪಾಲುದಾರ ಜೆಡಿಎಸ್ ಈ ವಿಷಯವನ್ನು ಪ್ರಸ್ತಾಪಿಸುವ ಸಾಧ್ಯತೆಯಿರುವುದರಿಂದ ಕಾಂಗ್ರೆಸ್ ಸರ್ಕಾರವು ಕೇಂದ್ರದ ಹೆಗಲಿಗೆ ಜವಾಬ್ದಾರಿ ಹೊರಿಸುವ ತಂತ್ರಕ್ಕೆ ಶರಣಾಗಿದೆ.
ಕಾಂಗ್ರೆಸ್ ತನ್ನ ಕೆಲಸ ಮಾಡಿದೆ, ರಾಜ್ಯ ಸರ್ಕಾರದ ಈನಿರ್ಧಾರಕ್ಕೆ ಎಸ್ಸಿ ಸಮುದಾಯದ ಜಾತಿಗಳು ಹೇಗೆ ಪ್ರತಿಕ್ರಿಯಿಸುತ್ತವೆ ಎಂಬುದನ್ನು ನೋಡಬೇಕು ಎಂದು ರಾಜಕೀಯ ವಿಶ್ಲೇಷಕರು ಹೇಳಿದ್ದಾರೆ. ಎಸ್‌ಸಿ ಎಡ ಮತ್ತು ಇತರ ಕೆಲವರನ್ನು ಹೊರತುಪಡಿಸಿ, ಭೋವಿಗಳು ಮತ್ತು ಲಂಬಾಣಿಗಳು ಸೇರಿದಂತೆ ಎಲ್ಲಾ ಜಾತಿಗಳು ವರ್ಗೀಕರಣಕ್ಕೆ ವಿರುದ್ಧವಾಗಿವೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ