ಲೋಕ ಸಮರ: 'ಕೈ' ಅಭ್ಯರ್ಥಿಗಳ ಶಾರ್ಟ್ ಲಿಸ್ಟ್ ಬಗ್ಗೆ ಅಪಸ್ವರ; ಸಮರ್ಥರ ಕೊರತೆ ನೀಗಲು ಅಖಾಡಕ್ಕೆ ವರ್ಚಸ್ವಿ ಸಚಿವರು!

ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿದಂತೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಪ್ರದೇಶ ಚುನಾವಣಾ ಸಮಿತಿ (ಪಿಇಸಿ) ಸಭೆ ನಡೆಸಿ ಚರ್ಚಿಸಿತು.
ಕಾಂಗ್ರೆಸ್ ನಾಯಕರ ಸಭೆ
ಕಾಂಗ್ರೆಸ್ ನಾಯಕರ ಸಭೆ

ಬೆಂಗಳೂರು: ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿದಂತೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಪ್ರದೇಶ ಚುನಾವಣಾ ಸಮಿತಿ (ಪಿಇಸಿ) ಸಭೆ ನಡೆಸಿ ಚರ್ಚಿಸಿತು.

ಎಂಎಲ್‌ಸಿ ಬಿ ಕೆ ಹರಿಪ್ರಸಾದ್ ಸೇರಿದಂತೆ ಕೆಲವು ಪಿಇಸಿ ಸದಸ್ಯರು ಶಾರ್ಟ್‌ಲಿಸ್ಟ್ ಬಗ್ಗೆ  ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ, ಆದರೆ ಇದು ಅಂತಿಮ ಪಟ್ಟಿಯಲ್ಲ, ಮತ್ತು  ಗೆಲ್ಲುವ ಅಭ್ಯರ್ಥಿಗಳನ್ನು ಅಂತಿಮವಾಗಿ  ಪಕ್ಷದ ಹೈಕಮಾಂಡ್ ವೈಜ್ಞಾನಿಕ ಸಮೀಕ್ಷೆಯೊಂದಿಗೆ ಆಯ್ಕೆ ಮಾಡಲಿದೆ ಎಂದು ಸುರ್ಜೇವಾಲಾ ತಿಳಿಸಿದ್ದಾರೆ.

ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸುರ್ಜೇವಾಲಾ, "28 ಲೋಕಸಭಾ ಕ್ಷೇತ್ರಗಳ ಆಕಾಂಕ್ಷಿಗಳ ಪಟ್ಟಿ ಪಡೆದಿದ್ದೇವೆ. ಈ ಸಂಭಾವ್ಯ ಅಭ್ಯರ್ಥಿಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು 3 ದಿನಗೊಳಗೆ ಕೊಡಲು ಸೂಚಿಸಿದ್ದೇವೆ. ಪಕ್ಷದ ವತಿಯಿಂದ ಸರ್ವೇ ಮಾಡಿಸಿ, ಈ ತಿಂಗಳಾಂತ್ಯಕ್ಕೆ ನಡೆಯಲಿರುವ ಪಕ್ಷದ ಕೇಂದ್ರ ಚುನಾವಣಾ ಸಮಿತಿ ಸಭೆಗೆ ಅಂತಹ ಹೆಸರುಗಳನ್ನು ಶಿಫಾರಸು ಮಾಡುತ್ತೇವೆ,'' ಎಂದು ತಿಳಿಸಿದರು. ಈ ಹಿಂದೆ ಲೋಕಸಭೆ ಕ್ಷೇತ್ರಗಳ ಉಸ್ತುವಾರಿ ಸಚಿವರು ಸಿದ್ದಪಡಿಸಿದ್ದ ಪಟ್ಟಿ ತಮಗೆ ಸಮಾಧಾನ ತಂದಿಲ್ಲ ಎಂದು  ಡಿಸಿಎಂ ಡಿ.ಕೆ ಶಿವಕುಮಾರ್ ತಿಳಿಸಿದ್ದರು.  ಇನ್ನೂ ಪಟ್ಟಿಯ ಬಗ್ಗೆ ಪ್ರತಿಕ್ರಿಯಿಸಿದ್ದ ಸಿದ್ದರಾಮಯ್ಯ ನಾನು ಮೊದಲ ಬಾರಿಗೆ ಪಟ್ಟಿಯನ್ನು ನೋಡಿದ್ದೇನೆ ಮತ್ತು ಇದು ಅಂತಿಮವಲ್ಲ ಎಂದು  ಸಮರ್ಥಿಸಿಕೊಂಡರು.

ಕೆಲವು ಕ್ಷೇತ್ರಗಳಲ್ಲಿ ನಾಲ್ಕಕ್ಕಿಂತ ಹೆಚ್ಚು ಆಕಾಂಕ್ಷಿಗಳಿದ್ದಾರೆ.  ಇವರುಗಳಲ್ಲಿ ಗೆಲ್ಲಬಹುದಾದ ಅಭ್ಯರ್ಥಿಗಳ ಹೆಸರನ್ನು ಟಿಕ್ ಮಾಡಲು PEC ಸದಸ್ಯರಿಗೆ ತಿಳಿಸಲಾಯಿತು. ಜನವರಿ ಅಂತ್ಯದೊಳಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಬೇಕು ಮತ್ತು ಪಟ್ಟಿಯನ್ನು ಕೇಂದ್ರ ಚುನಾವಣಾ ಸಮಿತಿಗೆ ಕಳುಹಿಸಬೇಕು ಎಂದು ಸುರ್ಜೇವಾಲಾ ಸೂಚಿಸಿದ್ದಾರೆ. ಎಐಸಿಸಿ ಕಾರ್ಯದರ್ಶಿಗಳು ಪ್ರತಿ ಕ್ಷೇತ್ರಕ್ಕೂ ಭೇಟಿ ನೀಡಿ ಹೈಕಮಾಂಡ್‌ಗೆ ಸಲಹೆ ನೀಡಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿ ಆಯ್ಕೆ ಜವಾಬ್ದಾರಿಯನ್ನು ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರಿಗೆ ವಹಿಸಲಾಗಿತ್ತು. ಅವರು ಹಾಗೂ ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರು ಬೆಳಗ್ಗೆ ಖಾಸಗಿ ಹೋಟೆಲ್‌ನಲ್ಲಿ ಪ್ರತ್ಯೇಕ ಸಭೆ ನಡೆಸಿದರು. ಮಾಜಿ ಸಂಸದ ಎಸ್‌ಪಿ ಮುದ್ದಹನುಮೇಗೌಡ ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಮರಳುವ ಸಾಧ್ಯತೆ ಇರುವುದರಿಂದ ಅವರೇ ಪಕ್ಷದ ಟಿಕೆಟ್‌ಗೆ ಮುಂಚೂಣಿಯಲ್ಲಿದ್ದಾರೆ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com