
ಶಿವಮೊಗ್ಗ: ಬಿಜೆಪಿಯಿಂದ ಉಚ್ಚಾಟಯಾಗಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ವಿಜಯದಶಮಿ ವೇಳೆಗೆ ಹೊಸ ಪ್ರಾದೇಶಿಕ ಪಕ್ಷ ಕಟ್ಟುವ ಆಲೋಚನೆಯಲ್ಲಿದ್ದಾರೆ.
ಇತ್ತ ಅವರು ಬಿಜೆಪಿಯಲ್ಲಿರುವಾಗ ಅವರೊಂದಿಗೆ ಗುರುತಿಸಿಕೊಂಡಿದ್ದ ಶಾಸಕರು, ಆಪ್ತರು ಈಗ ನಿಧಾನವಾಗಿ ಯತ್ನಾಳ್ ಅವರಿಂದ ಅಂತರ ಕಾಯ್ದುಕೊಳ್ಳಲು ಮುಂದಾಗಿದ್ದಾರೆ.
ರಾಜ್ಯ ಬಿಜೆಪಿಯಲ್ಲಿ ನಡೆದ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಶಿವಮೊಗ್ಗದ ತಮ್ಮ ನಿವಾಸದಲ್ಲಿ ಮಾತನಾಡಿರುವ ಬಿಜೆಪಿ ಶಾಸಕ ಕುಮಾರ್ ಬಂಗಾರಪ್ಪ, ಯತ್ನಾಳ್ ಉಚ್ಚಾಟನೆಯ ಬಗ್ಗೆಯೂ ಮಾತನಾಡಿದ್ದು, ಅವರನ್ನು ಈಗ ಪಕ್ಷದಿಂದ ವರಿಷ್ಠರು ಉಚ್ಚಾಟಿಸಿದ್ದಾರೆ, ವರಿಷ್ಠರ ನಿರ್ಣಯಕ್ಕೆ ತಾವು ಬದ್ಧರಾಗಿರುತ್ತೇವೆ. ಯತ್ನಾಳ್ ಹೊಸ ಪಕ್ಷ ಕಟ್ಟಿದರೆ ಅವರೊಟ್ಟಿಗೆ ಹೋಗುವ ಆಲೋಚನೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ವಕ್ಫ್ ಹೋರಾಟದಲ್ಲಿ ಯತ್ನಾಳ್ ಪ್ರಮುಖ ಪಾತ್ರ ವಹಿಸಿದ್ದು ನಿಜ, ಆದರೆ ಅವರನ್ನು ಈಗ ಪಕ್ಷದಿಂದ ವರಿಷ್ಠರು ಉಚ್ಚಾಟಿಸಿದ್ದಾರೆ. ವರಿಷ್ಠರ ನಿರ್ಣಯವನ್ನು ಮುಂದುವರಿಸಿಕೊಂಡು ಹೋಗುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಇತ್ತೀಚೆಗೆ ಯತ್ನಾಳ್ ಜೊತೆಗಿದ್ದ ಶಾಸಕರು ಕ್ರಮೇಣ ಯತ್ನಾಳ್ ಅವರಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಇತ್ತೀಚೆಗಷ್ಟೇ ಮಾತನಾಡಿದ್ದ ರಮೇಶ್ ಜಾರಕಿಹೊಳಿ, ಪಕ್ಷಕ್ಕೆ ಮುಜುಗರ ಉಂಟಾಗುವಂತಹ ಹೇಳಿಕೆಗಳನ್ನು ನೀಡದಂತೆ ಯತ್ನಾಳ್ ಅವರಿಗೆ ತಿಳಿಹೇಳುವುದಾಗಿ ಹೇಳಿದ್ದರು.
Advertisement