
ಮೈಸೂರು: ರಾಹುಲ್ ಗಾಂಧಿ ಅಂತವರು ಪ್ರಧಾನಿ ಇದ್ದಿದ್ರೆ, ಅಡುಗೆ ಅನಿಲದ ಬೆಲೆ ರೂ. 850 ರ ಬದಲಿಗೆ 2,500 ದಾಟುತ್ತಿತ್ತು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳುವ ಮೂಲಕ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಅಡುಗೆ ಅನಿಲ ಸಿಲಿಂಡರ್ ಬೆಲೆ ಏರಿಕೆ ಕುರಿತು ಟೀಕೆಗಳ ಬಗ್ಗೆ ಪ್ರತಿಕ್ರಿಯಿಸಿದ ವಿಜಯೇಂದ್ರ, ರೂ. 50 ಹೆಚ್ಚಳದ ನಂತರವೂ ಗ್ಯಾಸ್ ಬೆಲೆ ರೂ. 850 ಆಗಿದೆ. ಆಗಸ್ಟ್ 2023ರಲ್ಲಿ ರೂ. 907 ಬೆಲೆಯಲ್ಲಿ ರೂ. 200 ಕಡಿಮೆ ಮಾಡಲಾಗಿತ್ತು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಹೆಚ್ಚಳ ಹಿನ್ನೆಲೆಯಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಕೇಂದ್ರ ಸರ್ಕಾರ ಏರಿಕೆ ಮಾಡಿದೆ. ಆದರೆ, ಜನರಿಗೆ ಹೊರೆಯಾಗಲ್ಲ ಎಂದರು.
ಉಜ್ವಲ ಯೋಜನೆಯಡಿ ಗುಡಿಸಲುಗಳಲ್ಲಿ ವಾಸಿಸುವ ಬಡವರೂ ಸಹ ಎಲ್‌ಪಿಜಿ ಬಳಸುವಂತಾಗಲು ಪ್ರಧಾನಿ ನರೇಂದ್ರ ಮೋದಿ ಕಾರಣ. ಮಾರ್ಚ್ 2023 ರಲ್ಲಿ ಗ್ಯಾಸ್ ಸಿಲಿಂಡರ್ ಬೆಲೆ ರೂ. 1107 ಇತ್ತು. ರಾಹುಲ್ ಗಾಂಧಿಯಂತಹವರು ಪ್ರಧಾನಿಯಾಗಿದ್ದರೆ ಸಿಲಿಂಡರ್ ಬೆಲೆ 2,500 ರೂ. ಆಗಿರುತಿತ್ತು ಎಂದು ಟೀಕಾ ಪ್ರಹಾರ ನಡೆಸಿದರು.
ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆ ಏರಿಕೆಯ ಆಧಾರದ ಮೇಲೆ ಪೆಟ್ರೋಲ್, ಡೀಸೆಲ್ ಮತ್ತು ಗ್ಯಾಸ್ ಸಿಲಿಂಡರ್‌ಗಳ ಮೇಲೆ ಕೇಂದ್ರ ಸರ್ಕಾರ ನಿರ್ಧಾರಗಳನ್ನು ತೆಗೆದುಕೊಂಡಿದೆ. ಆದರೆ ಹಾಲಿನ ದರವನ್ನು ಹೆಚ್ಚಿಸಿದ್ದು ರಾಜ್ಯ ಸರ್ಕಾರ, ನೀವು ಕಸದ ಮೇಲೆ ತೆರಿಗೆ ವಿಧಿಸುತ್ತಿಲ್ಲವೇ? ನೀರಿನ ಶುಲ್ಕವನ್ನು ಹೆಚ್ಚಿಸಿಲ್ಲವೇ? ಅಂತಾರಾಷ್ಟ್ರೀಯ ಮಾರುಕಟ್ಟೆಯಿಂದ ಹಾಲನ್ನು ಆಮದು ಮಾಡಿಕೊಳ್ಳುತ್ತಿದ್ದೀರಾ?" ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ 48 ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದ್ದು, ಕೇವಲ ಬೆಲೆ ಏರಿಕೆಗಾಗಿಯೇ ಸಿಎಂ ಸಿದ್ದರಾಮಯ್ಯ ತಜ್ಞರ ಸಮಿತಿ ರಚಿಸಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ವಿಜಯೇಂದ್ರ ಟೀಕಿಸಿದರು.
ಈ ರೀತಿ ಬೇರೆ ಯಾವುದೇ ರಾಜ್ಯ ಸರ್ಕಾರ ಜನರನ್ನು ಆರ್ಥಿಕ ಸಂಕಷ್ಟಕ್ಕೆ ತಳ್ಳಿಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಸಿದ್ದರಾಮಯ್ಯ ಅದನ್ನೇ ಮಾಡುತ್ತಿದ್ದಾರೆ. "ಈ ಸರ್ಕಾರಕ್ಕೆ ದಿಕ್ಕೇ ಇಲ್ಲದಂತಾಗಿದೆ. ಪೆಟ್ರೋಲ್, ನೀರು ಮತ್ತು ಡೀಸೆಲ್ ಬೆಲೆಯನ್ನು ಹೆಚ್ಚಿಸಿದ್ದಾರೆ. ಕಸದ ಮೇಲೂ ತೆರಿಗೆ ವಿಧಿಸುತ್ತಿದ್ದಾರೆ. ಹಾಲಿನ ಬೆಲೆ 9 ರೂ. ಏರಿಕೆಯಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ಮೇಲೆ 7.50 ರೂ. ತೆರಿಗೆ ಹೆಚ್ಚಿಸಿದ್ದಾರೆ" 48 ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುವ ಮೂಲಕ ಜನರಿಗೆ ಹೊರೆಯಾಗುತ್ತಿರುವವರು ಸಿದ್ದರಾಮಯ್ಯ ಅಥವಾ ಪ್ರಧಾನಿ ಮೋದಿಯೋ? ನೀವೇ ಹೇಳಿ," ಎಂದು ಜನರನ್ನು ಪ್ರಶ್ನಿಸಿದರು.
Advertisement