ಮುಸ್ಲಿಮರಿಗೆ ಮೀಸಲಾತಿ ಏಕೆ ನೀಡಬಾರದು?: ಪ್ರಧಾನಿ ಮೋದಿಗೆ ಸಿಎಂ ಸಿದ್ದರಾಮಯ್ಯ ತಿರುಗೇಟು
ಬೆಂಗಳೂರು: ಸರ್ಕಾರಿ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಶೇ.4 ರಷ್ಟು ಮೀಸಲಾತಿ ನೀಡುವ ತಮ್ಮ ಸರ್ಕಾರದ ಕ್ರಮವನ್ನು ಬಲವಾಗಿ ಸಮರ್ಥಿಸಿಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರಿಗೆ ಮೀಸಲಾತಿ ಏಕೆ ನೀಡಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶ್ನಿಸಿದ್ದಾರೆ.
ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ದುರ್ಬಲರಾಗಿರುವ ಯಾರಿಗಾದರೂ ಶಕ್ತಿ ತುಂಬುವುದು ಕಾಂಗ್ರೆಸ್ ಪಕ್ಷದ ಧ್ಯೇಯ ಮತ್ತು ಬದ್ಧತೆಯಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಸೋಮವಾರ ಹೇಳಿದ್ದಾರೆ.
ಕುತೂಹಲಕಾರಿಯಾಗಿ, ಪ್ರಧಾನಿ ನರೇಂದ್ರ ಮೋದಿ ಹರಿಯಾಣದ ಹಿಸಾರ್‌ನಲ್ಲಿ ಮಾತನಾಡುತ್ತಾ, ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಗಳ ಹಕ್ಕುಗಳನ್ನು ಕಿತ್ತುಕೊಳ್ಳುತ್ತಿದೆ. ಟೆಂಡರ್‌ಗಳಿಗೆ ಸಂಬಂಧಿಸಿದಂತೆ ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡುತ್ತಿದೆ ಎಂದು ರಾಜ್ಯ ಸರ್ಕಾರದ ಮುಸ್ಲಿಂ ಮೀಸಲಾತಿಯನ್ನು ವಿರೋಧಿಸಿದ್ದರು.
ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡಲು ಸಾಧ್ಯವಿಲ್ಲ ಎಂದು ಸಂವಿಧಾನವು ಸ್ಪಷ್ಟವಾಗಿ ಹೇಳುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದರು.
ಮೋದಿ ಆರೋಪಕ್ಕೆ ಪ್ರತಿಕ್ರಿಯಿಸಿದ ಸಿಎಂ, "ದಲಿತರು, ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರಿಗೆ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಬಲ ತುಂಬಲು, ನಾವು ಗುತ್ತಿಗೆಯಲ್ಲಿ ಮೀಸಲಾತಿ ನೀಡಿದ್ದೇವೆ. ಮೊದಲು ನಾನು ಅದನ್ನು (ಒಪ್ಪಂದಗಳಿಗೆ) 50 ಲಕ್ಷ ರೂ.ಗಳವರೆಗೆ ನೀಡಲಾಗಿತ್ತು. ನಂತರ ಅದನ್ನು 1 ಕೋಟಿ ರೂ.ಗೆ ಹೆಚ್ಚಿಸಿದೆ. ಈಗ ನಾವು ಅದನ್ನು 2 ಕೋಟಿ ರೂ.ಗಳಿಗೆ ಹೆಚ್ಚಿಸಿದ್ದೇವೆ - ಒಬಿಸಿ, ಪ್ರವರ್ಗ 1, 2 ಎ ಮತ್ತು ಮುಸ್ಲಿಮರು ಅಂದರೆ 2 ಬಿಗೆ ಮೀಸಲಾತಿ ನೀಡಲಾಗಿದೆ. ಆದರೆ ಅವರು(ಬಿಜೆಪಿ) ಅದನ್ನು ತುಷ್ಟೀಕರಣ ಎಂದು ಆರೋಪಿಸುತ್ತಿದ್ದಾರೆ" ಎಂದು ಸಿದ್ದರಾಮಯ್ಯ ಹೇಳಿದರು.
ಇಂದು ನಡೆದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ಮುಸ್ಲಿಮರು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಬಲಶಾಲಿಗಳೇ? ಅವರು ವಿದ್ಯಾವಂತರೇ? ಅವರು ಆರ್ಥಿಕವಾಗಿ ಸಮರ್ಥರೇ? ಎಂದು ಪ್ರಶ್ನಿಸಿದ ಸಿಎಂ, ಹಾಗಾದರೆ ಅವರಿಗೆ ಮೀಸಲಾತಿ ಏಕೆ ನೀಡಬಾರದು?" ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ಅವರನ್ನು "ಮೇಲ್ವರ್ಗದ ವಿರೋಧಿ" ಎಂದು ಬಿಂಬಿಸುವ ಸುಳ್ಳು ಪ್ರಚಾರವನ್ನು ಬಿಜೆಪಿ ಮಾಡುತ್ತಿದೆ ಎಂದು ತಿರುಗೇಟು ನೀಡಿದರು.
"ನಾನು ಯಾರನ್ನೂ ವಿರೋಧಿಸುವುದಿಲ್ಲ, ಯಾವುದೇ ಸಮುದಾಯವನ್ನು ವಿರೋಧಿಸುವುದಿಲ್ಲ. ಅವಕಾಶಗಳಿಂದ ವಂಚಿತರಾದವರಿಗೆ, ನ್ಯಾಯ ಸಿಗದವರಿಗೆ ಬೆಂಬಲವಾಗಿ ನಿಲ್ಲುವುದು ನಮ್ಮ ಸಂವಿಧಾನ ಮತ್ತು ಬಾಬಾಸಾಹೇಬ್ ಅಂಬೇಡ್ಕರ್ ಅವರ ಬೋಧನೆಯಾಗಿದೆ" ಎಂದು ಅವರು ಹೇಳಿದರು.
ಇನ್ನು ಪ್ರಧಾನಿ ಮೋದಿ ಹೇಳಿಕೆಗೆ ಪ್ರತಿಕ್ರಿಯಿಸಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, "ಆರ್ಥಿಕವಾಗಿ ದುರ್ಬಲವಾಗಿರುವವನ್ನು ಉನ್ನತೀಕರಿಸುವುದು ಮತ್ತು ಅವರನ್ನು ಮುಖ್ಯವಾಹಿನಿಗೆ ತರುವುದು ಕಾಂಗ್ರೆಸ್ ಮತ್ತು ಸರ್ಕಾರದ ಉದ್ದೇಶವಾಗಿದೆ" ಎಂದು ಹೇಳಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ