ಪಾಕಿಸ್ತಾನದ ಹೆಡೆಮುರಿ ಕಟ್ಟಬಹುದು; ದೇಶದ್ರೋಹಿ ಕಾಂಗ್ರೆಸ್ ನಾಯಕರ ಹರುಕಲು ಬಾಯಿ ಮುಚ್ಚಿಸಲು ಸಾಧ್ಯವಿಲ್ಲ: ಆರ್. ಅಶೋಕ್
ಬೆಂಗಳೂರು: ಪಾಪಿ ಪಾಕಿಸ್ತಾನದ ಹೆಡೆಮುರಿ ಕಟ್ಟಬಹುದು ಆದರೆ, ದೇಶದ್ರೋಹಿ ಕಾಂಗ್ರೆಸ್ ನಾಯಕರ ಹರಕಲು ಬಾಯಿ ಮುಚ್ಚಿಸಲು ಸಾಧ್ಯವಿಲ್ಲ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಆಕ್ರೋಶ ಹೊರ ಹಾಕಿದ್ದಾರೆ.
ಈ ಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ಕಾಂಗ್ರೆಸ್ ವಕ್ತಾರ ಎಂ ಲಕ್ಷ್ಮಣ್ ನೀಡಿರುವ ವಿವಾದಾತ್ಮಕ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಐಡಿ ಕಾರ್ಡ್ ನೋಡಿ, ಧರ್ಮದ ಹೆಸರು ಕೇಳಿ, ಕಲ್ಮಾ ಹೇಳಿಸಿ, ಪ್ಯಾಂಟು ಬಿಚ್ಚಿ ಪರೀಕ್ಷಿಸಿ ಮತಾಂಧ ಉಗ್ರರು ತಮ್ಮ ಕಣ್ಣೆದುರಿಗೇ ಪಾಯಿಂಟ್ ಬ್ಲ್ಯಾಂಕ್ ನಲ್ಲಿ ತಲೆಗೆ ಗುಂಡಿಕ್ಕಿ ತಮ್ಮ ಪತಿಯನ್ನು, ತಂದೆಯನ್ನು ಕೊಂದ ಕಣ್ಣೀರಿನ ಕಥೆ ಹೇಳುತ್ತಿರುವ ಸಂತ್ರಸ್ತ ಮಹಿಳೆಯರು, ಮಕ್ಕಳ ಆಕ್ರಂದನ ನಿಮಗೆ ಕೇಳುತ್ತಿಲ್ಲವೇ ಎಂ.ಲಕ್ಷಣ್ ಅವರೇ? ಎಂದು ಪ್ರಶ್ನಿಸಿದ್ದಾರೆ.
ಇಡೀ ದೇಶವೇ ಕಣ್ಣೀರಿಡುತ್ತಿರುವ ಇಂತಹ ಸಂದರ್ಭದಲ್ಲೂ ನಿಮ್ಮ ಓಲೈಕೆ ರಾಜಕಾರಣ ಮುಂದುವರೆಸುತ್ತಿದ್ದೀರಲ್ಲ ನಿಮ್ಮ ನಾಚಿಕೆಗೇಡುತನಕ್ಕೆ ಏನು ಹೇಳೋಣ. ಗಡಿಯಲ್ಲಿ ಸೇನಾಪಡೆಗಳು ತಮ್ಮ ಪ್ರಾಣವನ್ನೇ ಒತ್ತೆ ಇಟ್ಟು ಪ್ರತೀಕಾರಕ್ಕಾಗಿ ಸಜ್ಜಾಗುತ್ತಿದ್ದರೆ ಇಲ್ಲಿ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ವ್ಯಂಗ್ಯ ಮಾಡುತ್ತಿದ್ದೀರಲ್ಲ ನಿಮ್ಮ ಭಂಡ ಬಾಳಿಗೆ ಏನು ಹೇಳೋಣ. ಧರ್ಮದ ಹೆಸರು ಕೇಳಿ ಕೊಲ್ಲುವ ಉಗ್ರರಿಗೂ, ಸೇನಾಪಡೆಗಳ ಕಾರ್ಯಾಚರಣೆಗೆ ಸಾಕ್ಷಿ ಕೇಳುವ ನಿಮಗೂ ಯಾವುದೇ ವ್ಯತ್ಯಾಸವಿಲ್ಲ ಎಂದು ಕಿಡಿಕಾರಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮತ್ತು ಸಿಎಂ ಸಿದ್ದರಾಮಯ್ಯ ಅವರೇ, ನಿಮ್ಮ INCKarnataka ಪಕ್ಷಕ್ಕೆ ಕಿಂಚಿತ್ತಾದರೂ ದೇಶಭಕ್ತಿ ಇದ್ದರೆ, ಎಳ್ಳಷ್ಟಾದರೂ ರಾಷ್ಟ್ರಪ್ರೇಮ ಇದ್ದರೆ ಈ ಕೊಡಲೇ ಲಕ್ಷಣ್ ಅವರನ್ನ ಪಕ್ಷದಿಂದ ಉಚ್ಚಾಟನೆ ಮಾಡಿ ಎಂದು ಆಗ್ರಹಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ