ಬಿಜೆಪಿ ಜನಾಕ್ರೋಶ ಏನಿದ್ದರೂ ಕೇಂದ್ರದ ವಿರುದ್ಧ ಇರಬೇಕು; ಜನರ ಬದುಕು ಕಾಪಾಡಲು ನಮ್ಮ ಗ್ಯಾರಂಟಿ ಯೋಜನೆ: ಡಿ.ಕೆ ಶಿವಕುಮಾರ್

ಮನಮೋಹನ್ ಸಿಂಗ್ ಅವರ ಕಾಲದಲ್ಲಿ ಮಹಿಳೆಯರು ಮಾಂಗಲ್ಯ ಮಾಡಿಸಿಕೊಳ್ಳುವ ಚಿನ್ನದ ಬೆಲೆ 28 ಸಾವಿರ ರೂ. ಇತ್ತು. ಇಂದು ಅದು 1 ಲಕ್ಷಕ್ಕೆ ಏರಿಕೆಯಾಗಿದೆ. ಬೆಳ್ಳಿ 43 ಸಾವಿರದಿಂದ 94 ಸಾವಿರಕ್ಕೆ ಏರಿಕೆಯಾಗಿದೆ.
DK Shivakumar
ಡಿ.ಕೆ ಶಿವಕುಮಾರ್
Updated on

ಬೆಳಗಾವಿ: ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲ ಬೆಲೆ ಏರಿಕೆ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆ ಮೂಲವಾಗಿದೆ. ಹೀಗಾಗಿ ಜನರ ಆಕ್ರೋಶ ಏನಿದ್ದರೂ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧವಿರಬೇಕು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ಬೆಳಗಾವಿಯ ಸಿಪಿಎಡ್ ಮೈದಾನದಲ್ಲಿ ಸೋಮವಾರ ನಡೆದ ಬೆಲೆ ಏರಿಕೆ ವಿರೋಧಿಸಿ ಹಾಗೂ ಸಂವಿಧಾನ ರಕ್ಷಣೆಗೆ ನಡೆದ ಪ್ರತಿಭಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ದೇಶದ ಸಂವಿಧಾನ, ಏಕತೆ, ಸಮಗ್ರತೆ, ಶಾಂತಿ ರಕ್ಷಿಸಿಕೊಂಡು ಬೆಲೆ ಏರಿಕೆಯಿಂದ ತತ್ತರಿಸುತ್ತಿರುವ ಜನರನ್ನು ಕಾಪಾಡಲು ನಾವು ಈ ಹೋರಾಟ ಮಾಡುತ್ತಿದ್ದೇವೆ. ಬೆಳಗಾವಿ ಪುಣ್ಯಭೂಮಿ. ಇತ್ತೀಚೆಗಷ್ಟೇ ನಾವು ಮಹಾತ್ಮಾ ಗಾಂಧಿ ಅವರ ಎಐಸಿಸಿ ಅಧಿವೇಶನದ ಶತಮಾನೋತ್ಸವ ಕಾರ್ಯಕ್ರಮ ಆಚರಿಸಿದ್ದೆವು. ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಸಿದ್ದರಾಮಯ್ಯ ಅವರು ಸೇರಿದಂತೆ ಎಲ್ಲಾ ಕಾಂಗ್ರೆಸ್ ನಾಯಕರು ಭಾಗವಹಿಸಿದ್ದರು. ಇದೇ ಮೈದಾನದಲ್ಲಿ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಸಮಾವೇಶ ಮಾಡಿದ್ದೆವು ಎಂದು ತಿಳಿಸಿದರು.

ಗಾಂಧಿಜಿ ಅವರು ಇದೇ ಭೂಮಿಯಲ್ಲಿ ದೇಶದ ಸ್ವಾತಂತ್ರ್ಯ ಹೋರಾಟದ ನೇತೃತ್ವ ವಹಿಸಿ ದೇಶಕ್ಕೆ ಸ್ವತಂತ್ರ ತಂದುಕೊಟ್ಟರು. ನಮ್ಮ ಎಲ್ಲಾ ನಾಯಕರು ಸೇರಿ ಇಲ್ಲಿನ ಗಾಂಧಿ ಬಾವಿಯಲ್ಲಿ ನೀರು ತೆಗೆದುಕೊಂಡು ರಸ್ತೆ ಸ್ವಚ್ಛ ಮಾಡಿ ನಮ್ಮ ರಾಜ್ಯದ ರಕ್ಷಣೆ ಮಾಡುವ ಹೋರಾಟ ಪ್ರಾರಂಭಿಸಿದೆವು. ನಮ್ಮ ಜನರ ಧ್ವನಿ ಕೇಳಲು ಹೋರಾಟ ಮಾಡಿದೆವು. ನಂತರ ಐದು ಗ್ಯಾರಂಟಿ ಯೋಜನೆ ಘೋಷಣೆ ಮಾಡಿದೆವು. ಚಿಕ್ಕೋಡಿಯಲ್ಲಿ ಮೊದಲ ಗ್ಯಾರಂಟಿಯಾಗಿ ಗೃಹಜ್ಯೋತಿಯನ್ನು ಘೋಷಿಸಿದೆವು. ಬೆಲೆ ಏರಿಕೆಯಿಂದ ಜನ ತತ್ತರಿಸುತ್ತಿದ್ದಾರೆ, ಬೆಲೆ ಗಗನಕ್ಕೇರುತ್ತಿದೆ, ಆದಾಯ ಪಾತಾಳಕ್ಕೆ ಕುಸಿಯುತ್ತಿದೆ ಎಂದು ಗ್ಯಾರಂಟಿ ಯೋಜನೆ ಜಾರಿಗೆ ತಂದೆವು ಎಂದು ಹೇಳಿದರು.

ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೊದಲ ದಿನವೇ ಗ್ಯಾರಂಟಿ ಯೋಜನೆ ಜಾರಿ ಮಾಡಿದ್ದೇವೆ. ಹಾಲಿನ ಬೆಲೆ ಹೆಚ್ಚಾಗಿದೆ ಎಂದು ಬಿಜೆಪಿಯವರು ನಮ್ಮ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರೆ. ಅವರು ಜನಾಕ್ರೋಶ ಆರಂಭಿಸಿದ ದಿನವೇ ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ಅಡುಗೆ ಅನಿಲ ಬೆಲೆ ಏರಿಸಿದ್ದಾರೆ. ಪೆಟ್ರೋಲ್ ಡೀಸೆಲ್ ಬೆಲೆ ಏರಿದಾಗ ಎಲ್ಲಾ ಪದಾರ್ಥಗಳ ಬೆಲೆ ಕೂಡ ಸಹಜವಾಗಿ ಏರಿಕೆಯಾಗುತ್ತದೆ. ರೈತರಿಗೆ ನೆರವಾಗಬೇಕು ಎಂದು ಹಾಲಿನ ಬೆಲೆಯನ್ನು 4 ರೂಪಾಯಿ ಏರಿಕೆ ಮಾಡಿದರೆ, ಬಿಜೆಪಿಯವರು ಪ್ರತಿಭಟನೆ ಮಾಡಿ ತಮ್ಮ ರೈತ ವಿರೋಧಿ ಮನಸ್ಥಿತಿ ಪ್ರದರ್ಶಿಸುತ್ತಿದ್ದಾರೆ. ಬಿಜೆಪಿಯವರು ತಮ್ಮ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಬೇಕು ಎಂದರು.

DK Shivakumar
ಕಾಂಗ್ರೆಸ್ ಸರ್ಕಾರದಿಂದ ಜನರ ಋಣ ತೀರಿಸುವ ಕೆಲಸ; ರೈತರ ವಿರುದ್ಧವೇ ಬಿಜೆಪಿ ಪ್ರತಿಭಟನೆ: ಡಿ.ಕೆ ಶಿವಕುಮಾರ್

ನಮ್ಮ ಮುಖ್ಯಮಂತ್ರಿಗಳು ಗ್ಯಾರಂಟಿ ಯೋಜನೆಗಾಗಿ ಬಜೆಟ್ ನಲ್ಲಿ ರೂ.52 ಸಾವಿರ ಕೋಟಿ ಮೀಸಲಿಟ್ಟಾಗ ಸರ್ಕಾರ ದಿವಾಳಿಯಾಗಲಿದೆ ಎಂದು ಹೇಳುತ್ತಿದ್ದರು. ನಮ್ಮ ಸರ್ಕಾರ ಎಲ್ಲಾ ಕ್ಷೇತ್ರಗಳಲ್ಲಿ ರೂ.500 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದೆ. ದೇವನಹಳ್ಳಿಯಲ್ಲಿ ಸುಮಾರು ರೂ.500 ಕೋಟಿ ರೂ., ಪಿರಿಯಾಪಟ್ಟಣದಲ್ಲಿ ರೂ,500 ಕೋಟಿ ರೂ., ಬೀದರ್ ಜಿಲ್ಲೆಯಲ್ಲಿ 2025 ಕೋಟಿ ರೂ. ನಷ್ಟು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದೇವೆ ಎಂದರು.

ಮನಮೋಹನ್ ಸಿಂಗ್ ಅವರ ಕಾಲದಲ್ಲಿ ಮಹಿಳೆಯರು ಮಾಂಗಲ್ಯ ಮಾಡಿಸಿಕೊಳ್ಳುವ ಚಿನ್ನದ ಬೆಲೆ 28 ಸಾವಿರ ರೂ. ಇತ್ತು. ಇಂದು ಅದು 1 ಲಕ್ಷಕ್ಕೆ ಏರಿಕೆಯಾಗಿದೆ. ಬೆಳ್ಳಿ 43 ಸಾವಿರದಿಂದ 94 ಸಾವಿರಕ್ಕೆ ಏರಿಕೆಯಾಗಿದೆ. ಡಾಲರ್ ಮೊತ್ತ 59 ರೂ. ನಿಂದ ಇಂದ 90 ರೂ. ಸನಿಹಕ್ಕೆ ಬಂದು ನಿಂತಿದೆ. ಸೀಮೆಂಟ್ 268ರಿಂದ 410ಕ್ಕೆ ಏರಿಕೆ, ಕಬ್ಬಿಣ 39 ಸಾವಿರದಿಂದ 73 ಸಾವಿರಕ್ಕೆ ಏರಿಕೆಯಾಗಿದೆ. ಸಕ್ಕರೆ 30ರಿಂದ 60ಕ್ಕೆ, ಅಕ್ಕಿ 30ರಿಂದ 60ಕ್ಕೆ, ಅಡುಗೆ ಎಣ್ಣೆ 60ರಿಂದ 200 ರೂ. ಆಗಿದೆ. ಈ ಬೆಲೆ ಏರಿಕೆ ವಿರುದ್ಧ ಹೋರಾಟ ಮಾಡಬೇಕು. ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ನಾವು ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು.

“ಸಾಧನೆ ಇಲ್ಲದೆ ಸತ್ತರೆ, ಸಾವಿಗೆ ಅಪಮಾನ. ಆದರ್ಶವಿಲ್ಲದೆ ಬದುಕಿದರೆ, ಬದುಕಿಗೆ ಅಪಮಾನ ಎಂದು ವಿವೇಕಾನಂದ ಅಂವರು ಹೇಳಿದ್ದಾರೆ. ಹೀಗಾಗಿ ನಮ್ಮ ಸರ್ಕಾರ ಆದರ್ಶ ಇಟ್ಟುಕೊಂಡು ನಿಮ್ಮ ಬದುಕನ್ನು ಹಸನು ಮಾಡಲು ನಾವು ಕೊಟ್ಟ ಮಾತಿನಂತೆ ಗ್ಯಾರಂಟಿ ಯೋಜನೆ ಜಾರಿ ಮಾಡಿದ್ದೇವೆ. ನಮ್ಮ ಗ್ಯಾರಂಟಿ ಯೋಜನೆಗಳಿಂದ ಖಜಾನೆ ಖಾಲಿಯಾಗಲಿದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು. ಆದರೆ ನಂತರ ನಡೆದ ಮಹಾರಾಷ್ಟ್ರ, ಮಧ್ಯಪ್ರದೇಶ, ಹರಿಯಾಣ ಸೇರಿದಂತೆ ಎಲ್ಲಾ ರಾಜ್ಯಗಳ ಚುನಾವಣೆಗಳಲ್ಲಿ ಗ್ಯಾರಂಟಿ ಯೋಜನೆಗಳನ್ನು ಅವರೇ ಘೋಷಣೆ ಮಾಡುತ್ತಿದ್ದಾರೆ. ಆಮೂಲಕ ನಮ್ಮ ಯೋಜನೆಗಳು ಕರ್ನಾಟಕ ಮಾಡೆಲ್ ಆಗಿ ದೇಶಕ್ಕೆ ಮಾದರಿಯಾಗಿವೆ” ಎಂದರು.

ಬಿಜೆಪಿ ಸರ್ಕಾರ ಭಾವನೆಗಳ ಮೇಲೆ ರಾಜಕಾರಣ ಮಾಡುತ್ತದೆ. ನಾವು ಬದುಕಿನ ಮೇಲೆ ಕೆಲಸ ಮಾಡುತ್ತಿದ್ದೇವೆ. ಜನರ ಬದುಕು ಕಾಪಾಡಲು ನಮ್ಮ ಸರ್ಕಾರ ಗ್ಯಾರಂಟಿ ಯೋಜನೆ ನೀಡಿದೆ. ಗ್ಯಾರಂಟಿ ಯೋಜನೆಗಳು ಮಾತ್ರವಲ್ಲದೇ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದೇವೆ. ನೀವು ಬಿಜೆಪಿಯವವರಿಗೆ ಈ ಬೆಲೆ ಏರಿಕೆ ಬಗ್ಗೆ ಪ್ರಶ್ನೆ ಮಾಡಬೇಕು.

ಭಯೋತ್ಪಾದಕ ದಾಳಿಯಿಂದ ನಮ್ಮ ಸಹೋದರರು ಮೃತರಾಗಿರುವುದರಿಂದ ದೇಶದೆಲ್ಲೆಡೆ ನಮಗೆ ನೋವಾಗಿದೆ. ದೇಶದ ಐಕ್ಯತೆ, ಸಮಗ್ರತೆ ಕಾಪಾಡಲು ನಮ್ಮ ಪಕ್ಷ ಕೇಂದ್ರ ಸರ್ಕಾರದ ಬೆಂಬಲಕ್ಕೆ ನೀಡಿದೆ. ನಮ್ಮ ಸರ್ಕಾರ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿ, ಮುಖ್ಯಮಂತ್ರಿಗಳು 10 ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ. ನಮ್ಮ ಸರ್ಕಾರ ಎಲ್ಲಾ ವರ್ಗದವರನ್ನು ಒಟ್ಟಾಗಿ ತೆಗೆದುಕೊಂಡು ಮುಂದೆ ಸಾಗುತ್ತಿದೆ” ಎಂದು ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com