ಅಧಿಕಾರ ಇದ್ದಾಗ ನವರಂಗಿ ಆಟ- ಹಗಲುವೇಷ, ವಿರೋಧ ಪಕ್ಷದಲ್ಲಿದ್ದಾಗ ಗೋಸುಂಬೆ ನಾಟಕ- ರೋಷಾವೇಶ: ಆರ್ ಅಶೋಕ್ ಗೆ CM ತಪರಾಕಿ

ಸಾರಿಗೆ ಸಂಸ್ಥೆಗಳ ಇತಿಹಾಸದಲ್ಲಿಯೇ ಮೊದಲ ಬಾರಿಗೆ 15 ದಿವಸಗಳ‌ ಸುದೀರ್ಘ ಮುಷ್ಕರ ನಡೆದಾಗಲೂ ಸಾರಿಗೆ ಸಚಿವರಾಗಿ ಕೈಕಟ್ಟಿ ಕೂತು ತಮ್ಮ ಅಸಾಮರ್ಥ್ಯ ಪ್ರದರ್ಶಿಸಿದ್ದೂ ನೀವೇ ಅಲ್ಲವೇ?
SIddaramaiah and Ashok
ಸಿದ್ದರಾಮಯ್ಯ - ಆರ್ ಅಶೋಕ್
Updated on

ಬೆಂಗಳೂರು: ಅಧಿಕಾರ ಇದ್ದಾಗ ನವರಂಗಿ ಆಟ, ವಿರೋಧ ಪಕ್ಷದಲ್ಲಿದ್ದಾಗ ಗೋಸುಂಬೆ ನಾಟಕ. ಅಧಿಕಾರ ಇದ್ದಾಗ ಹಗಲುವೇಷ, ವಿರೋಧಪಕ್ಷದಲ್ಲಿದ್ದಾಗ ರೋಷಾವೇಶ. ಸನ್ಮಾನ್ಯ ಅಶೋಕ ಅವರೇ,

ಈ ಬಣ್ಣನೆ ನಿಮ್ಮ ಆತ್ಮವಂಚಕ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಈ ಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ಸಾರಿಗೆ ನೌಕರರು ಮೊದಲ ಬಾರಿ ವೇತನ‌ ಪರಿಷ್ಕರಣೆಗಾಗಿ ಮುಷ್ಕರ ನಡೆಸಿದಾಗ ಸಾರಿಗೆ ಸಚಿವರಾಗಿದ್ದವರು ನೀವೇ ಅಲ್ಲವೇ? ಸಾರಿಗೆ ಸಂಸ್ಥೆಗಳ ಇತಿಹಾಸದಲ್ಲಿಯೇ ಮೊದಲ ಬಾರಿಗೆ 15 ದಿವಸಗಳ‌ ಸುದೀರ್ಘ ಮುಷ್ಕರ ನಡೆದಾಗಲೂ ಸಾರಿಗೆ ಸಚಿವರಾಗಿ ಕೈಕಟ್ಟಿ ಕೂತು ತಮ್ಮ ಅಸಾಮರ್ಥ್ಯ ಪ್ರದರ್ಶಿಸಿದ್ದೂ ನೀವೇ ಅಲ್ಲವೇ? ತಮ್ಮ ಪಕ್ಷದ ಅಧಿಕಾರದ ಅವಧಿಯಲ್ಲಿ ಸಾರಿಗೆ ನೌಕರರ ತಿಂಗಳ ವೇತನ ಹೇಗೆ ಪಾವತಿಯಾಗುತ್ತಿತ್ತು ಎಂದು ಮಾಹಿತಿ ಪಡೆದು ತಿಳಿಸುವಿರಾ? ಸಾರಿಗೆ ಸಂಸ್ಥೆಗಳ ಇತಿಹಾಸದಲ್ಲಿಯೇ ಮೊದಲ ಬಾರಿ ಸಾರಿಗೆ ನೌಕರರಿಗೆ ಅರ್ಧ ಸಂಬಳ, ಈ ತಿಂಗಳ ಸಂಬಳ ಮುಂದಿನ ತಿಂಗಳು ನೀಡುತ್ತಿದ್ದಾಗ ಅಧಿಕಾರದಲ್ಲಿದ್ದದ್ದು ನಿಮ್ಮದೇ ಪಕ್ಷ ಅಲ್ಲವೇ?

ನಮ್ಮ ಸರ್ಕಾರದ ಅವಧಿಯಲ್ಲಿ 2012-2016 ರವರೆಗೆ ವೇತನ ಹೆಚ್ಚಳ ಮಾಡಿ ಅದನ್ನು 2012 ರಿಂದಲೇ ಪೂರ್ವಾನ್ವಯ ಆಗುವಂತೆ ಜಾರಿಗೊಳಿಸಿದ್ದೆವು. 2016-2020 ರವರೆಗೆ ವೇತನ ಹೆಚ್ಚಳ ಮಾಡಿದಾಗ 2016 ರಿಂದ ಜಾರಿ ಮಾಡಿದ್ದೆವು.

ಆದರೆ ತಮ್ಮ‌ ಪಕ್ಷದ ಆಡಳಿತದ ಅವಧಿಯಲ್ಲಿ ಸಾರಿಗೆ ನೌಕರರು 2020ರಿಂದಲೇ ವೇತನ ಹೆಚ್ಚಳ ಮಾಡಬೇಕೆಂದು ಬೇಡಿಕೆ ಸಲ್ಲಿಸಿದ್ದರೂ 01-03-2023ರಿಂದ ಜಾರಿಗೊಳಿಸಿ ( ಸರ್ಕಾರದ ಆದೇಶ ಸಂಖ್ಯೆ: ಟಿಡಿ 12 ಟಿಸಿಬಿ 2023, ಬೆಂಗಳೂರು) ನೌಕರರಿಗೆ ಅನ್ಯಾಯ ಮಾಡಿದ್ದು ನೀವೇ ಅಲ್ಲವೇ? ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ನೇಮಕಾತಿ ಮತ್ತು ಹೊಸ ಬಸ್ ಸೇರ್ಪಡೆ ಸ್ಥಗಿತಗೊಂಡಿತ್ತು, ನೌಕರರ ಭವಿಷ್ಯ ನಿಧಿ ಮತ್ತು ಡೀಸೆಲ್ ಹಣ ಪಾವತಿ, ಇತರೆ ಹೊಣೆಗಾರಿಕೆ ಹೀಗೆ ರೂ.5,900 ಕೋಟಿ ಬಾಕಿ ಇತ್ತು ಎಂಬುದರ‌ ಬಗ್ಗೆ ನಿಮಗೆ ಮಾಹಿತಿಯಿದೆಯೇ? ಎಂದು ಪ್ರಶ್ನಿಸಿದ್ದಾರೆ.

ನಿಮ್ಮ ಪಕ್ಷದ ಅಧಿಕಾರವಾಧಿಯಲ್ಲಿ ಸಂಪೂರ್ಣ ಸ್ಥಗಿತಗೊಂಡಿದ್ದ ನೇಮಕಾತಿಗೆ‌ ಚಾಲನೆ ನೀಡಿದವರು ನಾವು. 10,000 ಹೊಸ‌ ನೇಮಕಾತಿ ಮಾಡಿದ್ದೆವು. ಇದರಲ್ಲಿ 8 ವರ್ಷಗಳಿಂದ ಅನುಕಂಪದ ಆಧಾರದ ನೌಕರಿ ನೀಡದಿರುವ 1,000 ಮೃತರ ಅವಲಂಬಿತರು ಇದ್ದಾರೆ. 5,200 ಹೊಸ ಬಸ್ಸುಗಳ ಸೇರ್ಪಡೆ ಮಾಡಿದ್ದೇವೆ. ಕನಿಷ್ಠ ಈ ಮಾಹಿತಿಯಾದರೂ ನಿಮಗೆ ತಿಳಿದಿಯೇ? ತಮ್ಮ ಕಾಲದ ನೌಕರರ ಭವಿಷ್ಯ ನಿಧಿ ಮತ್ತು ಡೀಸೆಲ್‌ ಮೊತ್ತ ಪಾವತಿ ಬಾಕಿ ಪಾವತಿಗಾಗಿ ರೂ.2,000 ಕೋಟಿ ಹಣವನ್ನು ಬ್ಯಾಂಕ್ ಗಳಿಂದ ಸಾಲ‌ ಪಡೆಯಲು ಅವಕಾಶ ಕಲ್ಪಿಸಿ, ಅದರ ಅಸಲು ಮತ್ತು ಬಡ್ಡಿಯನ್ನು ನಮ್ಮ ಸರ್ಕಾರ ಮರುಪಾವತಿ ಮಾಡುತ್ತಿದೆ. ಇದೇನಾ ನಿಮ್ಮ ಕಾಲದ ಸರ್ಕಾರದ ಸಾಧನೆ? ಎಂದು ಕಿಡಿ ಕಾರಿದ್ದಾರೆ.

SIddaramaiah and Ashok
ನಿಮ್ಮ ಘನಂದಾರಿ ಆಡಳಿತದಿಂದ ಸಾರಿಗೆ ನಿಗಮಗಳನ್ನು ಸರ್ವನಾಶ ಮಾಡಿಬಿಟ್ಟರಲ್ಲ ಸ್ವಾಮಿ: ಸಿದ್ದರಾಮಯ್ಯ ವಿರುದ್ಧ BJP ವಾಗ್ದಾಳಿ

ನಾನು ಖುದ್ದಾಗಿ ಕರ್ನಾಟಕ ರಾಜ್ಯ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜೊತೆ ಮಾತುಕತೆ ನಡೆಸಿದ್ದೆ. ಇದಕ್ಕಿಂತ ಮೊದಲು ಸಾರಿಗೆ ಸಚಿವರಾದ ರಾಮಲಿಂಗಾ ರೆಡ್ಡಿಯವರೂ ಸಂಧಾನದ ಪ್ರಯತ್ನ ಮಾಡಿದ್ದಾರೆ. ಆರ್ .ಅಶೋಕ ಅವರೇ, ನಿಮ್ಮ ಪಕ್ಷದ ಅಧಿಕಾರಾವಧಿಯಲ್ಲಿ ರಚಿಸಿದ್ದ ಏಕಸದಸ್ಯ ಸಮಿತಿ ರೂ.718 ಕೋಟಿ ‌ವೇತನ‌ಪರಿಷ್ಕರಣೆ ಬಾಕಿ ನೀಡಲು ಶಿಫಾರಸು ಮಾಡಿತ್ತು. ಆದರೆ ನಿಮ್ಮ ಸರ್ಕಾರ ವೇತನ ಪರಿಷ್ಕರಣೆ ಬಾಕಿಯನ್ನು ಪಾವತಿ ಮಾಡಿರಲಿಲ್ಲ. ಆ ವೇತನ ಪರಿಷ್ಕರಣೆ ಬಾಕಿಯನ್ನು ಪಾವತಿ ಮಾಡಲು ನಮ್ಮ ಸರ್ಕಾರ ಬದ್ದವಾಗಿದೆ. ನಮ್ಮ ಸರ್ಕಾರದ ಈ ನಿಲುವನ್ನು ಸಾರಿಗೆ ನೌಕರರಿಗೆ ತಿಳಿಸಿ ಮುಷ್ಕರ ಕೈಬಿಟ್ಟು ಮುಂದಿನ ದಿನಗಳಲ್ಲಿ ಮಾತುಕತೆ ಮುಂದುವರಿಸಬಹುದು ಎಂದು ಮನವಿ ಮಾಡಿದ್ದರೂ ನೌಕರರ ಸಂಘಟನೆಗಳು ಮುಷ್ಕರ ಹೂಡಿದ್ದಾರೆ.

ನಮ್ಮದು ಕಾರ್ಮಿಕರ ಪರ ಸರ್ಕಾರ, ಅವರ ಹಿತಾಸಕ್ತಿ ಕಾಪಾಡಲು ನಾವು ಬದ್ಧರಾಗಿದ್ದೇವೆ. ಭಾರತೀಯ ಜನತಾ ಪಕ್ಷ ರೈತರು ಮತ್ತು ಕಾರ್ಮಿಕರ ವಿರೋಧಿ ಎನ್ನುವುದಕ್ಕೆ ಇತಿಹಾಸವೇ ಸಾಕ್ಷಿ.

ನಿಮ್ಮ ಮರೆಗುಳಿತನಕ್ಕೆ ನನ್ನ ಅನುಕಂಪ ಇದೆ. ನನ್ನ ಮತ್ತು ನಮ್ಮ ಸರ್ಕಾರದ ವಿರುದ್ಧ ಆರೋಪ ಮಾಡುವ ಮೊದಲು, ಸಾರಿಗೆ ಸಚಿವರಾಗಿ ನೀವು ಮತ್ತು ನಿಮ್ಮ ಸರ್ಕಾರ ರಾಜ್ಯ ರಸ್ತೆ ಸಾರಿಗೆ ನೌಕರರಿಗೆ ಮಾಡಿರುವ ಮೋಸ ಮತ್ತು ದ್ರೋಹದ ಇತಿಹಾಸವನ್ನು ನೆನಪು ಮಾಡಿಕೊಳ್ಳಿ ಎಂದು ತಪರಾಕಿ ಹಾಕಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com