ರಾಹುಲ್ ಗಾಂಧಿ ವಿವೇಚನಾರಹಿತ ಹೇಳಿಕೆ ಬಗ್ಗೆ ಎಲ್ಲರಿಗೂ ಗೊತ್ತು; ಹರಿಪ್ರಸಾದ್ ಓರ್ವ ಪ್ರಬುದ್ಧ ರಾಜಕಾರಣಿ ಅಂದುಕೊಂಡಿದ್ದೆ: ಸಿರೋಯಾ

ಹರಿಪ್ರಸಾದ್ ಅವರು ನ್ಯಾಯಾಧೀಶರನ್ನು ಗುರಿಯಾಗಿಸಿ ಹೇಳಿಕೆ ನೀಡಿದ್ದಾರೆ. ಹರಿಪ್ರಸಾದ್ ಓರ್ವ ಪ್ರಬುದ್ಧ ರಾಜಕಾರಣಿ ಅಂದುಕೊಂಡಿದ್ದೆ. ಅವರಿಂದ ಇದನ್ನು ನಿರೀಕ್ಷೆ ಮಾಡಿರಲಿಲ್ಲ. ಕಾಂಗ್ರೆಸ್ ಪರಂಪರೆಯ ಬಗೆಗಿನ ಅವರ ನಿಷ್ಠೆ ಅರ್ಥವಾಗಬಹುದು.
Lahar Singh Siroya
ಲಹರ್ ಸಿಂಗ್ ಸಿರೋಯಾ
Updated on

ಬೆಂಗಳೂರು: ಭಾರತೀಯ ಸೇನೆ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ರಾಹುಲ್ ಗಾಂಧಿಗೆ ಎಚ್ಚರಿಕೆ ನೀಡಿದ ಸುಪ್ರೀಂ ಕೋರ್ಟ್‌ ವಿರುದ್ಧ ಬಿ.ಕೆ. ಹರಿಪ್ರಸಾದ್ ಆಕ್ಷೇಪ ವ್ಯಕ್ತಪಡಿಸಿರುವುದು ನಿಜಕ್ಕೂ ಆಘಾತಕಾರಿಯಾಗಿದ್ದು, ದುರದೃಷ್ಟಕರ ಎಂದು ಬಿಜೆಪಿಯ ರಾಜ್ಯಸಭಾ ಸದಸ್ಯ ಲಹರ್ ಸಿಂಗ್ ಸಿರೋಯಾ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ಸಾಂವಿಧಾನಿಕ ಹುದ್ದೆಯಲ್ಲಿರುವ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ನೀವು ನಿಜವಾದ ಭಾರತೀಯರಾ ಎಂದು ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರು ಪ್ರಶ್ನಿಸಿರುವುದು ದೇಶದಲ್ಲಿ ನ್ಯಾಯಾಂಗದ ವ್ಯವಸ್ಥೆಯ ಅಧಃಪತನಕ್ಕೆ ಸಾಕ್ಷಿ ಮಾತ್ರವಲ್ಲ, ಸರ್ವಾಧಿಕಾರಿ ಧೋರಣೆಗೆ ನೀಡಿದ ಬೆಂಬಲ ಎಂದು ವಿಧಾನ ಪರಿಷತ್‌‌ನ ಕಾಂಗ್ರೆಸ್ ಸದಸ್ಯ ಬಿ.ಕೆ. ಹರಿಪ್ರಸಾದ್ ಹೇಳಿದ್ದರು.

ಸುಪ್ರೀಂ ಕೋರ್ಟ್ ಹಾಗೂ ಕೆಲವು ಹೈಕೋರ್ಟ್‌ಗಳು ಇತ್ತೀಚೆಗೆ ರಾಜಕೀಯ ಪ್ರೇರಿತ ನಿರ್ದೇಶನ ಹಾಗೂ ನೀಡುತ್ತಿರುವ ತೀರ್ಪುಗಳ ವಿರುದ್ಧ ರಾಷ್ಟ್ರಪತಿ ಅವರು ಮಧ್ಯಪ್ರವೇಶಿಸಿ, ಸಂವಿಧಾನ ಹಾಗೂ ನ್ಯಾಯಾಂಗ ವ್ಯವಸ್ಥೆಯ ನಂಬಿಕೆ ಉಳಿಸಬೇಕಿದೆ' ಎಂದು ಹರಿಪ್ರಸಾದ್ ಅಭಿಪ್ರಾಯ ಪಟ್ಟಿದ್ದರು.

ಇದನ್ನೂ ಉಲ್ಲೇಖ ಮಾಡಿರುವ ಸಿರೋಯಾ, 'ಹರಿಪ್ರಸಾದ್ ಅವರು ನ್ಯಾಯಾಧೀಶರನ್ನು ಗುರಿಯಾಗಿಸಿ ಹೇಳಿಕೆ ನೀಡಿದ್ದಾರೆ. ಹರಿಪ್ರಸಾದ್ ಓರ್ವ ಪ್ರಬುದ್ಧ ರಾಜಕಾರಣಿ ಅಂದುಕೊಂಡಿದ್ದೆ. ಅವರಿಂದ ಇದನ್ನು ನಿರೀಕ್ಷೆ ಮಾಡಿರಲಿಲ್ಲ. ಕಾಂಗ್ರೆಸ್ ಪರಂಪರೆಯ ಬಗೆಗಿನ ಅವರ ನಿಷ್ಠೆ ಅರ್ಥವಾಗಬಹುದು. ಆದರೆ ರಾಷ್ಟ್ರದ ಬಗೆಗಿನ ನಿಷ್ಠೆಯನ್ನು ಪಾಲಿಸಬೇಕು ಎಂದು ಸಿರೋಯಾ ಹೇಳಿದ್ದಾರೆ.

Lahar Singh Siroya
ನಿಜವಾದ ಭಾರತೀಯ ಯಾರೆಂದು ನಿರ್ಧರಿಸುವುದು ಸುಪ್ರೀಂ ಕೋರ್ಟ್ ನ್ಯಾಯಾಧೀಶರ ವ್ಯಾಪ್ತಿಗೆ ಬರುವುದಿಲ್ಲ: ರಾಹುಲ್ ಬೆನ್ನಿಗೆ ನಿಂತ ಪ್ರಿಯಾಂಕಾ

'ರಾಹುಲ್ ಗಾಂಧಿಯವರ ವಿವೇಚನಾರಹಿತ ಹೇಳಿಕೆಗಳು ಎಲ್ಲರಿಗೂ ಗೊತ್ತಿದೆ. ಅವರು ಕಾನೂನಿಗಿಂತ ಮಿಗಿಲಾಗಿಲ್ಲ. ಹಿಂದೊಮ್ಮೆ ಕಾಂಗ್ರೆಸ್ ಅಧ್ಯಕ್ಷರು 'ಭಾರತವೇ ಇಂದಿರಾ ಮತ್ತು ಇಂದಿರಾವೇ ಭಾರತ' ಎಂಬ ಹೇಳಿಕೆ ನೀಡಿದ್ದರು. ಕಾಂಗ್ರೆಸಿನವರು ಇದೇ ಮನಸ್ಥಿತಿಯನ್ನು ಹೊಂದಿದ್ದಾರೆ. ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿ 50 ವರ್ಷಗಳು ಕಳೆದರೂ ತುರ್ತು ಪರಿಸ್ಥಿತಿಯ ಮನಸ್ಥಿತಿ ಇನ್ನೂ ಹೋಗಿಲ್ಲ' ಎಂದಿದ್ದಾರೆ.

'ರಾಹುಲ್ ಗಾಂಧಿ ಗೌರವವನ್ನು ಪಡೆಯಬೇಕಾದರೆ ಅವರೂ ಸಾಂವಿಧಾನಿಕ ಹುದ್ದೆಯು ನಿರೀಕ್ಷಿಸುವ ಪ್ರಬುದ್ಧತೆ, ಸಭ್ಯತೆ ಮತ್ತು ಔಚಿತ್ಯವನ್ನು ಪ್ರದರ್ಶಿಸಬೇಕು. ನನ್ನ ಅರಿವಿನ ಪ್ರಕಾರ ನಮ್ಮ ಸಂವಿಧಾನವು 'shadow prime minister' (ವಿರೋಧ ಪಕ್ಷದ ನಾಯಕ) ಬಗ್ಗೆ ಪ್ರಸ್ತಾಪಿಸುವುದಿಲ್ಲ' ಎಂದು ಉಲ್ಲೇಖಿಸಿದ್ದಾರೆ.

'ಹರಿಪ್ರಸಾದ್ ಅವರ ಹೇಳಿಕೆಯು ನ್ಯಾಯಾಲಯದ ನಿಂದನೆ ಎಂಬುದನ್ನು ನಿರ್ಧರಿಸುವುದು ನನ್ನ ಕೆಲಸವಲ್ಲ. ಆದರೆ ಓರ್ವ ರಾಜಕಾರಣಿಯಾಗಿ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷವು, ಚುನಾವಣಾ ಆಯೋಗ ಹಾಗೂ ಸುಪ್ರೀಂ ಕೋರ್ಟ್‌ನಂತಹ ಸಾಂವಿಧಾನಿಕ ಸಂಸ್ಥೆಗಳ ಮೇಲೆ ದಾಳಿ ನಡೆಸಲು ಯತ್ನಿಸುತ್ತಿದೆ. ಅವರ ಪಕ್ಷವನ್ನು ರಕ್ಷಿಸಲು ಸುಳ್ಳು ಮತ್ತು ಅರಾಜಕತೆಯನ್ನು ಹರಡುತ್ತಿದ್ದಾರೆ' ಎಂದು ಅವರು ಆರೋಪಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com