
ಬೆಂಗಳೂರು: ಬಿಜೆಪಿಯಲ್ಲಿ ಕೆಲವೊಂದಷ್ಟು ಖಾಲಿ ಟ್ರಂಕುಗಳಿವೆ. ಅವು ಕೇವಲ ಶಬ್ದ ಮಾತ್ರ ಮಾಡುತ್ತವೆ. ಬರೀ ಶಬ್ದ ಮಾಡುವವರು ಸಂಸತ್ ನಲ್ಲಿ ಮಾತನಾಡಿ, ಪ್ರಧಾನಮಂತ್ರಿಯವರನ್ನು ಭೇಟಿ ಮಾಡಿ ರಾಜ್ಯಕ್ಕೆ ಹತ್ತು ರೂಪಾಯಿಯಾದರೂ ಅನುದಾನ ತೆಗೆದುಕೊಂಡು ಬರಲಿ ಎಂದು ಡಿ.ಕೆ.ಶಿವಕುಮಾರ್ ಅವರು ಛೇಡಿಸಿದರು.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಬರೀ ಶಬ್ದ ಮಾಡುವವರಿಗೂ ನಾನು ಅನುದಾನದ ವಿಚಾರವಾಗಿ ಎಲ್ಲಾ ಮಾಹಿತಿಗಳನ್ನು ಕಳುಹಿಸಿ ಕೊಡುತ್ತಿದ್ದೇನೆ. ಏಕೆಂದರೆ ಇದುವರೆಗೂ ಯಾರೊಬ್ಬರು ಅನುದಾನ ತಂದಿಲ್ಲ, ತರಲು ಆಸಕ್ತಿಯನ್ನೂ ತೋರಿಲ್ಲ. ಪ್ರಧಾನಿಯವರನ್ನೂ ಭೇಟಿ ಮಾಡಿಲ್ಲ. ರಾಜ್ಯಕ್ಕೆ, ಅದರಲ್ಲೂ ಬೆಂಗಳೂರಿಗಂತೂ ಏನೇನೂ ತಂದಿಲ್ಲ ಎಂದರು.
ಬೆಂಗಳೂರು ಅಭಿವೃದ್ಧಿಗೆ ಅನುದಾನ ನೀಡುವ ಬಗ್ಗೆ ಪ್ರಧಾನಿಯವರ ಬಳಿ ಮಾತನಾಡಿದೆ. ಅವರು ನಮ್ಮ ಮನವಿಯನ್ನು ಗಮನಿಸುವುದಾಗಿ ತಿಳಿಸಿದ್ದಾರೆ. ಅವರು ಮಾತನಾಡಿದ ಶೈಲಿ ನೋಡಿದರೆ ನನಗೆ ಅವರ ಮಾತಿನ ಮೇಲೆ ಭರವಸೆಯಿದೆ. ಬೆಂಗಳೂರು ಜಾಗತಿಕ ನಗರ ಎನ್ನುವುದನ್ನು ಅವರು ಒಪ್ಪಿಕೊಂಡಿದ್ದಾರೆ. ಬೆಂಗಳೂರು ಭಾರತವನ್ನು ಪ್ರತಿನಿಧಿಸುತ್ತದೆ ಎಂದರು.
ಬೆಂಗಳೂರು ಅಭಿವೃದ್ಧಿಗೆ ಎಲ್ಲಾ ಪಕ್ಷಗಳು ಕೊಡುಗೆ ನೀಡಿವೆ. ನಾನು ಒಬ್ಬನೇ ಅಥವಾ ನಮ್ಮ ಸರ್ಕಾರದಿಂದಲೇ ಎಲ್ಲಾ ಆಗಿದೆ ಎಂದು ಹೇಳುವುದಿಲ್ಲ. ಬೆಂಗಳೂರು ದೇಶದಲ್ಲಿಯೇ ಪ್ರಮುಖ ನಗರವಾಗಿದೆ. ಇದನ್ನು ಇನ್ನೂ ಅತ್ಯುತ್ತಮ ನಗರವನ್ನಾಗಿ ಮಾಡುವುದು ನಮ್ಮೆಲ್ಲರ ಜವಾಬ್ದಾರಿ. ಇಲ್ಲಿ ರಾಜಕೀಯಕ್ಕಿಂತ ರಾಜ್ಯದ ಹಿತಾಸಕ್ತಿ ಮುಖ್ಯ ಎಂದು ಹೇಳಿದರು.
ರಾಹುಲ್ ಗಾಂಧಿ ಅವರಿಗೆ ಚುನಾವಣಾ ಆಯೋಗ ನೋಟಿಸ್ ನೀಡಿರುವ ಬಗ್ಗೆ ಕೇಳಿದಾಗ, "ನೋಟಿಸ್ ಕೊಡಲಿ ಬಿಡಿ. ಅಷ್ಟಕ್ಕೂ ನೋಟಿಸ್ ನೀಡಲು ಅವರು ಯಾರು? ನಾವೇ ಅವರಿಗೆ ನೋಟಿಸ್ ನೀಡಿದ್ದೇವೆ. ನಮಗೆ ನೋಟಿಸ್ ನೀಡಲು ಅಧಿಕಾರವಿದೆಯೇ ಹೊರತು ಅವರಿಗಲ್ಲ.
ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನ್ಯಾಯಯುತವಾಗಿ ಚುನಾವಣೆ ಗೆದ್ದಿದ್ದೇವೆ. ನ್ಯಾಯಯುತವಾಗಿ ಚುನಾವಣೆ ನಡೆಸಲು ಅವರಿಗೆ ಅವಕಾಶವಿದೆಯೇ ಹೊರತು ನೋಟಿಸ್ ನೀಡುವ ಹಕ್ಕಿಲ್ಲ. ಏನಿದ್ದರೂ ಕಾನೂನಾತ್ಮಕವಾಗಿ ಉತ್ತರ ನೀಡುತ್ತೇವೆ" ಎಂದು ಖಡಕ್ಕಾಗಿ ಉತ್ತರಿಸಿದರು.
Advertisement