'ಮಾತೇ ಮುತ್ತು, ಮಾತೇ...?': ಮತಗಳ್ಳತನ ಹೇಳಿಕೆಗೆ ಸಚಿವರ ತಲೆದಂಡ; ಯಾರಿಗೂ ಎದೆಗುಂದದ ರಾಜಣ್ಣ ವಿವಾದಗಳ ಸರದಾರ!

ವೋಟರ್ ಲಿಸ್ಟ್ ಯಾವ ಕಾಲದಲ್ಲಿ ಮಾಡಿದ್ದು? ನಮ್ಮದೇ ಸರ್ಕಾರ ಇರುವಾಗ ಮಾಡಿರೋದು ಅಲ್ವಾ? ಆವಾಗ ಎಲ್ಲಾ ಕಣ್ಮುಚ್ಚಿ ಕುಳಿತಿದ್ರಾ? ಎಂದು ತಮ್ಮ ಸರ್ಕಾರವನ್ನೇ ಪ್ರಶ್ನಿಸಿದ್ದರು.
KN Rajanna
ಕೆ.ಎನ್. ರಾಜಣ್ಣ
Updated on

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಕೆ.ಎನ್‌. ರಾಜಣ್ಣ, ಸದಾ ಒಂದಲ್ಲ ಒಂದು ವಿವಾದಾತ್ಮಕ ಹೇಳಿಕೆ ನೀಡುತ್ತಲೇ ಬಂದಿದ್ದರು. ಅವರ ಮಾತಿನ ವಾಗ್ಭಾಣದಿಂದಾಗಿ ಸಚಿವ ಸ್ಥಾನದಿಂದ ನಿರ್ಗಮಿಸಿದ್ದಾರೆ.

ರಾಹುಲ್ ಗಾಂಧಿ ಮತಗಳ್ಳತನದ ಬಗ್ಗೆ ಪ್ರತಿಭಟನೆ ನಡೆಸುತ್ತಿದ್ದರೆ, ತಮ್ಮದೆ ಸರ್ಕಾರದ ವಿರುದ್ಧ ಸಚಿವ ರಾಜಣ್ಣ ಹರಿಹಾಯ್ದಿದ್ದರು. ವೋಟರ್ ಲಿಸ್ಟ್ ಯಾವ ಕಾಲದಲ್ಲಿ ಮಾಡಿದ್ದು? ನಮ್ಮದೇ ಸರ್ಕಾರ ಇರುವಾಗ ಮಾಡಿರೋದು ಅಲ್ವಾ? ಆವಾಗ ಎಲ್ಲಾ ಕಣ್ಮುಚ್ಚಿ ಕುಳಿತಿದ್ರಾ? ಎಂದು ತಮ್ಮ ಸರ್ಕಾರವನ್ನೇ ಪ್ರಶ್ನಿಸಿದ್ದರು. ಮತಪಟ್ಟಿ ಅಕ್ರಮಗಳು ನಡೆದಿರುವುದು ಸತ್ಯ. ಆದರೆ, ಆ ಅಕ್ರಮಗಳು ನಮ್ಮ ಕಣ್ಮುಂದೆನೆ ನಡೆದಿದ್ದಲ್ಲ. ನಮಗೆ ಅವಮಾನ ಆಗಬೇಕು. ನಾವು ನೋಡಿಕೊಳ್ಳಲಿಲ್ಲವಲ್ಲ ಅಂತ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು. ಇದರಿಂದ ಕಾಂಗ್ರೆಸ್​ಗೆ ತೀವ್ರ ಮುಜುಗರ ಉಂಟಾಗಿತ್ತು.‌

ಇನ್ನೂ ಕೆಎನ್ ರಾಜಣ್ಣ ತಮ್ಮ ಪಕ್ಷವನ್ನು ಕೆಣಕಿದ್ದು ಇದೇ ಮೊದಲಲ್ಲ. ಇದೇ ವರ್ಷದ ಬಜೆಟ್ ಮೇಲಿನ ಚರ್ಚೆ ವೇಳೆ ಹನಿಟ್ರ್ಯಾಪ್ ವಿಚಾರ ಪ್ರಸ್ತಾಪಿಸಿದ ಬಿಜೆಪಿಯ ಬಸನಗೌಡ ಪಾಟೀಲ ಯತ್ನಾಳ ಅವರ ಮಾತಿಗೆ ಧ್ವನಿಗೂಡಿಸಿದ್ದ ಅವರು, ಕೆಲವರು ಹನಿಟ್ರ್ಯಾಪ್‌ನ ಖೆಡ್ಡಾಕ್ಕೆ ಬೀಳಿಸಲು ಯತ್ನಿಸಿದ್ದಾರೆ. ಈ ಬಗ್ಗೆ ದಾಖಲೆಗಳಿವೆ. ರಾಜಕೀಯ ಪಕ್ಷದಲ್ಲಿ ಇರುವವರು ತಮ್ಮ ಹಾಗೂ ತಮ್ಮ ಕುಟುಂಬದ ಭವಿಷ್ಯಕ್ಕಾಗಿಯೋ, ಮುಖ್ಯಮಂತ್ರಿ ಆಗಬೇಕೆಂಬ ಕಾರಣಕ್ಕೊ ಹೀಗೆಲ್ಲ ಮಾಡುವುದು ಸರಿಯಲ್ಲ ಎಂದಿದ್ದರು.

ತಮ್ಮನ್ನು ಹನಿಟ್ರ್ಯಾಪ್ ಬಲಿಪಶು ಎಂದು ಘೋಷಿಸಿಕೊಂಡಿದ್ದರು. ಈ ವಿಷಯ ಆಡಳಿತ ಪಕ್ಷದಲ್ಲಿ ಕಂಪನವನ್ನೇ ಎಬ್ಬಿಸಿತ್ತು. ಈ ಹೇಳಿಕೆ ಕಾಂಗ್ರೆಸ್ ಹೈಕಮಾಂಡ್ ಅನ್ನು ಕೆರಳಿಸಿತ್ತು ಎಂದು ತಿಳಿದು ಬಂದಿದೆ. ತಮ್ಮ ಮಗ ಎಂಎಲ್‌ಸಿ ರಾಜೇಂದ್ರ ಅವರನ್ನೂ ಸಿಲುಕಿಸಲು ಯತ್ನಿಸಲಾಗಿದೆ ಎಂಬ ಆರೋಪದ ಬಗ್ಗೆ ಮಾಧ್ಯಮ ವರದಿಗಳು ಬಂದಿದ್ದವು.

KN Rajanna
ರಾಜಣ್ಣ ಉತ್ತಮ ಸ್ನೇಹಿತರು, ನನಗೂ ನೋವಾಗಿದೆ; ಯಾವ ಕಾರಣಕ್ಕೆ ವಜಾ ಮಾಡಿದ್ರೊ ಗೊತ್ತಿಲ್ಲ: ಡಿ.ಕೆ ಶಿವಕುಮಾರ್

ರಾಜಣ್ಣ ಈ ಹಿಂದೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಕೆರಳಿಸಿದ್ದರು, ರಾಜ್ಯಕ್ಕೆ ಇನ್ನೂ ಮೂವರು ಉಪಮುಖ್ಯಮಂತ್ರಿಗಳು ಬೇಕು ಎಂದು ಹೇಳುವ ಮೂಲಕ ಡಿಕೆಶಿ ಬೆಂಬಲಿಗರ ಆಕ್ರೋಶಕ್ಕೆ ಕಾರಣರಾಗಿದ್ದರು. ಬಹಿರಂಗ ಹೇಳಿಕೆ ನೀಡಬಾರದು ಎಂದು ಹೈಕಮಾಂಡ್ ಆದೇಶ ಹೊರಡಿಸಿದ್ದರಿಂದ ಕೋಪದಿಂದ ಕುದಿಯುತ್ತಿದ್ದ ಶಿವಕುಮಾರ್, ರಾಜಣ್ಣ ಹೇಳಿಕೆಗಳನ್ನು ನಯವಾಗಿ ನಿರ್ಲಕ್ಷಿಸಿದ್ದರು.

ರಾಜಣ್ಣ ಅವರ ಸಂಪುಟ ಸಹೋದ್ಯೋಗಿಗಳ ಬಗ್ಗೆ, ವಿಶೇಷವಾಗಿ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರ ಬಗ್ಗೆಗಿನ, ಕೆಲವೊಮ್ಮೆ ತೀಕ್ಷ್ಣವಾದ ಹೇಳಿಕೆಗಳು ಹಲವು ಬಾರಿ ಪಕ್ಷಕ್ಕೆ ಇರಿಸು ಮುರಿಸು ಉಂಟು ಮಾಡಿದ್ದವು, ಪರಮೇಶ್ವರ ಮತ್ತು ರಾಜಣ್ಣ ತಮ್ಮ ಕ್ಯಾಂಪಸ್ ದಿನಗಳಿಂದಲೂ ಪರಸ್ಪರ ಪರಿಚಿತರು ಎಂದು ವರದಿಯಾಗಿದೆ.

ಮಂಡಳಿ ಮತ್ತು ನಿಗಮಗಳಿಗೆ ಮುಖ್ಯಸ್ಥರನ್ನು ನೇಮಿಸುವಲ್ಲಿ ವಿಳಂಬ ಮಾಡಿದ್ದಕ್ಕಾಗಿ ಮಧುಗಿರಿ ಶಾಸಕರ ರಾಜಣ್ಣ ತಮ್ಮದೇ ಪಕ್ಷವನ್ನು ಸಾರ್ವಜನಿಕವಾಗಿ ಟೀಕಿಸಿದರು. ಆಗಸ್ಟ್-ಸೆಪ್ಟೆಂಬರ್‌ನಲ್ಲಿ 'ರಾಜಕೀಯ ಕ್ರಾಂತಿ' ನಡೆಯಲಿದೆ ಎಂದು ಅವರು ಮುನ್ಸೂಚನೆ ನೀಡಿದ್ದರು, ಇದು ಕಾಂಗ್ರೆಸ್ ಮತ್ತೊಮ್ಮೆ ಪರಿಣಾಮವನ್ನು ತಡೆಯಲು ಪರದಾಡುವಂತೆ ಮಾಡಿದ ನಿಗೂಢ ಭವಿಷ್ಯವಾಣಿಯಾಗಿದೆ.

ಯಾವುದೇ ವಿಷಯದಲ್ಲಿಯೂ ಹಿಂದೆ ಮುಂದೆ ನೋಡದೆ ತಮಗೆ ಅನ್ನಿಸಿದ್ದನ್ನು ಹೇಳುವ ಎದೆಗಾರಿಕೆಯಿದ್ದ ಕೆ.ಎನ್. ರಾಜಣ್ಣ ಹೈಕಮಾಂಡ್ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ತಮ್ಮದೆ ಅಸಂಬದ್ಧ ಮಾತುಗಳಿಂದ ಸಚಿವ ಸ್ಥಾನ ಕಳೆದುಕೊಂಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com