
ಮಧುಗಿರಿ: ಇತ್ತೀಚೆಗೆ ಸಚಿವ ಸ್ಥಾನ ಕಳೆದುಕೊಂಡ ಕಾಂಗ್ರೆಸ್ ಹಿರಿಯ ನಾಯಕ ಕೆ.ಎನ್. ರಾಜಣ್ಣ, ಕೊನೆಗೂ ಅಧಿಕಾರ ನಷ್ಟದ ಬಗ್ಗೆ ಮೌನ ಮುರಿದಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಡವರ ಪರ ಆಡಳಿತ ನೀಡಿದ ದೇವರಾಜ ಅರಸು ಮತ್ತು ಬಡವರ ಮಕ್ಕಳಿಗೆ ಅನುಕೂಲವಾಗಲೆಂದು ಸಿಇಟಿ ಜಾರಿಗೆ ತಂದ ವೀರಪ್ಪ ಮೊಯ್ಲಿ ಅವರಂತಹ ಮಹಾನ್ ನಾಯಕರನ್ನೇ ಅಧಿಕಾರದಿಂದ ಕೆಳಗೆ ಇಳಿಸಲಾಗಿದೆ. ಅವರ ಮುಂದೆ ನನ್ನ ಅಧಿಕಾರ ದೊಡ್ಡದಲ್ಲ ಎಂದು ಹೇಳಿದರು.
ನನ್ನ ಸಚಿವ ಸ್ಥಾನ ಹೋಗಿರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೂಷಿಸುವುದು ಸರಿಯಲ್ಲ. ಅಧಿಕಾರ ಕಳೆದುಕೊಳ್ಳಲು ಹಲವು ಕಾರಣಗಳಿವೆ. ಅವುಗಳನ್ನು ಸಮಯ ಬಂದಾಗ ಬಹಿರಂಗಪಡಿಸುತ್ತೇನೆ ಎಂದು ಅವರು ನಿಗೂಢವಾಗಿ ನುಡಿದರು.
ತದನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆ.ಎನ್. ರಾಜಣ್ಣ, ನನ್ನನ್ನು ಸಚಿವ ಸ್ಥಾನದಿಂದ ಇಳಿಸಲು ದೆಹಲಿಯಲ್ಲಿ ಮೂವರು ವ್ಯವಸ್ಥಿತವಾಗಿ ಪಿತೂರಿ ಮಾಡಿದ್ದಾರೆ. ಪಿತೂರಿ ವಿದ್ಯೆ ನನಗೂ ಗೊತ್ತಿದೆ. ಈ ಸಂದರ್ಭದಲ್ಲಿ ಅದನ್ನು ಬಳಸುವುದಿಲ್ಲ, ಮುಂದೆ ಕಾಲ ಬರುತ್ತಿದೆ ಎಂದು ಮಾರ್ಮಿಕವಾಗಿ ಹೇಳಿದರು.
ವಿಧಾನಸಭೆ ಅಧಿವೇಶನ ಮುಗಿದ ನಂತರ ದೆಹಲಿಗೆ ಹೋಗಿ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಎಲ್ಲ ವಿಚಾರ ತಿಳಿಸುತ್ತೇನೆ. ಸಮಯ ಬಂದಾಗ ಸಚಿವ ಸ್ಥಾನ ತೆಗೆದುಕೊಳ್ಳುತ್ತೇನೆ. ಇದೇ ಅವಧಿಯಲ್ಲಿ ಸಚಿವನಾಗುತ್ತೇನೆ ಎಂಬ ಭರವಸೆ ವ್ಯಕ್ತಪಡಿಸಿದರು.
Advertisement