
ಬೆಂಗಳೂರು: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದ ಆರೋಪಗಳ ತನಿಖೆಗಾಗಿ ವಿಶೇಷ ತನಿಖಾ ತಂಡ(ಎಸ್‌ಐಟಿ) ರಚಿಸಲು ತಮ್ಮ ಮೇಲೆ ಯಾರು ಒತ್ತಡ ಹೇರಿದರು ಎಂಬುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಬೇಕೆಂದು ಬಿಜೆಪಿ ಅಧ್ಯಕ್ಷ ಬಿ ವೈ ವಿಜಯೇಂದ್ರ ಅವರು ಸೋಮವಾರ ಒತ್ತಾಯಿಸಿದ್ದಾರೆ.
ಹಲವಾರು ಶವಗಳನ್ನು ತಾನೇ ಹೂತು ಹಾಕಿರುವುದಾಗಿ ಆರೋಪಿಸಿರುವ ಅನಾಮಧೇಯ ದೂರುದಾರನ ಹೇಳಿಕೆಯ ಆಧಾರದ ಮೇಲೆ ಶವಗಳನ್ನು ಹೊರತೆಗೆಯುವ ಕಾರ್ಯ ನಡೆಯುತ್ತಿರುವ ಮಧ್ಯೆಯೇ ಬಿಜೆಪಿ ರಾಜ್ಯಾಧ್ಯಕ್ಷರ ಈ ಹೇಳಿಕೆ ಬಂದಿದೆ.
ವಿಜಯೇಂದ್ರ ಅವರ ಪ್ರಕಾರ, ಮಂಜುನಾಥಸ್ವಾಮಿ ದೇವಸ್ಥಾನವಿರುವ ದೇವಾಲಯ ಪಟ್ಟಣ ಧರ್ಮಸ್ಥಳದ ವಿರುದ್ಧ "ದೊಡ್ಡ ಪಿತೂರಿ" ನಡೆಯುತ್ತಿದೆ.
ಮುಖ್ಯಮಂತ್ರಿಗಳು ಎರಡು ವಾರಗಳ ಹಿಂದೆ ತಾವು ಎಸ್‌ಐಟಿ ರಚಿಸುವುದಿಲ್ಲ ಎಂದು ಹೇಳಿದ್ದರು. ಆದರೆ ಮರುದಿನವೇ ಅವರು ತಮ್ಮ ನಿಲುವು ಬದಲಾಯಿಸಿ ಎಸ್ಐಟಿ ರಚಿಸಿದರು ಎಂದರು.
ಎಸ್ಐಟಿ ರಚಿಸಲು ಸಿದ್ದರಾಮಯ್ಯ ಅವರ ಮೇಲೆ ಯಾರು ಒತ್ತಡ ಹೇರಿದರು? ಇದು ಕರ್ನಾಟಕದ ಜನರಿಗೆ ಮುಖ್ಯಮಂತ್ರಿಯೇ ಉತ್ತರಿಸಬೇಕು ಎಂದು ವಿಜಯೇಂದ್ರ ಅವರು ಸುದ್ದಿಗಾರರಿಗೆ ತಿಳಿಸಿದರು.
ಧರ್ಮಸ್ಥಳ ವಿಷಯದ ಬಗ್ಗೆ ಮಾತನಾಡಲು ಒತ್ತಡ ಹೇರಲಾಗಿದೆ ಎಂದು ಮುಸುಕುಧಾರಿ ದೂರುದಾರ ಹೇಳಿದ್ದಾರೆ ಎಂದು ಆರೋಪಿಸಿರುವ ವಿಜಯೇಂದ್ರ, ಇದು ಪ್ರಕರಣದ ವಿಶ್ವಾಸಾರ್ಹತೆಯ ಬಗ್ಗೆ ಗಂಭೀರ ಅನುಮಾನಗಳನ್ನು ಹುಟ್ಟುಹಾಕಿದೆ ಎಂದಿದ್ದಾರೆ.
ಈ ಘಟನೆಯ ಹಿಂದೆ "ದೊಡ್ಡ ಪಿತೂರಿ" ಇದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇತ್ತೀಚೆಗೆ ನೀಡಿದ್ದ ಹೇಳಿಕೆಯನ್ನು ಉಲ್ಲೇಖಿಸಿ, ಪ್ರಕರಣದಲ್ಲಿ ಭಾಗಿಯಾಗಿರುವವರ ಹೆಸರುಗಳನ್ನು ಬಹಿರಂಗಪಡಿಸುವಂತೆ ಒತ್ತಾಯಿಸಿದರು.
ಎಸ್‌ಐಟಿ ತನಿಖೆ ನಡೆಸಿದ ರೀತಿ, ಸುಳ್ಳು ಪ್ರಚಾರವನ್ನು ಹರಡಿದ ರೀತಿ ಮತ್ತು ಅದು ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಾಧ್ಯಮಗಳ ಗಮನ ಸೆಳೆದ ರೀತಿಯಿಂದ ಧರ್ಮಸ್ಥಳದ ಕೋಟ್ಯಂತರ ಭಕ್ತರಿಗೆ ನೋವುಂಟಾಗಿದೆ ಎಂದರು.
Advertisement