
ಬೆಂಗಳೂರು: ಪ್ರತಿಷ್ಠಿತ ಬೂಕರ್ ಪ್ರಶಸ್ತಿ ವಿಜೇತ ಸಾಹಿತಿ ಬಾನು ಮುಷ್ತಾಕ್ ಅವರು ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನೆಗೆ ಸಂಬಂಧಿಸಿದಂತೆ ಆಡಳಿತರೂಢ ಕಾಂಗ್ರೆಸ್ ಹಾಗೂ ಪ್ರತಿಪಕ್ಷ ಬಿಜೆಪಿ ನಡುವೆ ತೀವ್ರ ವಾಕ್ಸಮರಕ್ಕೆ ಕಾರಣವಾಗಿದೆ.
ಬಾನು ಮುಷ್ತಾಕ್ ಹಿಂದೂ ಸಂಸ್ಕೃತಿ, ಸಂಪ್ರದಾಯಗಳು ಮತ್ತು ಆಚರಣೆಗಳನ್ನು ಸ್ವೀಕರಿಸುತ್ತಾರೆಯೇ? ಎಂದು ಬಿಜೆಪಿ ಪ್ರಶ್ನಿಸಿದೆ. ಆದರೆ ಅವರು ನಂಬುತ್ತಾರೋ ಇಲ್ಲವೋ ಎಂಬುದು ಪ್ರಶ್ನೆಯಲ್ಲ. ಇದು ನಾಡಹಬ್ಬವಾಗಿದ್ದು, ಒಂದು ಜಾತಿ ಅಥವಾ ಧರ್ಮಕ್ಕೆ ಸೀಮಿತವಾಗಿಲ್ಲ. ಎಲ್ಲರೂ ಸೇರಿಯೇ ಆಚರಿಸಬೇಕು ಎಂದು ಕಾಂಗ್ರೆಸ್ ನೇತೃತ್ವದ ಸರ್ಕಾರ ತಿರುಗೇಟು ನೀಡಿದೆ.
ಇಂದು ಬಿಜೆಪಿ ರಾಜ್ಯ ಕಚೇರಿ ಜಗನ್ನಾಥ ಭವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ, “ಬಾನು ಮುಷ್ತಾಕ್ ಅವರು ನಮ್ಮ ಹಿಂದೂ ಸಂಸ್ಕೃತಿ, ಸಂಪ್ರದಾಯಗಳು ಮತ್ತು ಆಚರಣೆಗಳನ್ನು ಒಪ್ಪಿಕೊಂಡು ಅವುಗಳಲ್ಲಿ ನಂಬಿಕೆ ಇಟ್ಟರೆ, ನಾವು ಅವರನ್ನು ಸ್ವಾಗತಿಸುತ್ತೇವೆ” ಎಂದು ಹೇಳಿದರು.
“ಬಾನು ಮುಷ್ತಾಕ್ ಮತ್ತು ಅನುವಾದಕಿ ಕೊಡಗಿನ ದೀಪಾ ಭಸ್ತಿ ಇಬ್ಬರೂ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ ಪಡೆದಿದ್ದಾರೆ. ರಾಜ್ಯ ಸರ್ಕಾರ ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಜೊತೆಗೆ ಕೊಡಗಿನ ದೀಪಾ ಭಸ್ತಿ ಅವರನ್ನು ಆಹ್ವಾನಿಸಬೇಕಿತ್ತು. ಸಿದ್ದರಾಮಯ್ಯ ಅವರಿಗೆ ಕೊಡಗಿನ ಬಗ್ಗೆ ಹೆಚ್ಚು ಆಸಕ್ತಿ ಇಲ್ಲವೇ?” ಎಂದು ವಿಜಯೇಂದ್ರ ಪ್ರಶ್ನಿಸಿದರು.
“ಒಬ್ಬ ಬರಹಗಾರ್ತಿಯಾಗಿ, ನಾವು ಅವರನ್ನು ಗೌರವಿಸುತ್ತೇವೆ. ಆದರೆ, ಅವರು ನಮ್ಮ ಸಂಪ್ರದಾಯ, ಆಚರಣೆಗಳು ಅಥವಾ ಧಾರ್ಮಿಕ ಭಾವನೆಗಳನ್ನು ಒಪ್ಪಿಕೊಂಡಿದ್ದರೆ, ಅದು ಬೇರೆಯದೇ ವಿಷಯವಾಗುತ್ತಿತ್ತು. ಈ ಹಿಂದೆ, ಲೇಖಕ ನಿಸಾರ್ ಅಹ್ಮದ್ ದಸರಾವನ್ನು ಉದ್ಘಾಟಿಸಿದ್ದರು” ಎಂದು ಅವರು ಹೇಳಿದರು.
ಇನ್ನೂ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ ಗೃಹ ಸಚಿವ ಜಿ. ಪರಮೇಶ್ವರ, ಸರ್ ಮಿರ್ಜಾ ಇಸ್ಲಾಮಿಯಲ್ ದಿವಾನರಾಗಿ ದಸರಾ ಮಾಡಿಲ್ಲವೇ? ಕವಿ ನಿಸಾರ್ ಅಹ್ಮದ್ ದಸರಾವನ್ನು ಉದ್ಘಾಟಿಸಿಲ್ಲವೇ?. ಇದಕ್ಕೆಲ್ಲಾ ಆಕ್ಷೇಪ ವ್ಯಕ್ತಪಡಿಸಬಾರದು. ನಾವು ನಾಡ ಹಬ್ಬವನ್ನು ಆಚರಿಸುವಾಗ ಧರ್ಮ ಅಥವಾ ಜಾತಿಯನ್ನು ನೋಡುವುದಿಲ್ಲ. ಅಂತಹ ಬೆಳವಣಿಗೆ ಒಳ್ಳೆಯದಲ್ಲ” ಎಂದರು.
ಇದು 'ನಾಡ ಹಬ್ಬ', ಇದು ಈ ನೆಲದ ಹಬ್ಬ. ಇದನ್ನು ಬಹಳ ಸಮಯದಿಂದ ಆಚರಿಸಿಕೊಂಡು ಬರಲಾಗುತ್ತಿದೆ. ನೀವು ಧಾರ್ಮಿಕ ವಿಷಯಗಳನ್ನು ಏಕೆ ಇದರಲ್ಲಿ ತರುತ್ತಿದ್ದೀರಿ? ಸಮಾಜದ ಒಂದು ವರ್ಗವನ್ನು ಹೊರಗೆ ಇಟ್ಟುಕೊಂಡು ನೀವು ಹಬ್ಬವನ್ನು ಆಚರಿಸುತ್ತೀರಾ?" ಎಂದು ಪರಮೇಶ್ವರ ಅವರು ಬಿಜೆಪಿ ಪ್ರಶ್ನಿಸಿದರು.
ಬಾನು ಮುಷ್ತಾಕ್ ಚಾಮುಂಡೇಶ್ವರಿ ದೇವಿಯನ್ನು ನಂಬುತ್ತಾರೆಯೇ? ಎಂದು ಪ್ರಶ್ನಿಸಿದಾಗ, "ಚಾಮುಂಡೇಶ್ವರಿ ದೇವಿಯನ್ನು ನಂಬುವುದು ಬಿಡುವುದು ಉದ್ಘಾಟಕರಿಗೆ ಬಿಟ್ಟಿದ್ದು. ಇಲ್ಲಿ ನಂಬಿಕೆ ಮುಖ್ಯವಲ್ಲ. ಇದು ಈ ನೆಲದ ಹಬ್ಬ ಮತ್ತು ನಾವು ಎಲ್ಲರನ್ನೂ ಆಹ್ವಾನಿಸುತ್ತೇವೆ" ಎಂದರು.
Advertisement