
ಬೆಂಗಳೂರು: ಸತ್ಯ ಹೇಳಿದರೆ ಕೆಲವರು ಸಹಿಸಲ್ಲ, ಹೀಗಾಗಿ ನಾನು ಮಾತನಾಡದಿರುವುದೇ ಉತ್ತಮ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ದಸರಾ ಉದ್ಘಾಟಕರ ಆಯ್ಕೆ ವಿಚಾರವಾಗಿ ಬಿಜೆಪಿ ಮುಖಂಡ ಬಿ.ಎಲ್. ಸಂತೋಷ್ ಅವರ ಸಾಮಾಜಿಕ ಜಾಲತಾಣದಲ್ಲಿನ ಪೋಸ್ಟ್ ಬಗ್ಗೆ ಕೇಳಿದಾಗ, "ನಾನು ಸದನದಲ್ಲಿ ಸೇರಿದಂತೆ ಎಲ್ಲಿ ಏನೇ ಮಾತನಾಡಿದರು ಅದರಲ್ಲಿ ಕೇವಲ ತಪ್ಪು ಕಂಡು ಹಿಡಿಯುವುದೇ ಬೇರೆಯವರ ಕೆಲಸವಾಗಿದೆ.
ರಾಜಕೀಯದವರು, ಮಾಧ್ಯಮಗಳು, ಪ್ರಮೋದಾ ದೇವಿ ಅವರು, ಸಂಸದ ಯದುವೀರ್ ಅವರು - ಹೀಗೇ ಎಲ್ಲರೂ ತಪ್ಪು ಹುಡುಕುವವರೇ. ಹೀಗಾಗಿ ನಾನು ಮಾತನಾಡದಿರುವುದೇ ಲೇಸು ಅನಿಸುತ್ತದೆ. ಈ ವಿಚಾರಗಳ ಬಗ್ಗೆ ಪ್ರತಿಕ್ರಿಯಿಸಲು ಬೇರೆ ನಾಯಕರು ಹಾಗೂ ಪಕ್ಷದ ವಕ್ತಾರರಿದ್ದಾರೆ. ಅವರ ಬಳಿ ಮಾತನಾಡಿ" ಎಂದು ಹೇಳಿದರು.
ಸಾಮಾಜಿಕ ಅಸ್ಥಿರತೆ ಹಾಗೂ ಅಸ್ವಸ್ಥತೆ ನಿರ್ಮಿಸುವ ಸಮಾನ ಮನಸ್ಕರ ( ನಗರ ನಕ್ಸಲರ ) ಮೊದಲ ಗುರಿ ಹಿಂದೂ ಶ್ರದ್ಧಾ ಕೇಂದ್ರಗಳು ಮತ್ತು ನಂಬಿಕೆಗಳು. ಇತ್ತೀಚಿನ ಸೇರ್ಪಡೆ ಚಾಮುಂಡಿ ಬೆಟ್ಟ ಹಾಗೂ ದಸರಾ ಉತ್ಸವ ಎಂದು ಬಿಜೆಪಿ ಮುಖಂಡ ಬಿ ಎಲ್ ಸಂತೋಷ್ ತಮ್ಮ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.
ಈ ಮೂಲಕ ಕರ್ನಾಟಕ ಸರ್ಕಾರವು ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಅವರನ್ನು ನೇಮಕ ಮಾಡಿರುವುದಕ್ಕೆ ಹಾಗೂ ಚಾಮುಂಡಿ ಬೆಟ್ಟ ಕೇವಲ ಹಿಂದೂಗಳ ಆಸ್ತಿಯಲ್ಲ ಎಂಬ ಡಿಕೆ ಶಿವಕುಮಾರ್ ಹೇಳಿಕೆಗೆ ಬಿಎಲ್ ಸಂತೋಷ್ ಪರೋಕ್ಷವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ದಸರಾ ಉದ್ಘಾಟಕರ ಆಯ್ಕೆ ವಿಚಾರವಾಗಿ ಬಿಎಲ್ ಸಂತೋಷ್ ಅವರ ಪೋಸ್ಟ್ ಬಗ್ಗೆ ಪ್ರತಿಕ್ರಿಯೆ ನೀಡಲು ಡಿಕೆ ಶಿವಕುಮಾರ್ ನಿರಾಕರಣೆ ಮಾಡಿದ್ದಾರೆ. ಸತ್ಯ ಹೇಳಿದರೆ ಕೆಲವರು ಸಹಿಸಲ್ಲ, ನಾನು ಮಾತನಾಡದಿರುವುದೇ ಉತ್ತಮ ಎಂದಿದ್ದಾರೆ.
Advertisement